ಬೆಂಗಳೂರು : ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ, ಸ್ವಪಕ್ಷದವರ ಕಿರುಕುಳ ಸಹಿತಿಕೊಂಡು ಸತತ 8ವರ್ಷಗಳಿಂದ ಕೆಪಿಸಿಸಿ ಹುದ್ದೆ ನಿಬಾಯಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದ ಡಿಕೆ ಶಿವಕುಮಾರಗೆ ಇದು ಅಗ್ನಿಪರೀಕ್ಷೆ ಕಾಲ. ಒಂದೆಡೆ ಪಾರ್ಟಿ ಉಳಿಸುವ ಜತೆಗೆ ಸರ್ಕಾರ ಬೆಳೆಸಿ, ಮುಖ್ಯಮಂತ್ರಿ ಹುದ್ದೆ ಪಡೆಯಬೇಕು. ವಿರೋಧ ಪಕ್ಷದ ನಾಯಕರ ಟೀಕೆ ಜತೆಗೆ ಸ್ವಪಕ್ಷದ ನಾಯಕರ ಬಂಡಾಯ ತಣೆಯುವಲ್ಲಿ ಯಶಸ್ವಿಯಾದ ಡಿಕೆಶಿ ಈಗ ದೇವರ ಮೇಲೆ ಭಾರ ಹಾಕಿದ್ದಾರೆ. ಹಾಗಾದ್ರೆ ಡಿಕೆಶಿ ದೇವರ ಮೊರೆ ಹೋಗಿದ್ಯಾಕೆ? ಹೈಕಮಾಂಡ್ ಕೊನೇ ಗಳಿಗೆಯಲ್ಲಿ ಕೈ ಕೊಡುತ್ತಾ? ಈ ಕುರಿತು ಸ್ಟೋರಿ ಇಲ್ಲಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ, ಅಧಿಕಾರ ಹಸ್ತಾಂತರ ಚರ್ಚೆ ಹಾಗೂ ಸಚಿವರ ಡಿನ್ನರ್ ಪಾರ್ಟಿ ಪಾಲಿಟೆಕ್ಸ್ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ. ಗುರುವಾರ ತಮಿಳುನಾಡಿನ ಎರಡು ಪ್ರಸಿದ್ದ ದೇವಸ್ಥಾನಕ್ಕೆ ಭೇಟಿ ನೀಡಲಿದ್ದು, ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ. ಗುರುವಾರ ತಮಿಳುನಾಡಿನ ಕುಂಬಕೋಣಂ ಹಾಗೂ ಕಾಂಚಿಪುರಂ ದೇವಸ್ಥಾನಗಳಿಗೆ ಡಿಕೆ ಶಿವಕುಮಾರ್ ತೆರಳಲಿದ್ದಾರೆ. ಬೆಳಿಗ್ಗೆ 10:30ಕ್ಕೆ ಕುಂಬಕೋಣಂನಲ್ಲಿ ಪ್ರತ್ಯಂಗಿರ ದೇವಿಗೆ ವಿಶೇಷ ಪೂಜೆ ನಡೆಸಲಿದ್ದಾರೆ. ಬಳಿಕ 11:30 ಕ್ಕೆ ಕಾಂಚಿಪುರಂನ ವರದರಾಜುಪೆರುಮಾಳ್ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರಿಸಲಿದ್ದಾರೆ.
ಕಾಂಗ್ರೆಸ್ ನಲ್ಲಿ ಒಂದು ಕಡೆ ಅಹಿಂದ ಔತಣಕೂಟ, ದಲಿತ ಸಚಿವರ ಸಭೆಗಳ ನಡುವೆ ಡಿಕೆ ಶಿವಕುಮಾರ್ ಟೆಂಪಲ್ ರನ್ ಕುತೂಹಲಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಡಿಕೆ ಶಿವಕುಮಾರ್ ಅವರು, ದೆಹಲಿಗೆ ತೆರಳಿದ್ದರು. ಹೈಕಮಾಂಡ್ ನಾಯಕರ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಿದ್ದರ. ಡಿಕೆ ಶಿವಕುಮಾರ್ ಟರ್ಕಿ ಪ್ರವಾಸದಲ್ಲಿ ಇದ್ದಾಗ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ, ಡಾ ಎಚ್ ಸಿ ಮಹಾದೇವಪ್ಪ ಹಾಗೂ ಪರಮೇಶ್ವರ್ ಔತಣಕೂಟದಲ್ಲಿ ಭಾಗಿಯಾಗಿದ್ದರು. ಇದು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಸ್ವತಃ ಡಿಕೆಶಿ ಹೇಳಿದ್ದರು.
ಇದಾದ ಬೆನ್ನಲ್ಲೇ ಡಾ. ಜಿ ಪರಮೇಶ್ವರ್ ಅವರು, ದಲಿತ ಶಾಸಕರು ಮತ್ತು ಸಚಿವರ ಸಭೆಯನ್ನು ಕರೆದಿದ್ದರು. ನಗರದ ಖಾಸಗಿ ಹೋಟೆಲ್ ನಲ್ಲಿ ಔತಣಕೂಟದ ಹೆಸರಿನಲ್ಲಿ ಸಭೆ ಆಯೋಜನೆ ಮಾಡಲಾಗಿತ್ತು. ಆದರೆ ಈ ಸಭೆ ದಿಢೀರ್ ಮುಂದೂಡಲ್ಪಟ್ಟಿದೆ. ಕಾಂಗ್ರೆಸ್ ನಲ್ಲಿ ಡಿನ್ನರ್ ಪಾಲಿಟಿಕ್ಸ್ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಚರ್ಚೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿದೆ. ಈ ನಡುವೆ ಡಿಕೆ ಶಿವಕುಮಾರ್ ಹೈಕಮಾಂಡ್ ನಾಯಕರ ಮೊರೆ ಹೋಗಿದ್ದರು. ಆದರೆ ಇದೀಗ ದೇವರ ಮೊರೆ ಹೋಗಿದ್ದಾರೆ.
ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಹಾಗೆ ಕಾಣಿಸುತ್ತಿದೆ. ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿಕೆ ಶಿವಕುಮಾರ್ ಔತಣಕೂಟಗಳ ಬಗ್ಗೆಯೂ ತೀಕ್ಷ್ಣವಾದ ಹೇಳಿಕೆಗಳನ್ನು ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅವರ ನಡೆಯೂ ಕುತೂಹಲ ಕೆರಳಿಸಿದೆ.ಒಟ್ಟಿನಲ್ಲಿ ಯುದ್ಧ ಮಾಡಿ ಗೆದ್ದಿರುವ ಡಿಕೆಶಿಗೆ ಗೆಲುವಿನ ಸನಿಯದಲ್ಲಿ ದೇವರ ಮೊರೆಹೋಗಿದ್ದು ಅವರ ದೈವ ಭಕ್ತಿ ತೋರಿಸುತ್ತದೆ.