ದಾವಣಗೆರೆ : ಟ್ವಿಸ್ಟ್.. ಬಿಗ್ ಟ್ವಿಸ್ಟ್. ಇಂಥ ಬಿಗ್ ಟ್ವಿಸ್ಟ್ಅನ್ನ ಖುದ್ದು ಕುಮಾರಸ್ವಾಮಿಯವರು ಕೂಡ ಎಕ್ಸ್ಪೆಕ್ಟ್ ಮಾಡಿರ್ಲಿಲ್ಲ ಅಂತೆನಿಸುತ್ತೆ. ಯಾಕಂದ್ರೆ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ಸಿಗದಂತೆ ರಣತಂತ್ರ ಹೆಣೆದು ಸಕ್ಸಸ್ ಆಗಿದ್ದ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ, NDA ಅಭ್ಯರ್ಥಿಯಾಗಿ ಖುದ್ದು ತಾವೇ ಮಂಡ್ಯ ಅಖಾಡಕ್ಕೆ ಇಳಿದಿದ್ದಾರೆ. ಅಷ್ಟೇ ಅಲ್ಲ., ಸುಮಲತಾ ಅವರೇ ತಮ್ಮ ಪರ ಪ್ರಚಾರ ಮಾಡ್ತಾರೆ ಅಂಥ ಕುಮಾರಸ್ವಾಮಿ ಭಾವಿಸಿದ್ದಾರೆ. ಪರಿಸ್ಥಿತಿ ಹೀಗಿರೋವಾಗ್ಲೇ, ಮಂಡ್ಯ ಅಖಾಡದಲ್ಲಿ ನಟ ದರ್ಶನ್ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಯಾಕಂದ್ರೆ ನಟ ದರ್ಶನ್ ಇದೀಗ ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಹಾಗಾದ್ರೆ ಕುಮಾರಸ್ವಾಮಿಗೆ ದರ್ಶನ್ ಕೊಟ್ಟ ಬಿಗ್ ಶಾಕ್ ಏನು ಗೊತ್ತಾ?
ಇಲ್ನೋಡಿ.. ನಟ ದರ್ಶನ್ ಮಂಡ್ಯ ಅಖಾಡಕ್ಕೆ ಮತ್ತೆ ಎಂಟ್ರಿಕೊಟ್ಟಿದ್ದಾರೆ.. ಆದ್ರೆ ಈ ಸಲ ಸುಮಲತಾ ಅವರ ಪರವಾಗಿ ಅಲ್ಲ.. ಬದಲಿಗೆ ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣೇಗೌಡ್ರ ಪರವಾಗಿ. ಈ ದೃಶ್ಯವನ್ನ ಕಂಡ ಬಿಜೆಪಿ ನಾಯಕರೇ ಶಾಕ್ ಆಗಿ ಹೋಗಿದ್ದಾರೆ. ದಳಪತಿಗಳಂತೂ ದಂಗಾಗಿ ಹೋಗಿದ್ದಾರೆ. ಯಾಕಂದ್ರೆ ಸುಮಲತಾ ಅವರನ್ನು ಅಮ್ಮ ಎಂದೇ ಕರೆಯುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುಮಲತಾ ಅವರು ಏನು ಹೇಳಿದರೂ ಕೇಳುತ್ತೇನೆ ಎಂದು ಹೇಳಿದ್ದರು. ಆದರೆ ಈಗ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವುದು ಭಾರಿ ಕುತೂಹಲ ಕೆರಳಿಸಿದೆ. ಸುಮಲತಾ ಅವರು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಪರ ಪ್ರಚಾರ ಮಾಡಬೇಕು. ಅವರು ಸದ್ಯ ಹೆಚ್ಡಿಕೆ ಪರ ಪ್ರಚಾರ ಮಾಡುವ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಸುಮಲತ ಅವರ ಆಪ್ತರಾದ ದರ್ಶನ್ ಕಾಂಗ್ರೆಸ್ ಪರ ಪ್ರಚಾರ ಮಾಡಲು ಒಪ್ಪಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದೇ ವೇಳೆ, ಎಚ್.ಡಿ. ಕುಮಾರಸ್ವಾಮಿ ಪರವಾಗಿ ಸುಮಲತಾ ಅವರು ಪ್ರಚಾರ ಮಾಡುತ್ತಾರಾ ಅನ್ನೋ ಕುತೂಹಲ ಇದೆ. ಬಿಜೆಪಿ ನಾಯಕರೇನೋ ಸುಮಲತಾ ಅವರು ಹೆಚ್ಡಿಕೆ ಹೇಳಿದ ದಿನ ಮಂಡ್ಯದಲ್ಲಿ ಪ್ರಚಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ಆಗಲಿ ಸುಮಲತಾ ಆಗಲಿ ಇನ್ನೂ ಹೇಳಿಕೆ ನೀಡಿಲ್ಲ.
ನಿಮಗೆ ಗೊತ್ತಿರ್ಲಿ, ಕಳೆದ ಬಾರಿ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅವರ ಬೆನ್ನಿಗೆ ನಿಂತಿದ್ದೇ ನಟ ದರ್ಶನ್ ಮತ್ತು ಯಶ್. ಈ ಬಾರಿ ಯಶ್ ರಾಜಕೀಯದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದಾರೆ. ಆದರೆ ದರ್ಶನ್ ಮಾತ್ರ ಸುಮಲತಾ ಮಂಡ್ಯದಲ್ಲಿ ನಡೆದ ಬೆಂಬಲಿಗರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸುಮಲತಾ ಅವರು ಬಾವಿಗೆ ಬೀಳು ಅಂದರೂ ಬೀಳುತ್ತೇನೆ ಎನ್ನುವ ಮೂಲಕ ಅವರಿಗೆ ಬೆಂಬಲ ಕೊಟ್ಟಿದ್ದರು. ಆದ್ರೀಗ ನಟ ದರ್ಶನ್ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸುತ್ತಿರೋದು ಕಮಲ ದಳ ಪಕ್ಷಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.
ಇನ್ನ ನಿನ್ನೆ ಮಂಡ್ಯ ಅಖಾಡಕ್ಕೆ ಎಂಟ್ರಿಕೊಟ್ಟದ್ದ ರಾಹುಲ್ಗಾಂಧಿ ಕೂಡ ಕುಮಾರಸ್ವಾಮಿ ಅವರನ್ನ ಸೋಲಿಸೋಕೆ ಕರೆ ಕೊಟ್ಟಿದ್ರು. 2018ರಲ್ಲೇ ರಾಹುಲ್ಗಾಂಧಿ ಜೆಡಿಎಸ್ಅನ್ನ ಬಿಜೆಪಿಯ ಬಿ ಟೀಂ ಅಂತೇಳಿ ಟೀಕಿಸಿದ್ರು. ಆದ್ರೀಗ ಮತ್ತೆ ಅದೇ ಮಾತನ್ನ ಹೇಳಿದ್ರು. ಅಷ್ಟೇ ಅಲ್ಲ. ಈ ಹಿಂದೆ ಜೆಡಿಎಸ್ ಬಿಜೆಪಿಯ ಬಿ ಟೀಂ ಆಗಿತ್ತು. ಆದ್ರೀಗ ಅವರ ಜೊತೆ ಕೈ ಜೋಡಿಸಿ ಪಾರ್ಟನರ್ ಆಗಿದೆ ಅಂತೇಳಿ ಕುಟುಕಿದ್ದಾರೆ. ಇನ್ನ ಇದೇ ವೇಳೆ ಸಿಎಂ ಸಿದ್ದರಾಮಯ್ಯ ಮಾತನಾಡಿ, ಕುಮಾರಸ್ವಾಮಿ ಚನ್ನಪಟ್ಟಣ ಬಿಟ್ಟು ಬಂದಿದ್ದಾರೆ. ಅವರು ಅಲ್ಲೇ ಸ್ಪರ್ಧಿಸಬಹುದಿತ್ತು. ಆದ್ರೆ ಮಂಡ್ಯಕ್ಕೆ ಬಂದಿದ್ದಾರೆ. ಅವರು ಎಲ್ಲೇ ಸ್ಪರ್ಧಿಸಿದ್ರೂ ಸೋಲೋದು ಗ್ಯಾರಂಟಿ ಅಂತೇಳಿದ್ದಾರೆ. ಪೂರ್ವದಲ್ಲಿ ಸೂರ್ಯ ಹುಟ್ಟೋದು ಎಷ್ಟು ಸತ್ಯವೋ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದೂ ಅಷ್ಟೇ ಸತ್ಯ ಅಂತೇಳಿದ್ರು. ನಿಮಗೆ ಗೊತ್ತಿರ್ಲಿ, ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿಯವರಿಗೆ ಇತ್ತೀಚೆಗೆ ಒಂದಾದ್ಮೇಲೆ ಒಂದು ಅಡ್ಡಿ ಆತಂಕಗಳು ಎದುರಾಗುತ್ತಿವೆ. ಮೊದ್ಲು ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ಸಿಕ್ಕಿಲ್ಲ ಅಂದ್ರೆ ಅವರು ಪಕ್ಷೇತರವಾಗಿ ಕಣಕ್ಕಿಳಿಯೋ ಭೀತಿಯನ್ನ ಎದುರಿಸುತ್ತಿದ್ರು. ಇದರ ಬೆನ್ನಲ್ಲೇ ಇತ್ತೀಚೆಗೆ ನಮ್ಮ ನಾಡಿನ ಹಳ್ಳಿ ಹೆಣ್ಣು ಮಕ್ಕಳು ಗ್ಯಾರಂಟಿ ಯೋಜನೆಗಳಿಂದ ದಾರಿ ತಪ್ಪಿದ್ದಾರೆ ಅಂತೇಳಿ ಹೇಳಿಕೆ ಕೊಟ್ಟು ಮಹಿಳೆಯರ ಕಡು ಕೋಪಕ್ಕೆ ಗುರಿಯಾಗಿದ್ರು. ಇದೀಗ ನಟ ದರ್ಶನ್ ತಮ್ಮ ವಿರುದ್ಧ ಮಂಡ್ಯದಲ್ಲಿ ಮತ್ತೆ ಪ್ರಚಾರ ನಡೆಸುತ್ತಿರೋದು ಕುಮಾರಸ್ವಾಮಿಯವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಹಾಗಾದ್ರೆ ಸಿಎಂ ಸಿದ್ರಾಮಯ್ಯನವರು ಹೇಳಿದಂತೆ ಮಂಡ್ಯದಲ್ಲಿ ಕುಮಾರಸ್ವಾಮಿ ಸೋಲು ಖಚಿತವಾ..? ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಗೆದ್ದು ಬೀಗ್ತಾರಾ?