ನಂದೀಶ್ ಭದ್ರಾವತಿ, ದಾವಣಗೆರೆ
ಒಂದು ಕಡೆ ಗ್ಯಾರಂಟಿ ಕೊಟ್ಟ ಸರಕಾರ ಇನ್ನೊಂದು ಕಡೆ ಬೆಲೆ ಏರಿಕೆ ಮಾಡಿ ತನ್ನ ಬೊಕ್ಕಸ ತುಂಬಿಸಿಕೊಳ್ಳುತ್ತಿದೆ. ಈಗಾಗಲೇ ತೈಲ ಮೇಲೆ ಇರುವ ತೆರಿಗೆ ಹೆಚ್ಚಳ ಬೆನ್ನಲೇ ಈಗ ನಂದಿನಿ ಹಾಲಿನ ದರವನ್ನು ಲೀಟರ್ಗೆ 2 ರೂ ಹೆಚ್ಚಿಸಿದೆ.
ಜೂ.26ರಿಂದಲೇ ಈ ದರ ಜಾರಿಗೆ ಬರಲಿದ್ದು, ಗ್ರಾಹಕರಿಗೆ ದರದ ಹೊರೆಯಾಗಿದೆ. ಕರ್ನಾಟಕ ಹಾಲು ಮಹಾಮಂಡಳ ಈ ದರ ಹೆಚ್ಚಿಸಿದ್ದು, ಹಾಲಿನ ಒಕ್ಕೂಟ ನಷ್ಟದಿಂದ ಹೊರ ಬರಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬುದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ಮಾತು.
ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೇಟ್ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡುವುದಾಗಿ ಕೆಎಂಎಫ್ ಅಧ್ಯಕ್ಷರು ಹೇಳಿದ್ದಾರೆ. ಸದ್ಯ ಲೀಟರ್ಗೆ 42 ರೂಪಾಯಿ ಇದ್ದು, ಈ ದರ ಇನ್ಮುಂದೆ 44 ರೂಪಾಯಿ ಆಗಲಿದೆ. ಒಟ್ಟಾರೆ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ ದರ 22ರಿಂದ 24 ರೂ.ಗೆ ಏರಿಕೆಯಾಗಲಿದೆ. ಆದರೆ ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆಯಾಗಿಲ್ಲ.
ಕೇರಳದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರುಪಾಯಿ ಇದೆ. ಗುಜರಾತ್ನಲ್ಲಿ ಅಮುಲ್ ಒಂದು ಲೀಟರ್ಗೆ 56 ರೂ. ಮಹಾರಾಷ್ಟ್ರದಲ್ಲಿ 56 ರೂ. ದೆಹಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಎಂದು ಭೀಮಾನಾಯ್ಕ್ ಹೇಳಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೂ ಮುನ್ನ ಗುಜರಾತ್ನ ಅಮುಲ್ ತನ್ನ ಎಲ್ಲ ರೀತಿಯ ಹಾಲಿನ ಬೆಲೆಯನ್ನು ಲೀಟರ್ಗೆ 2 ರೂ. ಹೆಚ್ಚಿಸಿತ್ತು. ಉತ್ಪಾದನೆಯ ಒಟ್ಟಾರೆ ವೆಚ್ಚದ ಹೆಚ್ಚಳದಿಂದಾಗಿ ಅಮುಲ್ ಹಾಲಿನ ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ ತಿಳಿಸಿತ್ತು. ಒಟ್ಟಾರೆ ಹಾಲಿನದರ ಮಧ್ಯಮ ವರ್ಗದವರ ಮೇಲೆ ಪರಿಣಾಮ ಬೀರಿದ್ದು, ಸರಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.