ದಾವಣಗೆರೆ : ಅಯೋಧ್ಯೆಯಲ್ಲಿ ಬಾಲ ರಾಮನ ಪ್ರತಿಷ್ಠಾಪನೆ ಒಂದು ಕಡೆಯಾದರೆ ದಾವಣಗೆರೆಯಲ್ಲಿ ರಾಮನ ಭಕ್ತರು ತಮ್ಮದೇ ಆದ ಕೊಡುಗೆ ನೀಡಿದರು.
ಹೌದು…ದಾವಣಗೆರೆ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ದಾಸೋಹ ಸೇರಿದಂತೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠೆ ವೀಕ್ಷಿಸಲು ಎಲ್ ಇಡಿ ವ್ಯವಸ್ಥೆ ಮಾಡಿದ್ದರು.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಪ್ರಾಣ ಪ್ರತಿಷ್ಠಾ ಪ್ರಯುಕ್ತ ನಗರದ ಹಲವೆಡೆ ಆಯೋಜಿಸಿದ್ದ ಕಾರ್ಯಕ್ರಮಗಳಲ್ಲಿ ಎ. ಕೆ. ಫೌಂಡೇಶನ್ ಅಧ್ಯಕ್ಷರು, ಬಿಜೆಪಿ ಮುಖಂಡರು ಹಾಗೂ ದಾವಣಗೆರೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಪಾಲ್ಗೊಂಡರು. ಅಲ್ಲದೇ ಶ್ರೀರಾಮನಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಮೊದಲು ನಗರದ ಶಿವಕುಮಾರ ಸ್ವಾಮಿ ಬಡಾವಣೆ ಸಂಜೀವಿನಿ ಆಂಜನೇಯ ಸ್ವಾಮಿ ದೇವಸ್ಥಾನ, ವಿದ್ಯಾನಗರ ಶಿವಪಾರ್ವತಿ ಮಂದಿರ, ನಿಟುವಳ್ಳಿ ಬಡಾವಣೆ, ರಾಷ್ಟ್ರೋತ್ಥಾನ ಶಾಲೆ, ಈ ಶಾಲೆಯ ಎದುರುಗಡೆ ಇರುವ 31 ನೇ ವಾರ್ಡ್, ಜಯದೇವ ವೃತ್ತ, ಅರುಣಾ ಚಿತ್ರಮಂದಿರದ ಎದುರುಗಡೆಯ ತರಕಾರಿ ಮಾರುಕಟ್ಟೆ ಸಂಘದವರು ಆಯೋಜಿಸಿದ್ದ ಕಾರ್ಯಕ್ರಮವೂ ಸೇರಿದಂತೆ ಹಲವೆಡೆ ಆಯೋಜಿಸಿದ್ದ ಶ್ರೀರಾಮನ ಕುರಿತ ಸಮಾರಂಭಗಳಲ್ಲಿ ಭಾಗವಹಿಸಿದರು.
ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ನೇತೃತ್ವದಲ್ಲಿ ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕೆ. ಬಿ. ಕೊಟ್ರೇಶ್ ಅವರು, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್ ದುರ್ಗಮ್ಮ ದೇವಸ್ಥಾನದ ಬಳಿ, ಕನ್ನಿಕಾ ಪರಮೇಶ್ವರಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ, ಶ್ರೀರಾಮನಿಗೆ ಪುಷ್ಪ ನಮನ ಸಲ್ಲಿಸಿದರು. ವಿವಿಧ ಕಡೆಗಳಲ್ಲಿ ಶ್ರೀರಾಮನ ದರ್ಶನ ಪಡೆದರಲ್ಲದೇ, ನಗರಾದ್ಯಂತ ಸಂಚರಿಸಿ ಸಂಭ್ರಮದಲ್ಲಿ ಪಾಲ್ಗೊಂಡರು.
ಪ್ರಸಾದದ ವ್ಯವಸ್ಥೆ:
ಕೆ. ಬಿ. ಕೊಟ್ರೇಶ್ ಅವರು ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರಾಣ ಪ್ರತಿಷ್ಠೆಯ ನೇರ ದೃಶ್ಯಾವಳಿ ವೀಕ್ಷಿಸಲು ಎಲ್ ಇ ಡಿ ವ್ಯವಸ್ಥೆ ಮಾಡಿದ್ದರು. ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಎಲ್ ಇ ಡಿ ಮತ್ತು ಪ್ರಸಾದದ ವ್ಯವಸ್ಥೆ ಮಾಡಿದ್ದ ಅವರು, ಶಿವಪಾರ್ವತಿ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆಗೆ ಸಹಾಯ ಮಾಡಿದರು. ರಾಷ್ಟ್ರೋತ್ಥಾನ ಶಾಲೆಯಲ್ಲಿ ಎಲ್ ಇ ಡಿ ಸ್ಕ್ರೀನ್ ವ್ಯವಸ್ಥೆ ಮಾಡಿದ್ದರಲ್ಲದೇ, ವಾರ್ಡ್ ನಂ 31 ರಲ್ಲಿಯೂ ಪ್ರಸಾದ ವ್ಯವಸ್ಥೆಗೆ ಸಹಾಯ ಮಾಡಿದರು. ಆರನೇ ಮೈಲಿಕಲ್ಲು ಹದಡಿ ವೃತ್ತದಲ್ಲಿ ಪ್ರಸಾದದ ವ್ಯವಸ್ಥೆ ಆಯೋಜಿಸಲಾಗಿತ್ತು. ಇದಕ್ಕೂ ನೆರವು ನೀಡಿದ್ದರು. ಜಗಳೂರು ತಾಲೂಕು ಹಾಗೂ ಹರಪನಹಳ್ಳಿಯ ವಿವಿಧೆಡೆ ಏರ್ಪಡಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಅನ್ನಸಂತರ್ಪಣೆ ಹೊಣೆ ಹೊತ್ತಿದ್ದರು. ಚನ್ನಗಿರಿ ತಾಲೂಕಿನ ಬೆಳಲಗೆರೆ, ಪಲ್ಲಾಗಟ್ಟೆಯಲ್ಲಿಯೂ ಅನ್ನಸಂತರ್ಪಣೆ ವ್ಯವಸ್ಥೆಯನ್ನು ಕೊಟ್ರೇಶ್ ಅವರು ಮಾಡಿದ್ದರು.
ಮಾಯಕೊಂಡದಲ್ಲಿಯೂ ಪ್ರಸಾದ ವ್ಯವಸ್ಥೆಗೆ ಸಹಾಯ ಹಸ್ತ ನೀಡಿದರು. ಹತ್ತು ಹಲವು ಕಡೆ ಈ ವ್ಯವಸ್ಥೆ ಮಾಡುವ ಮೂಲಕ ಶ್ರೀರಾಮನ ಕೃಪೆಗೆ ಪಾತ್ರರಾದರು. ಈ ದಿನ ದಾವಣಗೆರೆ ತಾಲೂಕಿನಲ್ಲಿ ಪುಸ್ತಕಗಳನ್ನು ಶ್ರೀರಾಮ ಜಯಂ ಎಂಬ ಪುಸ್ತಕ ಮತ್ತು ಮಂದಿರವಲ್ಲೇ ಕಟ್ಟಿದೆವು ಪುಸ್ತಕಗಳನ್ನು ಎಲ್ಲಾ ಕಡೆ ವಿತರಿಸಲಾಯಿತು. ಈ ಮೂಲಕ ಶ್ರೀರಾಮನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದರು. ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮಾಚರಣೆಗೆ ತನ್ನ ಕೈಯಲ್ಲಾದಷ್ಟು ನೆರವು ನೀಡುವ ಮೂಲಕ ಕೆ. ಬಿ. ಕೊಟ್ರೇಶ್ ಅವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.