
ದಾವಣಗೆರೆ : ಭದ್ರಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಯಾವುದೇ ಸಂದರ್ಭದಲ್ಲಿ ಜಲಾಶಯದ ಕ್ರೆಸ್ಟ್ ಗೇಟ್ ಗಳ ಮೂಲಕ ನೀರು ಹೊರ ಬಿಡಲಾಗುತ್ತದೆ. ಪರಿಸ್ಥಿತಿಯ ಅರಿವು ಇಲ್ಲದ ಶಾಸಕ ಮಂತ್ರಿ ಮಹೋದಯರು ಸೋಮವಾರ ಐಸಿಸಿ ಸಭೆ ಕರೆದಿರುವುದು ಮೂರ್ಖತನದ ಪರಮಾವಧಿ ಎಂದು ಜಿಲ್ಲಾ ಬಿಜೆಪಿ ವಕ್ತಾರ, ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಖಂಡಿಸಿದ್ದಾರೆ.
ಸಮುದ್ರಕ್ಕೆ ಉಪ್ಪಿನ ಬಡತನ ಎಂಬಂತೆ ಡ್ಯಾಂ ನಲ್ಲಿ ನೀರು ಇದ್ದರೂ ಬಿಡಲಿಲ್ಲ. ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ರೈತರ ಪರಿಸ್ಥಿತಿ. ಇಂದು ಭದ್ರಾ ಡ್ಯಾಂ ನೀರಿನ ಮಟ್ಟ ಬರೋಬ್ಬರಿ 178 ಅಡಿ ಇದ್ದು, 49801 ಕ್ಯೂಸೆಕ್ ನೀರು ಒಳಹರಿವು ಇದೆ. ಆದ್ರೂ ನೀರು ಬಿಡದೆ ಸೋಮವಾರ ಐಸಿಸಿ ಸಭೆ ಕರೆಯಲಾಗಿದೆ. ಕಳೆದ ಬೇಸಿಗೆ ಹಂಗಾಮಿನಲ್ಲಿ ಬೀಕರ ಬರದಿಂದ ಬಸವಳಿದ ರೈತರು ದಿನಬೆಳಗಾದರೆ ನಮ್ಮ ಡ್ಯಾಂಗೆ ಎಷ್ಟು ನೀರು ಬಂತು ಎಂದು ಚಾತಕ ಪಕ್ಷಿಗಳಂತೆ ನೋಡುತ್ತಿದ್ದಾರೆ. ಆದರೆ ಇದ್ಯಾವುದರ ಅರಿವು ಇಲ್ಲದ ಶಾಸಕ ಮಂತ್ರಿ ಮಹೋದಯರು ನೀರು ಬಿಡಲು ಮೀನಾ ಮೇಷ ಎಣಿಸುತ್ತಿದ್ದಾರೆ.
ಇಂದು ಅಥವಾ ನಾಳೆ ಡ್ಯಾಂ ನೀರಿನ ಮಟ್ಟ 182-183 ಅಡಿಗೆ ಏರಿಕೆಯಾಗುವುದರಿಂದ ಮುನ್ನೇಚರಿಕೆ ಕ್ರಮವಾಗಿ ಹೊಳೆಗೆ ಬಿಡಲೇಬೇಕು. ಹೊಳೆಗೆ ಹರಿಸಬೇಕು ಎಂಬುದೇ ಅಧಿಕಾರಿಶಾಹಿ ಮನಸ್ಥಿತಿ ಎಂಬಂತೆ ಕಾಣುತ್ತಿದೆ. ಶೇಕಡ 70 ರಷ್ಟು ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಕಾಡ ಅಧ್ಯಕ್ಷರಾಗುವವರು ಮತ್ತು ಐಸಿಸಿ ಅಧ್ಯಕ್ಷರಾಗುವವರು ಶಿವಮೊಗ್ಗ ಜಿಲ್ಲೆಯವರು.

ಐಸಿಸಿ-ಕಾಡ ಸಭೆ ನಡೆಯುವುದು ಶಿವಮೊಗ್ಗದಲ್ಲಿ. ರೈತ ಪರ ಕಾಳಜಿ ಇಲ್ಲದ ನಮ್ಮ ಜಿಲ್ಲೆಯ ಶಾಸಕರು, ಸಂಸದರು, ಸಚಿವರು ಸಭೆಗೆ ಹೋಗುವುದೇ ಕಡಿಮೆ. ಇಂತಹವರಿಂದ ರೈತರು ಹಿತಾಸಕ್ತಿ ಕನಸಿನ ಮಾತು. ಐಸಿಸಿ ಅಧ್ಯಕ್ಷರಾಗಿರುವ ಸಚಿವ ಮಧು ಬಂಗಾರಪ್ಪನವರಿಗೆ ಡ್ಯಾಂ ಬಗ್ಗೆ ಮಾಹಿತಿ ಇಲ್ಲ. ಮೊನ್ನೆಯಿಂದ ದಿನಕ್ಕೆ 2 ಸಾವಿರ ಕ್ಯೂಸೆಕ್ ನಷ್ಟು ನೀರು ಬಿಟ್ಟಿದ್ದರೆ ಬೇಸಿಗೆಯಲ್ಲಿ ಬರಿದಾಗಿರುವ ಕೆರೆ ಕಟ್ಟೆಗಳು ತುಂಬಿ ಕೊಳ್ಳುತ್ತಿದ್ದವು. ರೈತರು ಭತ್ತದ ಬೀಜ ಚೆಲ್ಲಿಕೊಂಡು ಸಸಿ ಮಡಿ ತಯಾರು ಮಾಡಿ ಕೊಳ್ಳುತ್ತಿದ್ದರು. ಇದ್ಯಾವುದರ ಪರಿಜ್ಞಾನ ಇಲ್ಲದವರಿಂದ ನೀರು ಇದ್ದು ಬಿಡದೆ ರೈತರ ಶೋಷಣೆ ನಡೆಯುತ್ತಿದೆ ಎಂದು ಬಿ ಎಂ ಸತೀಶ್ ಹೇಳಿದ್ದಾರೆ.