ದಾವಣಗೆರೆ: ಪಿ.ಜೆ. ಬಡಾವಣೆಯಲ್ಲಿನ ಆದಿ ಕರ್ನಾಟಕ ವಿದ್ಯಾಭಿವೃದ್ದಿ ಸಂಘದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಜು. 28 ರಂದು ಸಮವಸ್ತ್ರ, ಶೂ, ದಿಂಬು ಇತರೆ ಸಾಮಗ್ರಿಗಳ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಆದಿ ಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಬಿ.ಎಚ್. ವೀರಭದ್ರಪ್ಪ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, 1974 ರಲ್ಲಿ ಪ್ರಾರಂಭ ವಾದ ಹಾಸ್ಟೆಲ್ ನಲ್ಲಿ ಇರುವಂತಹ ನೂರು ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ದಿಂಬು ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.
ಭಾನುವಾರ ಬೆಳಗ್ಗೆ 11ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್.ಸಿ. ಮಹದೇವಪ್ಪ,ಗೃಹ ಸಚಿವ ಡಾ.ಜಿ. ಪರಮೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಇತರರು ಭಾಗವಹಿಸುವರು. ಕಾರ್ಯಕ್ರಮದ ಮುನ್ನ ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಎಲ್.ಎಚ್. ಸಾಗರ್, ಜಿ. ರಾಕೇಶ್, ಮಂಜಪ್ಪ ಹಲಗೇರಿ ಇದ್ದರು.