


ನಂದೀಶ್ , ಭದ್ರಾವತಿ
ಉಕ್ಕಿನ ನಗರಿ ಭದ್ರಾವತಿಯಲ್ಲಿ ಒಂದೊಂದೇ ಸಂತಸದ ಕ್ಷಣಗಳು ಕಾಣುತ್ತಿವೆ..ಅತ್ತ ವಿಎಸ್ಐಎಲ್ ಕಾರ್ಖಾನೆ ಓಪನ್ ಆಗಲಿದೆ ಎಂಬ ಸುದ್ದಿ ಇದ್ದರೆ ಇತ್ತ ಕಾಗದ ನಗರ ಶಾಲೆ ಮತ್ತೆ ರೀ ಓಪನ್ ಆಗಲಿದೆ. ಅಷ್ಟಕ್ಕೂ ಈ ಶಾಲೆ ಓಪನ್ ಆಗಲೂ ವ್ಯಕ್ತಿಯೊಬ್ಬರ ಶ್ರಮ ಸಾಕಷ್ಟಿದೆ..ಇವರು ಇಲ್ಲದೇ ಹೋಗಿದ್ದರೇ ಶಾಲೆ ಓಪನ್ ಆಗುತ್ತಿರಲಿಲ್ಲ, ಹಾಗಾದ್ರೆ ಅವರು ಯಾರು ಅಂತೀರಾ…ಇಲ್ಲಿದೆ ನೋಡಿ ಸಂಪೂರ್ಣ ಡೀಟೆಲ್ಸ್.

ಹೌದು…ಇನ್ಮುಂದೆ ಕಾಗದನಗರ ಶಾಲೆ ಎಂದಿನಂತೆ ತನ್ನ ಗತ ವೈಭವವನ್ನು ಕಾಣಲಿದೆ…ಸದ್ಯ ಬೀಗ ಜಡಿದಿದ್ದ ಶಾಲೆ ಈಗ ರೀ ಓಪನ್ ಅಗಲಿದ್ದು, ಮಕ್ಕಳು ಖುಷಿಯಿಂದ ಶಾಲೆಗೆ ಹೋಗಲಿದ್ದಾರೆ. ಅಷ್ಟಕ್ಕೂ ಈ ಶಾಲೆ ಓಪನ್ ಆಗಿದ್ದು, ಅಷ್ಟೂ ಈಸಿ ಇರಲಿಲ್ಲ..ಈ ಶಾಲೆ ವಿದ್ಯಾರ್ಥಿ , ಸಾಮಾಜಿಕ ಹೋರಾಟಗಾರ ಮಧುಸೂಧನ್ ಸತತ ಶ್ರಮವೇ ಕಾರಣ. ಸದ್ಯ ಮಧುಸೂದನ್ ಭದ್ರಾವತಿ ಯವರ ಅವಿರತ ಹೋರಾಟಕ್ಕೆ ಜಯ ಸಿಕ್ಕಿದ್ದು ಸತತ ಹೋರಾಟ ನಡೆಸಿ ಕೊಟ್ಟ ಮಾತಿನಂತೆ ಶಾಲೆ ಉಳಿಸಿ ಕೊಟ್ಟಿದ್ದಾರೆ. ಈ ಸಂಬಂಧ ಸಾರ್ವಜನಿಕರು ಮಧುಸೂದನ್ ಇವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಧ್ವನಿ ಎತ್ತಿದ್ದ ಮೊಟ್ಟ ಮೊದಲಿಗ ಮಧುಸೂಧನ್
ಐತಿಹಾಸಿಕ ಇತಿಹಾಸ ಹೊಂದಿದ್ದ ಎಂ ಪಿ ಎಂ ಶಾಲೆ ಉಳಿವಿಗಾಗಿ ಮಧುಸೂದನ್ ಭದ್ರಾವತಿ ಧ್ವನಿ ಎತ್ತಿದ್ದು ಮೇ 02ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರನ್ನು ಭೇಟಿ ಮಾಡಿ ಭದ್ರಾವತಿಯ ಐತಿಹಾಸಿಕ ಪೇಪರ್ ಟೌನ್ (ಎಂ.ಪಿ.ಎಂ )ಶಾಲೆಯ ವಿಚಾರವಾಗಿ ಮಾತನಾಡಿದರು. ಅಲ್ಲಿನ ಸುತ್ತ ಮುತ್ತ ವಾಸಿಸುವ ಬಡ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಎಂದು ಸಚಿವರಿಗೆ ಮನವರಿಕೆ ಮಾಡಿದರು. ಬೆಳ್ಳಗ್ಗೆಯಿಂದ ಸಂಜೆ ತನಕ ಕಾದು ಸಿಎಂ ಸಿದ್ದರಾಮಯ್ಯರಿಗೂ ಮನವಿ ನೀಡಿದ್ದರು.
ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದು ಇದೀಗ ಎಂ ಪಿ ಎಂ ಕಾಗದ ನಗರ ಶಾಲೆ ಓಪನ್ ಆಗಿದೆ.
ನಮ್ಮ ಶಾಲೆ ಎಂಬ ಅಭಿಮಾನದೊಂದಿಗೆ ಹೋರಾಟಕ್ಕಿಳಿದ ಮಧುಸೂಧನ್
ಮಧುಸುಧೂನ್ ಭದ್ರಾವತಿ, ಚಿಕ್ಕದಿನಿಂದಲೂ ಉಕ್ಕಿನ ನಗರಿ ಘಮಲು ಕುಡಿದು ಬೆಳೆದ ಹುಡುಗ..ಎಲ್ಲಾದರೂ, ಎಂತಾದರೂ ಇರು, ಎಂದಿಂದಿಗೂ ಕನ್ನಡಿಗನಾಗಿರು ಎಂಬಂತೆ ತಾನು ಹುಟ್ಟಿ ಬೆಳೆದ ಊರನ್ನು ಹೆಚ್ಚು ಪ್ರೀತಿಸುವ ವ್ಯಕ್ತಿ…ಸಮಾಜಮುಖಿ ಕೆಲಸ ಮಾಡುವ ಇವರು, ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತ…ಯಾವಾಗ ಎಂಪಿಎಂ ಶಾಲೆ ಲಾಕ್ ಆಯ್ತು..ಅವಾಗಿನಿಂದ ಈ ಶಾಲೆ ತೆರೆಯಲು ಸಾಕಷ್ಟು ಓಡಾಟ ನಡೆಸಿದರು.
ಶಾಲೆಗೆ ಹೆಸರು ತಂದುಕೊಟ್ಟಿದ್ದ ಜಯಣ್ಣ ಮೇಷ್ಟ್ರು ನೆನಸಿಕೊಂಡ ಮಧು
ಇನ್ನು ಒಂದು ಕಾಲದಲ್ಲಿ ಕಾಗದನಗರ ಪ್ರೌಢಶಾಲೆ 8ನೇ ತರಗತಿ ಆಂಗ್ಲ ಮತ್ತು ಕನ್ನಡ ಮಾಧ್ಯಮಕ್ಕೆ ಪ್ರವೇಶ ಪಡೆಯುವುದು ಪ್ರತಿಷ್ಠೆಯ ವಿಷಯವಾಗಿತ್ತು. ಅದರಲ್ಲೂ ಆಗಿನ ಮುಖ್ಯ ಶಿಕ್ಷಕ ಜಯಣ್ಣ ಅಂದ್ರೆ ಸಾಕು ಇಡೀ ಶಾಲೆ ನಡುಗುತ್ತಿತ್ತು..ಅಲ್ಲದೇ ಜಯಣ್ಣ ಮೇಷ್ಟ್ರು ಕೂಡ ಮಕ್ಕಳನ್ನು ಅಷ್ಟೇ ಶಿಸ್ತಾಗಿ ಬೆಳೆಸುತ್ತಿದ್ದರು..ಯಥಾ ರಾಜ ತಥಾ ಪ್ರಜೆಯಂತೆ ಮುಖ್ಯ ಶಿಕ್ಷಕರಂತೆ ಉಳಿದ ಶಿಕ್ಷಕರು ಮಕ್ಕಳನ್ನು ಶಿಸ್ತು ಬದ್ದಾಗಿ ಬೆಳೆಸುತ್ತಿದ್ದರು ಎಂದು ಮಧುಸೂಧನ್ ನೆನಸಿಕೊಳ್ಳುತ್ತಾರೆ.
ಯಾರಿಗಾಗಿ ಈ ಶಾಲೆ
ಸರಕಾರ ಕಾಗದ ಕಾರ್ಖಾನೆ ಆರಂಭದೊಂದಿಗೆ ಕಾರ್ಮಿಕರು ಹಾಗೂ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳ ಮಕ್ಕಳ ಶಿಕ್ಷಣಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಥಾಪನೆ ಮಾಡಿದ್ದ ಈ ಶಾಲೆಯಲ್ಲಿ ಪ್ರತಿ ವರ್ಷ ಸಾವಿರಾರು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೆ, ಈ ಶಾಲೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಜಿಲ್ಲೆಗೆ ಹೆಸರಾಗಿತ್ತು. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಲವು ಸಾಧನೆಗಳನ್ನು ಮಾಡುವ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರು. ಅನೇಕ ಉತ್ತಮ ಶಿಕ್ಷಕರು ಇಂದಿಗೂ ವಿದ್ಯಾರ್ಥಿಗಳ ನೆನಪಿನಲ್ಲಿ ಉಳಿದಿದ್ದಾರೆ. ಅಲ್ಲದೇಒಂದು ಕಾಲದಲ್ಲಿ ಪೋಷಕರಿಗೆ ಮಕ್ಕಳು ಎಲ್ಲಿ ಓದುತ್ತಿದ್ದಾರೆಂದು ಯಾರಾದರೂ ಕೇಳಿದರೆ ಎಂಪಿಎಂ ಶಾಲೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಈ ಶಾಲೆಯಲ್ಲಿ ಇಂದಿಗೂ ಸುಸಜ್ಜಿತ ಕಟ್ಟಡಗಳು, ಲ್ಯಾಬ್, ಪೀಠೋಪಕರಣಗಳಿವೆ. ಸುಂದರ ಪರಿಸರ ಹೊಂದಿದೆ. ಆದರೆ, ಶಿಕ್ಷಕರಲ್ಲಿ ಹೊಂದಾಣಿಕೆ ಕೊರತೆ ಯಿಂದ ಸರಿಯಾಗಿ ಶಾಲೆಗೆ ಹಾಜರಾಗದೆ, ಪಾಠ ಪ್ರವಚನ ನಡೆಯದೆ ವಿದ್ಯಾರ್ಥಿಗಳ ದಾಖಲಾತಿ ಕುಸಿದಿತ್ತು. ಎಂಪಿಎಂ ಕಾರ್ಖಾನೆಯ ಅನುಭವವಿ ಲ್ಲದ ಶಾಲಾ ಕಾಲೇಜು ಆಡಳಿತ ಮಂಡಳಿ ಅಧಿ ಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಚಿಂತಿಸದೆ ತಾತ್ಸಾರ ಮಾಡಿದ್ದು ಶಾಲೆ ಮುಚ್ಚಲು ಕಾರಣವಾಗಿತ್ತು..ಆದರೀಗ ಮತ್ತೆ ಶಾಲೆ ಪುನಾರಂಭವಾಗಿದ್ದು, ದಾಖಲಾತಿ ಹೆಚ್ಚಳಕ್ಕೆ ಸತತ ಪ್ರಯತ್ನ ನಡೆಯುತ್ತಿದೆ.
ನಾಲ್ಕಾರು ವರ್ಷ ಗಳಿಂದ ದಾಖಲಾತಿ ಕುಸಿತ
ಕಳೆದ ನಾಲ್ಕಾರು ವರ್ಷ ಗಳಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿತವಾಗಿತ್ತು. ಒಂದು ತರಗತಿಯಲ್ಲಿ ಕನಿಷ್ಠ 25 ವಿದ್ಯಾರ್ಥಿಗಳಿರಬೇಕೆಂಬ ನಿಯಮವಿ ದ್ದರೂ ಶಿಕ್ಷಕರು ಎಚ್ಚೆತ್ತುಕೊಂಡಿಲ್ಲ. ಶಿಕ್ಷಕರು ಮತ್ತು ಎಂಪಿಎಂ ಆಡಳಿತ ಮಕ್ಕಳನ್ನು ದಾಖಲಿಸಿಕೊಳ್ಳಲು ಪೋಷಕರ ಮನವೊಲಿಸಲಿಲ್ಲ. ಕಾರ್ಖಾನೆ ಸ್ಥಗಿತಗೊಂಡು ಮನೆಗಳು ಖಾಲಿ ಆದಾಗಿನಿಂದ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಎಂಪಿಎಂ ಅಧಿಕಾರಿಗಳ ಆದೇಶ ದಂತೆ ಮನೆಮನೆಗೆ ಹೋಗಿ ಮಕ್ಕಳನ್ನು ದಾಖಲಿಸಲು ಪೋಷಕರ ಮನವೊಲಿಸಿದ್ದೇವೆ ಎನ್ನುತ್ತಾರೆ ಮಧುಸೂಧನ್.
ಎಷ್ಟು ವಿದ್ಯಾರ್ಥಿಗಳಿದ್ದಾರೆ
ಆಂಗ್ಲ ಮತ್ತು ಕನ್ನಡ ಮಾಧ್ಯಮ ವಿಭಾಗಗಳಲ್ಲಿ ಕನ್ನಡದಲ್ಲಿ8, 9, 10ನೇ ತರಗತಿಗಳಲ್ಲಿ 8, 17, 11 ಮಕ್ಕಳಿದ್ದರೆ, ಆಂಗ್ಲಮಾಧ್ಯಮದಲ್ಲಿ 17, 23, 19 ಮಕ್ಕಳಿದ್ದಾರೆ. ಒಟ್ಟಾರೆ ಮಧುಸೂಧನ್ ಹೋರಾಟದ ಕಿಚ್ಚು ಹಬ್ಬಿಸಿದ್ದು, ಈ ಹೋರಾಟಕ್ಕೆ ಜಯಸಿಕ್ಕಿದ್ದು, ಈಗ ಎಂಪಿಎಂ ಕಾರ್ಖಾನೆ ತೆರೆಯೋದಕ್ಕೆ ಹೋರಾಟ ಮಾಡಲು ಧುಮುಕ್ಕಿದ್ದು, ಯಶಸ್ವಿಯಾಗಲೆಂದು ನಾವು ನೀವು ಹಾರೈಸೋಣ
…
ಈ ಹೋರಾಟಕ್ಕೆ ನನ್ನ ಜತೆ ಸಾಕಷ್ಟು ಜನ ಕೈ ಜೋಡಿಸಿದ್ದಾರೆ. ಮೊದಲು ಎಪಿಎಂ ಶಾಲೆ ಮುಚ್ಚಬೇಡಿ ಎಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧುಬಂಗಾರಪ್ಪರಿಗೆ ಮನವಿ ಸಲ್ಲಿಸಿದ್ದೇ.. ಈ ಬಗ್ಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ..ಶಾಲೆ ತೆರೆದು ಬಡ ಮಕ್ಕಳಿಗೆ ಉಪಯೋಗವಾಗಲು ಹೋರಾಟ ಮಾಡಿದ್ದು, ಜಯ ಸಿಕ್ಕಿದೆ.
ಮಧುಸೂಧನ್ ಭದ್ರಾವತಿ, ಹೋರಾಟಗಾರ
- ….
ಶಾಲೆಯ ವಿಶೇಷತೆಗಳೇನು –
ಅನುಭವಿ ಶಿಕ್ಷಕರ ತಂಡ
ವಿಶಾಲ ಹಾಗೂ ಸುಸಜ್ಜಿತ ಕಟ್ಟಡಗಳು
ಉತ್ತಮ ಶಿಕ್ಷಣ
ಕಂಪ್ಯೂಟರ್ ಲ್ಯಾಬ್
ವಿಶಾಲವಾದ ಆಟದ ಮೈದಾನ
70 ವರ್ಷದ ಇತಿಹಾಸ ಹೊಂದಿರುವ ಶಾಲೆ