ದಾವಣಗೆರೆ : ಮಾಜಿ ಸಿಎಂ ಜಗದೀಶ್ ಶೆಟ್ಟರ್.. ಇವರು ಕಾಂಗ್ರೆಸ್ ಬಿಟ್ಟಾಗಿನಿಂದ ಒಂದಿಲ್ಲೊಂದು ವಿವಾದ., ಒಂದಿಲ್ಲೊಂದು ಅಡ್ಡಿ ಆತಂಕ.. ಹೆಜ್ಜೆ ಇಟ್ಟಲ್ಲೆಲ್ಲಾ ಕಲ್ಲುಮುಳ್ಳೇ ಸಿಕ್ತಾಯಿದೆ. ಬೆಳಗಾವಿಯಲ್ಲಿ ಇದೀಗ ಯಾರೋ ಕೊಟ್ಟಿರೋ ಹೇಳಿಕೆಗೆ ಶೆಟ್ರಿಗೆ ಚುನಾವಣೆಯಲ್ಲಿ ಹಿನ್ನಡೆಯಾಗುತ್ತಾ ಅನ್ನೋ ಅನುಮಾನವನ್ನ ಹುಟ್ಟುಹಾಕಿದೆ. ಹಾಗಾದ್ರೆ ಏನದು ವಿವಾದಾತ್ಮಕ ಹೇಳಿಕೆ..? ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅದು ಬ್ರಹ್ಮಾಸ್ತ್ರವಾಗಿ ಪರಿಣಮಿಸಿದ್ದು ಹೇಗೆ.? ಪಾಪ ಶೆಟ್ರಿಗೆ ಯಾಕೆ ಇಂಥಾ ದುಸ್ಥಿತಿ ಅಂದ್ರಾ.?

ಬಿಜೆಪಿ ಮತ್ತು ಜೆಡಿಎಸ್​ ನಾಯಕರು ಗೊತ್ತಿದ್ದು ಮಾತಾಡ್ತಿದ್ದಾರೋ.? ಇಲ್ಲ, ಬಾಯ್​ ತಪ್ಪಿ ಮಾತಾಡ್ತಿದ್ದಾರೋ ಗೊತ್ತಿಲ್ಲ.. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಮಹಿಳೆಯ ಬಗ್ಗೆ ಕೇವಲವಾದ ಮಾತುಗಳನ್ನ ಆಡ್ತಿದ್ದಾರೆ. ಆ ಮೂಲಕ ಕಾಂಗ್ರೆಸ್​ ನಾಯಕರ ಕೈಗೆ ಚಾಟಿ ಕೊಟ್ಟು ಹೊಡೆಸಿಕೊಳ್ಳುವಂತಾಗಿದೆ. ಕಳೆದ ಶನಿವಾರ ತುಮಕೂರಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಅಂತೇಳಿ ಭಾರೀ ವಿವಾದಕ್ಕೆ ಕಾರಣವಾಗಿದ್ರು. ಇದರ ಬೆನ್ನಲ್ಲೇ, ಇದೀಗ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ ಸಂಜಯ ಪಾಟೀಲ್‌ ಅವರು ಸಚಿವೆ ಲಕ್ಷ್ಮಿ ಹೆಬ್ಬಳ್ಕರ್‌ ಬಗ್ಗೆ ಆಡಿದ ಆ ಒಂದೇ ಒಂದು ಮಾತು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಪರೋಕ್ಷವಾಗಿ ಶೆಟ್ರ ಚುನಾವಣಾ ಭವಿಷ್ಯದ ಮೇಲೆ ನೆಗೆಟಿವ್ ಪರಿಣಾಮ ಬೀರುವಂತೆ ಮಾಡಿದೆ.

ಹಾಗಾದ್ರೆ ಸಂಜಯ್​ ಪಾಟಿಲ್ ಹೇಳಿದ್ದೇನು ಗೊತ್ತಾ? “ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ಕ ಬೆಂಬಲ ನೋಡಿದರೆ ಅಕ್ಕ ನಿದ್ದೆಗೆಡುತ್ತಾರೆ. ಅವರು ನಿದ್ದೆ ಮಾತ್ರೆ ತೆಗೆದುಕೊಳ್ಳಬೇಕು ಇಲ್ಲ ಒಂದು ಪೆಗ್‌ ಹೆಚ್ಚು ಕುಡಿಯಬೇಕು ಅಂತೇಳಿ ಸಂಜಯ ಪಾಟೀಲ್‌ ಹೇಳಿದ್ರು..ಸಂಜಯ್ ಪಾಟಿಲ್ ಕೊಟ್ಟಿರೋ ಈ ಒಂದು ಹೇಳಿಕೆ ಬೆಳಗಾವಿ ಭಾಗದಲ್ಲಿ ಕಿಚ್ಚು ಹಚ್ಚಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪರ ಬೆಂಬಲಿಗ ಮಹಿಳೆಯರು ಬೀದೀಗಿಳಿದು ಪ್ರತಿಭಟನೆ ನಡೆಸಿದ್ದಾರೆ.

ಇನ್ನ ಈ ಬಗ್ಗೆ ರೊಚ್ಚಿಗೆದ್ದಿರೋ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ‌. ನನಗೆ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಇದು. ನಾಲಿಗೆ ಮೇಲೆ ಹಿಡಿತ ಇರಬೇಕು, ವೇದಿಕೆ ಮೇಲೆ ಇದ್ದವರು ಏಕೆ ತಡೆಯಲಿಲ್ಲ.? ಸಂಜಯ ಪಾಟೀಲ್ ಮೂಲಕ ಮಾತನಾಡಿಸಿದ್ದಾರಾ ಅಂತೇಳಿ ಮಾಜಿ ಶಾಸಕ ಸಂಜಯ ಪಾಟೀಲ್‌ ‌ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಖಾರವಾಗಿ ರಿಯಾಕ್ಟ್ ಮಾಡಿದ್ದಾರೆ.

ಮಹಿಳೆಯ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಮಹಿಳೆಯರ ಸಬಲೀಕರಣ ವಿರೋಧಿಗಳು ಬಿಜೆಪಿಯವರು. ಗ್ಯಾರಂಟಿ ಯೋಜನೆಯ ಬಗ್ಗೆಯೂ ವಿರೋಧ ಮಾಡುತ್ತಾರೆ ಅಂತೇಳಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಕಿಡಿಕಾರಿದ್ದಾರೆ. ಇನ್ನ ಈ ವಿವಾದ ತಮ್ಮ ಚುನಾವಣಾ ರಾಜಕೀಯಕ್ಕೆ ಕಪ್ಪು ಚುಕ್ಕೆ ಆಗಿ ಪರಿಣಮಿಸುತ್ತಿದೆ ಅಂತ ಭಾವಿಸಿರೋ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ರಿಯಾಕ್ಟ್ ಮಾಡಿದ್ದಾರೆ. ಸಂಜಯ್‌ ಪಾಟೀಲ ‌ಆಡಿರುವ ಮಾತುಗಳು ಬಿಜೆಪಿ ಅಜೆಂಡಾ ‌ಅಲ್ಲವೇ ಅಲ್ಲ. ಸಂಜಯ ಪಾಟೀಲ್‌ ಜೊತೆಗೆ ಮತ್ತೊಮ್ಮೆ ಸಮಾಲೋಚನೆ ಮಾಡುತ್ತೇನೆ. ನಾನೂ ವೇದಿಕೆ ಮೇಲೆ ಇದ್ದೆ, ಆದರೆ ಸಂಜಯ ಪಾಟೀಲ ಇದಕ್ಕೆ ಸ್ಪಷ್ಟೀಕರಣ ನೀಡಿದ್ರೆ ಉತ್ತಮವಾಗಿದೆ. ನಾವು ಎಲ್ಲ ಕಾರ್ಯಕ್ರಮಗಳಲ್ಲೂ ವೇದಿಕೆ ಮೇಲೆ ಇರುತ್ತೇವೆ, ಎಲ್ಲರ ಭಾಷಣ ಗ್ರಹಿಸಿಕೊಳ್ಳಲು ಸಾಧ್ಯವಾಗಲ್ಲ. ಹೀಗಾಗಿ ಸಂಜಯ ಪಾಟೀಲ ಜೊತೆಗೆ ಸಮಾಲೋಚನೆ ‌ಮಾಡಿ ನಿರ್ಧಾರಕ್ಕೆ ಬರುತ್ತೇನೆ ಎಂದರು. ಸಂಜಯ ಪಾಟೀಲ ಹೇಳಿಕೆ ಲಿಂಗಾಯತ ‌ಸಮಾಜಕ್ಕೆ ಮಾಡಿದ ಅನ್ಯಾಯ ಎಂಬ ಹೆಬ್ಬಾಳ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಲ್ಲ ವಿಚಾರಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದಾರೆಯೋ ನನಗೆ ತಿಳಿಯುತ್ತಿಲ್ಲ. ಲಿಂಗಾಯತ ‌ಸಮಾಜಕ್ಕೆ, ಪಾಟೀಲ ಹೇಳಿಕೆಗೆ ಏನು ಸಂಬಂಧ ಇದೆ. ಹೇಳಿಕೆ ತಪ್ಪಾಗಿದ್ರೆ ತಪ್ಪು ಎಂದು ಹೇಳೋಣ, ಸಮುದಾಯಕ್ಕೆ ಹೋಗಿ ಮುಟ್ಟಿಸುವುದು ಸರಿಯಲ್ಲ ಅಂತೇಳಿದ್ದಾರೆ ಶೆಟ್ರು.ಅದೇನೇ ಇರ್ಲಿ, ಮಾಜಿ ಶಾಸಕ ಸಂಜಯ್​ ಪಾಟೀಲ್ ಕೊಟ್ಟಿರೋ ಹೇಳಿಕೆ ಬೆಳಗಾವಿ ಲೋಕಸಭಾ ಅಖಾಡದಲ್ಲಷ್ಟೇ ಅಲ್ಲ., ಇಡೀ ರಾಜ್ಯದ ಉದ್ದಗಲಕ್ಕೂ ಸಿಕ್ಕಾಪಟ್ಟೆ ಸದ್ದು ಮಾಡ್ತಾಯಿದೆ. ಭಾಷಣಾ ಮಾಡೋವಾಗ ರಾಜರೋಷವಾಗಿ ವಾಗ್ದಾಳಿ ನಡೆಸೋದು. ಆ ನಂತರ ನಾನು ಹಂಗೆ ಹೇಳಿಲ್ಲ. ಹಿಂಗೆ ಹೇಳ್ದೆ ಅಂತ ಸ್ಪಷ್ಟಣೆ ಕೊಡೋದು ಎಷ್ಟು ಸರಿ..? ಸಂಜಯ್ ಪಾಟಿಲ್ ಅವರ ಈ ಹೇಳಿಕೆ ಬೆಳಗಾವಿಯಲ್ಲಿ ಶೆಟ್ರ ರಾಜಕೀಯ ಭವಿಷ್ಯಕ್ಕೆ ಕಪ್ಪು ಚುಕ್ಕೆಯಾಗಿ ಮಾರ್ಪಡುತ್ತಾ?

Share.
Leave A Reply

Exit mobile version