ಸಾಗರ: ವಿಎ ಒಬ್ಬರು ಸಾಗರ ತಹಸೀಲ್ದಾರ್ ಕಚೇರಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆ ನಡೆದಿದೆ. ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಲಾ ಆತ್ಮಹತ್ಯೆಗೆ ಯತ್ನಿಸಿದವರು.
ತಹಶೀಲ್ದಾರ್‌ರ ಕಿರುಕುಳದಿಂದ ಬೇಸತ್ತಿದ್ದ ಅವರು ತಹಶೀಲ್ದಾರರ ಕಚೇರಿಯಲ್ಲಿಯೇ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಕೇಳಿ ಬಂದಿದೆ. ಇವರು ಕಳೆದ ಮೂರ್ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರ ಬಳಿಯಲ್ಲಿಯೇ ಡೆತ್‌ನೋಟ್ ಸಿಕ್ಕಿದ್ದು, ಆರೋಗ್ಯದ ಸಮಸ್ಯೆಯಿದ್ದರೂ ತಹಶೀಲ್ದಾರರು ದೂರದ ಊರಿನಲ್ಲಿ ಕೆಲಸಕ್ಕೆ ಹಾಕಿದ್ದಾರೆ. ಬದಲಾಯಿಸಿಕೊಡಲು ಒಪ್ಪುತ್ತಿಲ್ಲ. ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಕಚೇರಿಯಲ್ಲೇ ಅಸ್ವಸ್ಥರಾದ ಅವರನ್ನು ಕೂಡಲೇ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.
ತಹಶೀಲ್ದಾರರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದು, ಮನೆಗೆ ಹತ್ತಿರವಿರುವ ಬರೂರು ವೃತ್ತಕ್ಕೆ ವರ್ಗಾಯಿಸುವಂತೆ ವಿನಂತಿಸಿಕೊAಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅರೆಹದದ ಜತೆಯಲ್ಲಿ ಮರತ್ತೂರು ವೃತ್ತವನ್ನೂ ನಿರ್ವಹಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ರಜೆ ಕೊಡುವಂತೆ ಮನವಿ ಮಾಡಿಕೊಂಡಿದ್ದರೂ, ಉಪ ತಹಶೀಲ್ದಾರರ ಮೂಲಕ ನೋಟೀಸ್ ಕೊಡುತ್ತಿದ್ದಾರೆ. ಇದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಮುಂದಾಗಿರುವುದಾಗಿ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ
ತ್ಯಾಗರ್ತಿ ಮೂಲದ ವಿಮಲಾ ಕಳೆದ ಮೂರ್ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಲ್ಲದೇ ಮರತ್ತೂರು ಗ್ರಾಮ ಲೆಕ್ಕಾಧಿಕಾರಿಯಾಗಿಯೂ ಕೆಲಸ ಮಾಡುವಂತೆ ತಹಶೀಲ್ದಾರರು ಸೂಚಿಸಿದ್ದರು. ಆದರೆ ಚುನಾವಣಾ ಸಂದರ್ಭದಲ್ಲಿ ಆರೋಗ್ಯದ ಸಮಸ್ಯೆಯಿಂದಾಗಿ ರಜೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ವಿಮಲಾರನ್ನು 15 ದಿನಗಳ ಕಾಲ ಬರೂರು ವೃತ್ತಕ್ಕೆ ವರ್ಗಾಯಿಸಲಾಗಿತ್ತು. ಆರೋಗ್ಯ ಸುಧಾರಿಸಿದ ಬಳಿಕ ಮೊದಲಿನ ಸ್ಥಾನಕ್ಕೆ ಹಾಜರಾಗುವಂತೆ ತಹಶೀಲ್ದಾರರು ನಿರ್ದೇಶಿಸಿದ್ದರು ಎಂಬ ಮಾಹಿತಿ ಇದೆ.
ತಹಶೀಲ್ದಾರ್ ಅವರು ಸಿಬ್ಬಂದಿಗಳ ನಡುವೆ ತಾರತಮ್ಯ ಮಾಡುತ್ತಾರೆ. ಈ ಹಿಂದೆ ವಿಮಲಾರವರಿಗೆ ಹೆರಿಗೆ ಆದಾಗ ಹೆರಿಗೆ ವೈದ್ಯಕೀಯ ಭತ್ಯೆ 60,140 ರೂ.ಗಳಾಗಿವೆ ಎಂದು ದಾಖಲಾತಿ ಸಮೇತ ನೀಡಿದರೂ, ಭತ್ಯೆ ಬಿಡುಗಡೆಗೆ ತಹಶೀಲ್ದಾರ್ ಲಂಚ ನೀಡಲು ಒತ್ತಾಯಿಸಿರುವುದಾಗಿ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನು ಎಸಿ ಅವರು ನೀಚಡಿ ವೃತ್ತಕ್ಕೆ ವರ್ಗ ನೀಡಿದರೆ ಎಸಿ ಆದೇಶವನ್ನೇ ಉಲ್ಲಂಘಿಸಿ ಅರೆಹದ ವೃತ್ತಕ್ಕೆ ತಹಶೀಲ್ದಾರ್ ಹಾಕಿದ್ದಾರೆ ಎಂದು ಡೆತ್ ನೋಟ್ ಬರೆದಿದ್ದಾರೆ.
—