ಶಿವಮೊಗ್ಗ : ಸದ್ಯ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ತುಂಗಾ ಜಲಾಶಯ ತುಂಬಿದೆ. ಈ ಸ್ವಚ್ಛಂದವನ್ನು ಆನಂದಿಸಲು ಪ್ರೇಮಿಗಳು ಕೂಡ ಇಲ್ಲಿಗೆ ಆಗಮಿಸುತ್ತಿದ್ದಾರೆ. ಈ ನಡುವೆ ಇಬ್ಬರು ಪ್ರೇಮಿಗಳ ಮೇಲೆ ನೈತಿಕ ಪೊಲೀಸ್ ಗಿರಿ ನಡೆದಿದೆ ಎನ್ನಲಾಗಿದೆ
ಚಿಕ್ಕಮಗಳೂರಿನಿಂದ ತುಂಗಾ ಜಲಾಶಯ ವೀಕ್ಷಣೆಗೆ ಇಬ್ಬರು ಪ್ರೇಮಿಗಳು ಬಂದಿದ್ದರು. ಜೊತೆಗೆ ಸ್ನೇಹಿತನೊಬ್ಬ ಕೂಡ ಬಂದಿದ್ದ. ಹೀಗಿರುವಾಗ ಶಿವಮೊಗ್ಗ ತಾಲೂಕಿನ ತುಂಗಾ ಜಲಾಶಯ ಬಳಿ ನೈತಿಕ ಪೊಲೀಸ್ ಗಿರಿ ನಡೆದಿದೆ.
ಸ್ಥಳೀಯ ನಾಲ್ವರು ಯುವಕರಿಂದ ಅನುಚಿತ ವರ್ತನೆ ಮತ್ತು ಇಬ್ಬರು ಯುವಕರ ಮೇಲೆ ಹಲ್ಲೆ ಆರೋಪ ಮಾಡಿದ್ದಾರೆ. ಹಲ್ಲೆ ಮಾಡುತ್ತಿದ್ದಂತೆ ಪ್ರಿಯಕರ ಹಾಗೂ ಆತನ ಸ್ನೇಹಿತ ಸ್ಥಳದಿಂದ ಓಡಿಹೋಗಿದ್ದಾರೆ.
ಯುವತಿಯನ್ನು ಮಾತ್ರ ಸ್ಥಳೀಯ ಯುವಕರು ಸ್ಥಳದಲ್ಲೇ ಇರಿಸಿಕೊಂಡಿದ್ದಾರೆ. ಯುವತಿ ಕಿಡ್ನ್ಯಾಪ್ ಬಗ್ಗೆ ಪ್ರಿಯಕರ ಹಾಗೂ ಸ್ನೇಹಿತನಿಂದ ದೂರು ನೀಡಲಾಗಿದೆ.
ದೂರು ಮೇರೆಗೆ ಸ್ಥಳಕ್ಕೆ ತೆರಳಿದ್ದ ತುಂಗಾನಗರ ಠಾಣೆ ಪೊಲೀಸರು ಯುವತಿ, ಸ್ಥಳೀಯ ಯುವಕರನ್ನು ಠಾಣೆಗೆ ಕರೆತಂದಿದ್ದು, ಯುವತಿ ಹಾಗೂ ಯುವಕರ ವಿಚಾರಣೆ ಮಾಡಿದ್ದಾರೆ.