ದಾವಣಗೆರೆ : ಮೂಡ ಹಗರಣ ಕಾಂಗ್ರೆಸ್ ಸರ್ಕಾರವನ್ನ ಸಂಕಷ್ಟಕ್ಕೆ ಸಿಲುಕಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆದಂಡ ಫಿಕ್ಸ್ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ದಲಿತರನ್ನ ವೋಟ್ ಬ್ಯಾಂಕ್ ಆಗಿ ಮಾತ್ರ ಕಾಂಗ್ರೆಸ್ ಬಳಸುತ್ತಿದೆ ಎನ್ನುವ ಆರೋಪಗಳಿಗೆ ಕಾಂಗ್ರೆಸ್ ಹೈಕಮಾಂಡ್ ಟಕ್ಕರ್ ಕೊಡುವ ಸಾಧ್ಯತೆ ಇದೆ.75 ವರ್ಷಗಳ ನಂತರ ಕರ್ನಾಟಕಕ್ಕೆ ದಲಿತ ಸಿಎಂ ಆಗುವುದು ಖಚಿತ ಎನ್ನುವಂತಹ ಮಾಹಿತಿ ಸಿಕ್ಕಿದೆ. ಹಾಗಾದ್ರೆ ಯಾರು ಆಗಲಿದ್ದಾರೆ ಮುಂದಿನ ಮುಖ್ಯಮಂತ್ರಿ? ಸಿದ್ದರಾಮಯ್ಯ ರಾಜಿನಾಮೆ ಕೊಡಲು ಒಪ್ಪಿದ್ರಾ? ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ.
ಐದು ಗ್ಯಾರಂಟಿ ಯೋಜನೆಗಳ ಮೂಲಕ ದೇಶಾದ್ಯಂತ ಸದ್ದು ಮಾಡಿರುವಂತಹ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಹಗರಣದ ಮೂಲಕ ಖುಕ್ಯಾತಿ ಪಡೆಯುತ್ತಿದೆ. ವಾಲ್ಮೀಕಿ ಹಗರಣದ ನಂತರ ಸ್ವತಃ ಸಿಎಂ ಸಿದ್ದರಾಮಯ್ಯ ಅವರ ಮೇಲೆಯೇ ಮೂಡ ಹಗರಣ ಸುತ್ತಿಕೊಂಡಿದೆ. ಸಿಎಂ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ ಆರೋಪವನ್ನು ಬಿಜೆಪಿ ನಾಯಕರು ಪದೇಪದೇ ಪ್ರಸ್ತಾಪ ಮಾಡುವ ಮೂಲಕ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ನಾಯಕರಿಗೆ ಮುಜುಗರ ತರುತ್ತಿದ್ದಾರೆ. ಈ ಮುಜುಗರದಿಂದ ತಪ್ಪಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಒಂದೇ ಪರಿಹಾರ ಎನ್ನುವಂತ ತೀರ್ಮಾನಕ್ಕೆ ಕಾಂಗ್ರೆಸ್ ಹೈಕಮಾಂಡ್ ಬಂದಿದೆ ಎಂದು ಹೇಳಲಾಗುತ್ತಿದೆ.
ಮೂಡ ಹಗರಣ ಕುರಿತು ಲೋಕಾಯುಕ್ತ ತನಿಖೆಯಾಗಿದ್ದರೆ ಕಾಂಗ್ರೆಸ್ ಹೈಕಮಾಂಡ್ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಮೂಡ ಹಗರಣ ಕುರಿತು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ತರಿಸಿದೆ. ಈ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾವುದೇ ಕ್ಷಣದಲ್ಲಾದರೂ ಇ.ಡಿ ನೋಟಿಸ್ ನೀಡಬಹುದು ಅಥವಾ ಬಂಧನ ಕೂಡ ಮಾಡಬಹುದು. ಸ್ವತಃ ಮುಖ್ಯಮಂತ್ರಿ ಬಂದನವಾದರೆ ಕಾಂಗ್ರೆಸ್ ಹೈಕಮಾಂಡಿಗೆ ತೀವ್ರ ತರಹದ ಮುಸುಗರ ಉಂಟಾಗಲಿದ್ದು, ಇದರಿಂದ ಪಾರಾಗಲು ರಾಜೀನಾಮೆ ಒಂದೇ ದಾರಿ ಎನ್ನುವ ತೀರ್ಮಾನಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.
ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ದಲಿತ ನಾಯಕರಿಗೆ ಮುಖ್ಯಮಂತ್ರಿ ಪಟ್ಟ ಕಟ್ಟುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಆಗಲು ಮಲ್ಲಿಕಾರ್ಜುನ ಖರ್ಗೆ ಅವರು ಇಂಗಿತ ವ್ಯಕ್ತಪಡಿಸಿದ್ದು ಹೈಕಮಾಂಡ್ ನಾಯಕರು ದಲಿತರಿಗೆ ಸಿಎಂ ಹುದ್ದೆ ಕೊಡುವ ಮೂಲಕ ದಲಿತರ ಮತಗಳನ್ನ ಕಾಂಗ್ರೆಸ್ ಕಡೆ ಸೆಳೆಯಲು ತೀರ್ಮಾನ ಮಾಡಿದೆ.
ಇದರ ಭಾಗವಾಗಿಯೇ ಗೃಹ ಸಚಿವ ಪರಮೇಶ್ವರ್ ಅವರ ಮನೆಯಲ್ಲಿ ದಲಿತ ನಾಯಕರು ಗುಪ್ತವಾಗಿ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಗೃಹ ಸಚಿವ ಪರಮೇಶ್ವರ್ ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಒಂದು ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಿದರೆ ಮುಂದಿನ ಸಿಎಂ ದಲಿತರೇ ಆಗಬೇಕು ಎನ್ನುವ ನಿರ್ಣಯವನ್ನು ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನ ಬಿಟ್ಟುಕೊಡಬಾರದು. ಸಿದ್ದರಾಮಯ್ಯ ಬೆಂಬಲಿಗರೊಂದಿಗೆ ದಲಿತ ಸಿಎಂ ನೇಮಕ ಮಾಡಲು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ದಲಿತ ಸಿಎಂ ರೇಸ್ ನಲ್ಲಿ ಬಹುಮುಖ್ಯವಾಗಿ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮುಂಚುಣಿಯಲ್ಲಿದ್ದಾರೆ. ಅವರು ಸಿಎಂ ಹುದ್ದೆಯನ್ನು ನಿರಾಕರಿಸಿದರೆ ಹಿರಿತನದ ಆಧಾರದ ಮೇಲೆ ಪರಮೇಶ್ವರ ಅವರು ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಪರಮೇಶ್ವರ್ ಅವರಿಗೆ ಸಿದ್ದರಾಮಯ್ಯ ಬೆಂಬಲ ನೀಡದಿದ್ದರೆ, ನಾಯಕ ಸಮಾಜದ ಸತೀಶ್ ಜಾರಕಿಹೊಳಿಗೆ ಅದೃಷ್ಟ ಒಲಿಯಲಿದೆ. ಸತೀಶ್ ಜಾರಕಿಹೊಳಿಗೆ ಅವಕಾಶ ನೀಡಿದರೆ ಉತ್ತರ ಕರ್ನಾಟಕಕ್ಕೆ ಅವಕಾಶ ನೀಡುವ ಜೊತೆಗೆ ದಲಿತರಿಗೆ ಸರ್ಕಾರ ಉನ್ನತ ಹುದ್ದೆ ನೀಡಿದೆ ಎಂದು ಕೇಂದ್ರ ಕಾಂಗ್ರೆಸ್ ಹೈಕಮಾಂಡ್ ಬಿಂಬಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲಿ ಮುಡಾ ಹಗರಣ ದೊಡ್ಡಮಟ್ಟದ ಸದ್ದು ಮಾಡುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆದಂಡ ಕೂಡ ಸನಿಹವಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಅಹಿಂದ ವರ್ಗ ಹೇಗೆ ಸ್ವೀಕಾರ ಮಾಡಲಿದೆ ಎನ್ನುವುದು ಯಕ್ಷಪ್ರಶ್ನೆಯಾಗಿದೆ.