ಬೆಂಗಳೂರು : ರಾಜ್ಯದಲ್ಲಿ ಮಹಿಳೆಯರಿಗಿಂತ ಪುರುಷರ ಆತ್ಮಹತ್ಯೆ ಹೆಚ್ಚಾಗುತ್ತಿದೆ ಎಂದು ಮೈಸೂರಿನ ‘ಒಡನಾಡಿ’ ಸೇವಾ ಸಂಸ್ಥೆಯು ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಯಲ್ಲಿ ಗೊತ್ತಾಗಿದೆ.
ರಾಜ್ಯ ಅಪರಾಧ ದಾಖಲಾತಿ ವಿಭಾಗವು ಎಲ್ಲ ಜಿಲ್ಲೆಗಳು, ಪ್ರಮುಖ ನಗರಗಳು, ಕರ್ನಾಟಕ ರೈಲ್ವೆ ಮತ್ತು ಕೆಜಿಎಫ್ ಪೊಲೀಸ್ ಜಿಲ್ಲೆ ಸೇರಿ 38 ವಿಭಾಗಗಳ ಅಡಿ ನೀಡಿರುವ ಅಂಕಿ ಅಂಶದಲ್ಲಿ ಈ ಮಾಹಿತಿ ಇದೆ.
ಎಷ್ಟು ಪುರುಷರು ಆತ್ಮಹತ್ಯೆ
ರಾಜ್ಯದಲ್ಲಿ 2021ರಿಂದ 2023ರವರೆಗೆ ಮೂರು ವರ್ಷಗಳಲ್ಲಿ 28,324 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳಿಗಿಂತ ಮೂರು ಪಟ್ಟಿಗೂ ಹೆಚ್ಚಿದೆ. ಈ ಅವಧಿಯಲ್ಲಿ 8,159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುರುಷ–ಮಹಿಳೆಯರ ಆತ್ಮಹತ್ಯೆಯಲ್ಲಿ ರಾಜಧಾನಿ ಬೆಂಗಳೂರೇ ಮುಂದಿದೆ.
ಬೆಂಗಳೂರು ನಗರದ ನಂತರ, ಕ್ರಮವಾಗಿ ಬೆಳಗಾವಿ, ಬೆಂಗಳೂರು ಜಿಲ್ಲೆ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಆತ್ಮಹತ್ಯೆಗಳು ನಡೆದಿವೆ. ಈ ನಾಲ್ಕೂ ಜಿಲ್ಲೆಗಳಲ್ಲಿ ತಲಾ ಸಾವಿರಕ್ಕೂ ಹೆಚ್ಚು ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು, ಹಾವೇರಿ, ಉಡುಪಿ, ವಿಜಯಪುರ, ದಾವಣಗೆರೆ, ಮೈಸೂರಿನಲ್ಲೂ ಹೆಚ್ಚಿವೆ.
ಎಷ್ಟು ಆತ್ಮಹತ್ಯೆ
ರಾಜ್ಯದಲ್ಲಿ 2021ರಲ್ಲಿ 9243 ಪುರುಷರು ಅತ್ಮಹತ್ಯೆ ಮಾಡಿಕೊಂಡರೇ, 2713 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತೆಯೇ 2022 ರಲ್ಲಿ 9523 ಪುರುಷರು, 2783 ಮಹಿಳೆ, 2023 ರಲ್ಲಿ 9550 ಪುರುಷರು, 2663 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟಾರೆ 28324 ಪುರುಷರು, 6159 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಲ್ಲಿ ಎಷ್ಟು ಪುರುಷರ ಆತ್ಮಹತ್ಯೆ
ಬೆಂಗಳೂರಿನಲ್ಲಿ 4859, ಬೆಳಗಾವಿ-1859, ಬೆಂಗಳೂರು-1159, ಶಿವಮೊಗ್ಗ-1142, ತುಮಕೂರಿನಲ್ಲಿ -1008 ಪುರುಷರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಎಲ್ಲಿ ಎಷ್ಟು ಮಹಿಳೆಯರು ಆತ್ಮಹತ್ಯೆ
ಬೆಂಗಳೂರು ನಗರ-1770, ಬೆಳಗಾವಿ-462, ಬೆಂಗಳೂರು ಜಿಲ್ಲೆ-379, ತುಮಕೂರು-337, ಶಿವಮೊಗ್ಗ-329 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ
ಮಹಿಳೆ ಆತ್ಮಹತ್ಯೆ ಇಳಿಕೆ
ಮೂರು ವರ್ಷದಲ್ಲಿ, ವರ್ಷದಿಂದ ವರ್ಷಕ್ಕೆ ಪುರುಷರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿದ್ದರೆ, ಮಹಿಳೆಯರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾಗಿವೆ ಎಂಬುದೂ ಅಂಕಿ ಅಂಶದಿಂದ ಗೊತ್ತಾಗುತ್ತದೆ.
ಒತ್ತಡವೇ ಕಾರಣ
ಪುರುಷರ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚಿರುವುದರ ಬಗ್ಗೆ ಆತಂಕ ವ್ಯಕ್ತಪಡಿಸಿದ ‘ಒಡನಾಡಿ’ ಸಂಸ್ಥೆಯ ನಿರ್ದೇಶಕ ಎಂ.ಎಲ್.ಪರಶುರಾಮ್, ‘ಕೃಷಿಗಾಗಿ ಮಾಡಿದ ಸಾಲ ತೀರಿಸ ಲಾಗದ ಅಸಹಾಯಕತೆ, ಮಕ್ಕಳ ಶಿಕ್ಷಣ, ಮದುವೆಗಾಗಿ ಮಾಡಿದ ಸಾಲ, ಒಂಟಿ ತನ, ಕುಡಿತ, ಅನಾರೋಗ್ಯದಿಂದ ಮೂಡಿದ ಜಿಗುಪ್ಸೆ, ಲೈಂಗಿಕ ಅಶಕ್ತತೆ, ಪತ್ನಿ ಹಾಗೂ ಸಂಬಂಧಿಕರಿಂದ, ಮೇಲ ಧಿಕಾರಿಗಳಿಂದ ಕಿರುಕುಳ, ಅಕ್ರಮ ಸಂಬಂಧಗಳು ಸೇರಿ ಸಾಮಾಜಿಕ ಒತ್ತಡ ಗಳೂ ಹಲವು ಪುರುಷರ ಆತ್ಮಹತ್ಯೆಗೆ ಕಾರಣ’ ಎಂದು ಹೇಳುತ್ತಾರೆ.
‘ಕೌಟುಂಬಿಕ ಮತ್ತು ಔದ್ಯೋಗಿಕ ಒತ್ತಡಗಳ ನಿರ್ವಹಣೆಯಲ್ಲಿ ಸೋಲು, ಜೀವನಪ್ರೀತಿಯನ್ನು ಮೂಡಿಸುವಲ್ಲಿ ಸಮೂಹ ಮಾಧ್ಯಮಗಳ ವೈಫಲ್ಯವೂ ಪುರುಷರನ್ನು ಆತ್ಮಹತ್ಯೆಗೆ ಪ್ರಚೋದಿಸಿರಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಧ್ಯಯನ ಅಗತ್ಯ
ಇಷ್ಟೊಂದು ಸಂಖ್ಯೆಯಲ್ಲಿ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದರ ಖಚಿತ ಹಿನ್ನೆಲೆ, ಕಾರಣ, ಪ್ರೇರಣೆ ಹಾಗೂ ಪರಿಹಾರಗಳ ಅಧ್ಯಯನ ತುರ್ತಾಗಿ ನಡೆಯಬೇಕು. ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯು (ನಿಮ್ಹಾನ್ಸ್) ಈ ನಿಟ್ಟಿನಲ್ಲಿ ಪ್ರಯತ್ನಿಸುವುದು ಅತ್ಯವಶ್ಯ’ ಎಂದೂ ಹೇಳಿದರು.