ಬೆಂಗಳೂರು: ರಾಜಾಧಾನಿ ಬೆಂಗಳೂರು ಮಾದಕ ವಸ್ತುಗಳ ತಾಣವಾಗುತ್ತಿದ್ದು, ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ ಅದು ಮುಂದುವರಿಯುತ್ತಲೆ ಇದೆ ಎಂಬುದಕ್ಕೆ ಕಳೆದ ವರ್ಷ ದಾಖಲಾದ ಪ್ರಕರಣಗಳೇ ಸಾಕ್ಷಿಯಾಗಿದ್ದು, ಅದರ ಕಂಪ್ಲೀಂಟ್ ಡೀಟೆಲ್ಸ್ ನಿಮ್ಮ ಮುಂದೆ.
ಹೌದು..ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ನಿರಂತರ ಕಾರ್ಯಾ ಚರಣೆ ನಡೆಸುತ್ತಿರುವ ಪೊಲೀಸರು ಕಳೆದ ವರ್ಷ (2024) ಬರೋಬ್ಬರಿ ರೂ. 100 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಈ ಸಂಬಂಧ 550 ಪ್ರಕರಣಗಳನ್ನು ದಾಖಲಿಸಿ 2,662 ಕೆ.ಜಿ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, 742 ದಂಧೆಕೋರರನ್ನು ಬಂಧಿಸಿದ್ದಾರೆ. .
2023ರಲ್ಲಿ 3,433 ಪ್ರಕರಣಗ ಳನ್ನು ದಾಖಲಿಸಿ 4,399 ಮಂದಿಯನ್ನು ಬಂಧಿಸಿ, ಸುಮಾರು ₹103 ಕೋಟಿ ಮೌಲ್ಯದ 5,387 ಕೆ.ಜಿ ಮಾದಕ ವಸ್ತು ವಶಕ್ಕೆ ಪಡೆದಿದ್ದರು. 2024ರಲ್ಲಿ ಗಾಂಜಾ, ಬ್ರೌನ್ ಶುಗರ್, ಅಫೀಮು, ಹೆರಾಯಿನ್ ಜೊತೆ ಸಿಂಥೆಟಿಕ್ ಡ್ರಗ್ಸ್ ಮಾರಾಟ ಪ್ರಮಾಣ ತುಸು ಇಳಿಕೆಯಾಗಿದೆ.
ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದವರನ್ನು ಬಂಧಿಸಲಾಗುತ್ತಿದೆ. ಡ್ರಗ್ಸ್ ಖರೀದಿಸಿ ಸೇವಿಸುತ್ತಿದ್ದವರನ್ನು ಬಂಧಿಸದ ಕಾರಣ ಬಂಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಡ್ಶೀಟ್ ಕವರ್, ಸೋಪ್ ಬಾಕ್ಸ್, ಚಾಕೋಲೆಟ್ ಬಾಕ್ಸ್, ಲಗೇಜ್ ಬ್ಯಾಗ್ಗಳಲ್ಲಿ ನಿಷೇಧಿತ ಮಾದಕವಸ್ತುಗಳನ್ನು ಅಡಗಿಸಿ ರೈಲು ಮತ್ತು ಬಸ್ಗಳ ಮೂಲಕ ಪ್ರಯಾಣಿಕರ ಸೋಗಿನಲ್ಲಿ ನಗರಕ್ಕೆ ತರಲಾಗುತ್ತಿದೆ. ಗೌಪ್ಯವಾದ ಸ್ಥಳದಲ್ಲಿ ಅವುಗಳನ್ನು ಇರಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ. ಇಂತಹವರ ಕಾರ್ಯಚಟುವಟಿಕೆಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಗಾಂಜಾ, ಕೊಕೇನ್, ಎಂಡಿಎಂಎ ಮಾತ್ರೆ, ಎಕ್ಸ್ಟೆಸಿ ಟ್ಯಾಬ್ಲೆಟ್, ಸಿಂಥೆಟಿಕ್ ಡ್ರಗ್ಸ್, ಅಫೀಮು, ಬ್ರೌನ್ ಶುಗರ್ ಮತ್ತಿ ತರ ನಶೆ ಬರಿಸುವ ಮಾದಕವಸ್ತುಗಳನ್ನು ವಿದೇಶಿ ಪ್ರಜೆಗಳು ಮತ್ತು ಸ್ಥಳೀಯ ಡ್ರಗ್ಸ್ ಪೆಡ್ಲರ್ಗಳು ಸಂಗ್ರಹಿಸಿ ಮಾರಾಟ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
‘ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತರಿಸಿಕೊಂಡು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತುಂಬಿ ಹೆಚ್ಚಿನ ಬೆಲೆಗೆ ಪೆಡ್ಲರ್ಗಳು ಮಾರಾಟ ಮಾಡುತ್ತಾರೆ. ತ್ರಿಪುರಾ, ಬಿಹಾರ, ಆಂಧ್ರಪ್ರದೇಶ, ಒಡಿಶಾ ಗಡಿ ಭಾಗಗಳಲ್ಲಿ ಬೆಳೆದ ಗಾಂಜಾವನ್ನು ರೈಲು ಬಸ್ಗಳ ಮೂಲಕ ಪೊಲೀಸರ ಕಣ್ತಪ್ಪಿಸಿ ತರುತ್ತಿದ್ದಾರೆ. ನಗರದಲ್ಲಿ ಸಣ್ಣಪುಟ್ಟ ಸಿಗರೇಟ್ ಅಂಗಡಿಗಳಲ್ಲಿ ಕದ್ದುಮುಚ್ಚಿ ಮಾದಕವಸ್ತು ಮಾರಾಟ ಮಾಡಲಾಗುತ್ತಿದೆ. ಮಾದಕವಸ್ತು ಮಾರಾಟಗಾರರ ಮೇಲೆ ಆಗಾಗ್ಗೆ ದಾಳಿ ನಡೆಸಲಾಗುತ್ತಿದೆ’ ಎಂದು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಯೊಬ್ಬರು ತಿಳಿಸಿದರು.
ಎಲ್ಲಿಂದ ಬರುತ್ತಿದೆ ಮಾದಕ ವಸ್ತುಗಳು
ಮಾದಕವಸ್ತು ಮಾರಾಟ ಜಾಲ ಪ್ರಕರಣದಲ್ಲಿ ಬಂಧಿತರಿಂದ ಹೆಚ್ಚಾಗಿ ಎಂಡಿಎಂಎ, ಗಾಂಜಾ, ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆದುಕೊಳ್ಳ ಲಾಗಿದೆ. ಅಧಿಕ ಬೆಲೆಯ ಸಿಂಥೆಟಿಕ್ ಡ್ರಗ್ಸ್ ದೆಹಲಿ ಹಾಗೂ ಮುಂಬೈನಿಂದ ನಗರಕ್ಕೆ ಬರುತ್ತಿದ್ದು, ಐಟಿ, ಬಿಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ.
ಯಾರಿಂದ ಮಾರಾಟ
‘ಮಾದಕವಸ್ತು ಪೂರೈಕೆ ಮತ್ತು ಮಾರಾಟ ಜಾಲದಲ್ಲಿ ಸ್ಥಳೀಯ ಪೆಡ್ಲರ್ ಹಾಗೂ ವಿದೇಶಿ ಪೆಡ್ಲರ್ಗಳು ಭಾಗಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿದೇಶಿ ಮಹಿಳೆಯನ್ನು ಬಂಧಿಸಿ ರೂ.24 ಕೋಟಿ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಫ್ರಿಕಾ ಮೂಲದವರು ಬಹುತೇಕ ಈ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ’. ಒಟ್ಟಾರೆ ಹಣಕ್ಕಾಗಿ ಬೇರೆಯವರ ಜೀವನವನ್ನು ಹಾಳು ಮಾಡುತ್ತಿರುವ ಈ ಪೆಡ್ಲರ್ ಗಳನ್ನು ಸುಮ್ಮನೆ ಬಿಡಬಾರದು.