ದಾವಣಗೆರೆ: ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದ ಅನ್ವಯ ಏ. 25 ರಂದು ವಿಶ್ವ ಮಲೇರಿಯಾ ದಿನ ಆಚರಿಸಲಾಗುತ್ತದೆ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಗಂಗಾಧರ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಲೇರಿಯಾ ವನ್ನು ನಿಯಂತ್ರಿಸುವ ಮತ್ತು ಅಂತಿಮವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಪ್ರತಿ ವರ್ಷ ಏ. 25 ರಂದು ವಿಶ್ವ ಮಲೇರಿಯಾ ದಿನ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಈ ವರ್ಷ ಹೆಚ್ಚು ಸಮಾನತೆಯ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವ್ರಗೊಳಿಸೋಣ… ಎಂಬ ಘೋಷಣೆ ಯೊಂದಿಗೆ ಆಚರಿಸಲಾಗುತ್ತಿದೆ. ಭಾರತದಲ್ಲಿ 2008 ರಿಂದ ವಿಶ್ವ ಮಲೇರಿಯಾ ದಿನ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
2025 ರ ವೇಳೆಗೆ ಕರ್ನಾಟಕವನ್ನು ಮಲೇರಿಯಾ ಮುಕ್ತಗೊಳಿಸುವ ಗುರಿಯನ್ನು ಸಾಧಿಸಬೇಕಾಗುವುದರಿಂದ ಎಲ್ಲಾ ಹಂತದಲ್ಲಿ ಮಲೇರಿಯಾ ನಿವಾರಣ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ರಕ್ತ ಪರೀಕ್ಷೆ, ಜ್ವರ ಸಮೀಕ್ಷೆ, ಡಿಡಿಟಿ ಸಿಂಪಡಣೆ, ಸಮಸ್ಯಾತ್ಮಕ ಪ್ರದೇಶದಲ್ಲಿ ಸೊಳ್ಳೆ ಪರದೆಗಳ ವಿತರಣೆ, ವಲಸೆ ಜನರ ಸಮೀಕ್ಷೆ, ಸೊಳ್ಳೆ ನಿಯಂತ್ರಣಕ್ಕಾಗಿ ಲಾರ್ವಾಹರಿ ಮೀನುಗಳ ಬಿಡುಗಡೆ ಒಳಗೊಂಡಂತೆ ಹಲವಾರು ನಿಯಂತ್ರಣ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆ ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದು ತಿಳಿಸಿದರು.ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಿ.ಡಿ. ಮುರುಳೀಧರ್, ಡಾ. ಸುರೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.