ಶಿವಮೊಗ್ಗ / ದಾವಣಗೆರೆ
ಕೋಲ್ಕತಾದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ- (ಐಎಂಎ) ಕರೆ ನೀಡಿರುವ 24 ಗಂಟೆಗಳ ರಾಷ್ಟ್ರವ್ಯಾಪಿ ವೈದ್ಯರ ಮುಷ್ಕರಕ್ಕೆ ಶಿವಮೊಗ್ಗ ಜಿಲ್ಲೆಯ ಎಲ್ಲ ವೈದ್ಯರು ಬೆಂಬಲ ನೀಡಿದ್ದಾರೆ.
ಇಂದು ಬೆಳಗ್ಗೆ ೬ ಗಂಟೆಯಿಂದಲೇ ಎಲ್ಲಾ ವೈದ್ಯರು ಆಸ್ಪತ್ರೆ ಸೇವೆ ಸ್ಥಗಿತಗೊಳಿಸಿ ಬಂದ್ ಗೆ ಬೆಂಬಲ ನೀಡಿದರು.ನಗರದ ಜಿಲ್ಲಾಸ್ಪತ್ರೆ,ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಬಂದ್ ನ ಬ್ಯಾನರ್ ಗಳು ಕಂಡು ಬಂದಿತ್ತು.ತುರ್ತು ಸೇವೆಗಳ ಹೊರತುಪಡಿಸಿದರೆ ಯಾವ ಸೇವೆ ಲಭ್ಯವಿರಲಿಲ್ಲ. ಭಾರತೀಯ ವೈದ್ಯಕೀಯ ಸಂಘದ ಮುಷ್ಕರಕ್ಕೆ ರಾಜ್ಯದ ಐಎಂಎ ಘಟಕ ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಯಲ್ಲಿ ದಾವಣಗೆರೆಯಲ್ಲಿ ಸರ್ಕಾರಿ ವೈದ್ಯರುಗಳೂ ಸಹ ಮುಷ್ಕರಕ್ಕೆ ಬೆಂಬಲ ನೀಡಿದ ಕಾರಣ ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಓಪಿಡಿ ಬಂದ್ ಮಾಡಿ ಮುಷ್ಕರ ನಡೆಸಿದರು. ಖಾಸಗಿಕ್ಲಿನಿಕ್ಗಳೂ ಸಹಕಾರ್ಯನಿರ್ವಹಿಸದೆ ಬಂದ್ ಮಾಡಿ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡಿದ್ದಾರೆ.
ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಕ್ರೂರ ಅಪರಾಧ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲೆ ಗೂಂಡಾಗಿರಿ ನಡೆಸಿದ ಕ್ರಮವನ್ನೂ ಭಾರತೀಯ ವೈದ್ಯಕೀಯ ಸಂಘ ತೀವ್ರವಾಗಿ ಖಂಡಿಸಿದೆ.
ವೈದ್ಯಕೀಯ ವಿದ್ಯಾರ್ಥಿನಿಯ ಹತ್ಯೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ಆರ್ಥಿಕ ಪರಿಹಾರ ನೀಡುವುದು ತನಿಖೆ ಮತ್ತು ವಿಚಾರಣೆಯ ತ್ವರಿತ ಟ್ರ್ಯಾಕಿಂಗ್ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೈದ್ಯರ ಮೇಲಿನ ಹಿಂಸಾಚಾರ, ಆಸ್ಪತ್ರೆ ಸುರಕ್ಷಿತ ವಲಯಗಳೆಂದು ಘೋಷಿಸುವುದು ಮತ್ತು ವೈದ್ಯಕೀಯ ವೃತ್ತಿಪರರಿಗೆ ಸಾಕಷ್ಟು ಭದ್ರತೆ ಒದಗಿಸುವ ಕುರಿತು ಕೇಂದ್ರಕಾನೂನನ್ನು ತಕ್ಷಣದ ಅನುಷ್ಠಾನ ಮಾಡುವಂತೆ ಸಂಘ ಒತ್ತಾಯಿಸಿದೆ.
ಪ್ರತಿಭಟನಾ ಮೆರವಣಿಗೆ
ಶಿವಮೊಗ್ಗದಲ್ಲಿ ಮೆಗ್ಗಾನ್ ಆಸ್ಪತ್ರೆಯಿಂದ ಗೋಪಿವೃತ್ತದ ವರೆಗೆ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದಲ್ಲಿ ಒಪಿಡಿ ಬಂದ್ ಮಾಡಿದ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಗೋಪಿ ವೃತದಲ್ಲಿ ಮಾನವ ಸರಪಳಿ ರಚಿಸಲಾಯಿತು. ಈ ವೇಳೆ ಎಂ ಎಲ್ ಸಿ ಹಾಗೂ ವೈದ್ಯರು ಆದ ಡಾ.ಧನಂಜಯ್ ಸರ್ಜಿ, ಸಿಮ್ಸ್ ನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.