ಮಾಯಕೊಂಡ : ದಾವಣಗೆರೆ ತಾಲೂಕು ಮಾಯಕೊಂಡ ಗ್ರಾಮದಲ್ಲಿರುವ ಗ್ರಾಮ ಪಂಚಾಯಿತಿ ಗ್ರಂಥಾಲಯಕ್ಕೆ ಇತ್ತೀಚೆಗೆ ಗ್ರಾಮ ಪಂಚಾಯಿತಿ ಡಿಜಿಟಲ್ ಟಚ್ ನೀಡಿದ್ದು ಸಂಪೂರ್ಣ ಕಂಪ್ಯೂಟರೀಕರಣಗೊಂಡಿದೆ.
ಸದಾ ಹಿಂದುಳಿದ ಊರು ಎಂದೇ ಪ್ರಖ್ಯಾತಗೊಂಡಿರುವ ಮಾಯಕೊಂಡದಲ್ಲಿ ಇಲ್ಲಿನ ಜನರು ಈಗ ಅಕ್ಷರ ಜ್ಞಾನವಂತಾರಾಗಿದ್ದಾರೆ. ಇದಕ್ಕಾಗಿ ಗ್ರಾಮ ಪಂಚಾಯಿತಿ ಕೈಜೋಡಿಸಿದ್ದು, ಗ್ರಾಮ ಪಂಚಾಯಿತಿ ಅನುದಾನ ನೀಡಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಅಭಿವೃದ್ಧಿಗೊಳಿಸಲು ಮತ್ತು ಡಿಜಿಟಲ್ ಟಚ್ ನೀಡಲು 3.5 ಲಕ್ಷ ಅನುದಾನ ನೀಡಿದ್ದು ಇದರಿಂದ ಗ್ರಂಥಾಲಯವನ್ನು ಉನ್ನತೀಕರಿಸಲಾಗಿದೆ. ಅಲ್ಲದೇ ಗ್ರಂಥಾಲಯದ ಕಟ್ಟಡವನ್ನು ನವಿಕೃತಗೊಳಿಸಿ ಬೇಕಾದ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವಂತೆ ಸೌಲಭ್ಯಗಳನ್ನ ಒದಗಿಸುವಂತೆ ಗ್ರಾಮದಲ್ಲಿನ ವಿದ್ಯಾವಂತ ಯುವಕರು ಒತ್ತಾಯಿಸಿದ್ದು, ಅದು ಕೂಡ ಶೀಘ್ರದಲ್ಲಿ ನೆರವೇರಲಿದೆ.
ಓದುವುದಕ್ಕೆ ಅನುಕೂಲ
ಗ್ರಾಮದಲ್ಲಿ ಪದವಿ, ಐಟಿಐ, ಕೆಪಿಎಸ್ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಗ್ರಂಥಾಲಯದಲ್ಲಿ ಪ್ರತಿನಿತ್ಯ ಅಭ್ಯಾಸ ಮಾಡುವುದು ಕಾಯಕವಾಗಿದೆ. ಜೊತೆಗೆ ಮಾಯಕೊಂಡ ಸುತ್ತಮುತ್ತಲಿನ ಹಲವಾರು ಗ್ರಾಮಗಳಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಬರುವುದರಿಂದ ಓದುವುದಕ್ಕೆ ಅನುಕೂಲವಾಗುತ್ತಿದೆ.
ಸುಮಾರು ಎರಡರಿಂದ ಮೂರು ಕೋಟಿ ಅನುದಾನ ತಂದರೆ ಸಾಕಷ್ಟು ಅಭಿವೃದ್ಧಿ
ಮಾಯಕೊಂಡ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು ಗ್ರಾಮದಲ್ಲಿ ಎಸ್ಇಪಿ ಟಿ ಎಸ್ ಪಿ ಅನುದಾನದಲ್ಲಿ ಸುಮಾರು ಎರಡರಿಂದ ಮೂರು ಕೋಟಿ ಅನುದಾನವನ್ನು ಶಾಸಕರು ತಂದರೆ ಗ್ರಂಥಾಲಯವನ್ನು ಸಂಪೂರ್ಣ ಮೇಲ್ದರ್ಜೆಗೇರಿಸುವುದರ ಜೊತೆಗೆ ಎಲ್ಲಾ ಅನುಕೂಲತೆಗಳನ್ನು ಒದಗಿಸಬಹುದು ಎನ್ನುತ್ತಾರೆ ಗ್ರಾಮದ ಕನ್ನಡ ಯುವ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ರಾಜಶೇಖರ್ ಸಂಡೂರ್.
ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕೇಂದ್ರ ಸ್ಥಾನವಾಗಿದೆ. ಈ ಗ್ರಾಮದಲ್ಲಿ ಹಲವಾರು ವಿದ್ಯಾ ಕೇಂದ್ರಗಳಿದ್ದು ಮತ್ತು ನೂರಾರು ಪದವಿದರರಿದ್ದು, ದೂರದ ದಾವಣಗೆರೆ ಸ್ಪರ್ಧಾತ್ಮಕ ಗ್ರಂಥಾಲಯಕ್ಕೆ ನಿತ್ಯ ಓಡಾಡಿ ಓದುವುದು ಕಷ್ಟ. ಆದ್ದರಿಂದ ಇಲ್ಲಿನ ಗ್ರಂಥಾಲಯವನ್ನು ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಬಸವಂತಪ್ಪ ತಿಳಿಸಿದ್ದಾರೆ.