ಹೊಳಲ್ಕೆರೆ: ಆ ಒಂದು ಕ್ಷಣ ಮಿಸ್ ಆಗಿದ್ದರೆ ಇಬ್ಬರು ಮಹಿಳೆಯರು, ಇಬ್ಬರು ಹಸುಗೂಸು ಬದುಕುಳಿಯುತ್ತಿದ್ದರು..ಇನ್ನು ಅದು ಸಣ್ಣ ಕಂದಮ್ಮ, ಎಷ್ಟು ನೋವು ಅನುಭವಿಸಿತ್ತೋ ಪಾಪ…ಎಲ್ಲ ಟ್ರ್ಯಾಕ್ಟರ್ ನದ್ದೇ ತಪ್ಪು, ಅವನು ರೇಡಿಯಂ ಅಂಟಿಸಿದ್ದರೇ ಏನು ಆಗುತ್ತಿರಲಿಲ್ಲ. ಈ ಆರ್ ಟಿ ಓ ಅಧಿಕಾರಿಗಳು ರೇಡಿಯಂ ಸ್ಟೀಕರ್ ಅಂಟಿಸದ ಟ್ರ್ಯಾಕ್ಟರ್ ಗಳನ್ನು ವಶಪಡಿಸಿಕೊಳ್ಳೋದಿಲ್ಲ‌..ಹೀಗೆ ಅಲ್ಲಿ ನೆರೆದಿದ್ದ ಜನ  ಹತ್ತಾರು ಮಾತುಗಳನ್ನು  ಮಾತನಾಡಿಕೊಳ್ಳುತ್ತಿದ್ದರು. ಈ ನಡುವೆ ಮಗು, ಸಂಬಂಧಿಕರನ್ನು ಕಳೆದುಕೊಂಡ ಕುಟುಂಬದ ಕಣ್ಣಲ್ಲಿ ನೀರು ಜಿನುಗುತ್ತಿತ್ತು.‌

ಈ ಮನಕಲುಕುವ ಘಟನೆ ತಾಲೂಕಿನ ಚಿತ್ರಹಳ್ಳಿ ಶಿವಗಂಗಾ ಮದ್ಯದ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ..ಕಾರು ಬೆಂಕಿಪೊಟ್ಟಣ ರೀತಿ ಅಪ್ಪಚ್ಚಿ ಆಗಿದ್ದು, ಗುರುತೇ ಸಿಗುತ್ತಿರಲಿಲ್ಲ..ಜನರೆಲ್ಲ ಏನಾಯಿತು, ಏನಾಯಿತು ಅಂತ ತಂಡೋಪತಂಡವಾಗಿ ಆಗಮಿಸುತ್ತಿದ್ದರು. ಪೊಲೀಸರು ತಮ್ಮ ಕಾರ್ಯ ಮುಂದುವರಿಸಿದ್ದರು.

ಹೊಳಲ್ಕೆರೆ ತಾಲೂಕಿನ ಉದ್ಯಮಿ ಹರೇನಹಳ್ಳಿ ತಿಪ್ಪೇಸ್ವಾಮಿ ಇವರ ಹೆಂಡತಿ ಗಂಗಮ್ಮ, ಮಗನಾದ ಯಶವಂತನ ಹೆಂಡತಿ ಕಾವ್ಯ, ಇಬ್ಬರೂ ಮೊಮ್ಮಕ್ಕಳು ಸ್ಥಳದಲ್ಲೇ ಸಾವನಪ್ಪಿದ ದುರ್ಧೈವಿಗಳು.

ಮಗ ಯಶವಂತ ತೀವ್ರವಾಗಿ ಗಾಯಗೊಂಡಿದ್ದು ಚಿತ್ರದುರ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಚಿತ್ರಳ್ಳಿ ಕಡೆಯಿಂದ ಹೊಳಲ್ಕೆರೆಗೆ ಬರುತ್ತಿದ್ದ ಟ್ರಾಕ್ಟರ್ ಹಾಗೂ ಚಿತ್ರದುರ್ಗದಿಂದ ಬರುತ್ತಿದ್ದ ಹೊಳಲ್ಕೆರೆಗೆ ಬರುತ್ತಿದ್ದ ಕಾರ್ ನಡುವೆ ಅಪಘಾತ ನಡೆದಿದೆ.

ಹೇಗಾಯ್ತು ಘಟನೆ

ಚಿತ್ರದುರ್ಗ ಕಡೆಯಿಂದ ಹೊಳಲ್ಕೆರೆ ಕಡೆಗೆ ಹೋಗುತಿದ್ದ ಟ್ತ್ಯಾಕ್ಟರ್ ಚಾಲಕ ಯಾವುದೇ ಸಿಗ್ನಲ್ ನೀಡದೆ ಹಠಾತ್ತಾಗಿ ಬ್ರೇಕ್ ಹಾಕಿ ಟ್ರ್ಯಾಕ್ಟರ್ ನ್ನು ನಿಲ್ಲಿಸಿದ್ದಾನೆ. ಕತ್ತಲಿನಲ್ಲಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ರೇಡಿಯಂ ಅಳವಡಿಸಿರಲಿಲ್ಲ. ಪರಿಣಾಮ ಹಿಂದೆ ಬರುತ್ತಿದ್ದ ಮಾರುತಿ ಬ್ರೆಜಾ ಕಾರು ಕಂಟ್ರೋಲ್ ಗೆ ಸಿಗದೆ ಟ್ರ್ಯಾಕ್ಟರ್ ಹಿಂಬಂದಿಯ ಟ್ರೈಲರ್ ಗ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.

ಕುಟುಂಬವನ್ನೇ ಕಳೆದುಕೊಂಡ ಕ್ರಷರ್ ಮಾಲೀಕ

ಮೃತರು ಹೊಳಲ್ಕೆರೆ ತಾಲೂಕಿನ ಹರೆನಹಳ್ಳಿ ಗ್ರಾಮದ ಕ್ರಷರ್ ಮಾಲಿಕ ತಿಪ್ಪೇಸ್ವಾಮಿ ಪತ್ನಿ ಗಂಗಮ್ಮ (50), ಸೊಸೆ ಕಾವ್ಯ (25), ಮೊಮ್ಮೊಕ್ಕಳಾದ ಅನ್ಸಿಕಾ (4), ಮನಸ್ವಿನಿ (1) ಎಂದು ಗುರುತಿಸಲಾಗಿದೆ. ಕಾರು ಚಾಲನೆ ಮಾಡುತಿದ್ದ ತಿಪ್ಪೇಸ್ವಾಮಿ ಪುತ್ರ ಗುತ್ತಿಗೆದಾರ ಯಶವಂತ್ (30) ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ರ್ಯಾಕ್ಟರ್ ನಲ್ಲಿದ್ದವರಿಗೂ ಗಾಯ

ಇನ್ನು ಟ್ರ್ಯಾಕ್ಟರ್ ನಲ್ಲಿದ್ದ ನೇತ್ರಾವತಿ, ಸಿದ್ದಪ್ಪ, ಅಪೇಕ್ಷ, ಗೀತಮ್ಮ, ಮಲ್ಲಮ್ಮ, ನರಸಿಂಹಮೂರ್ತಿ ಇವರಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಹೊಳಲ್ಕೆರೆ, ಚಿತ್ರದುರ್ಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಸ್ಥಳಕ್ಕೆ ಹೊಳಲ್ಕೆರೆ ಪಿಎಸ್‌ಐ ಸಚೀನ್ ಪಾಟೀಲ್ ಹಾಗೂ ಚಿತ್ರಹಳ್ಳಿ ಪಿಎಸ್‌ಐ ಕಾಂತರಾಜ್ ಭೇಟಿ ನೀಡಿದ್ದು, ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share.
Leave A Reply

Exit mobile version