ನಂದೀಶ್ ಭದ್ರಾವತಿ, ದಾವಣಗೆರೆ
ಅಮ್ಮ ಎದೆ ಹಾಲು ಕುಡಿಸಿದರೆ ಅಪ್ಪ ಎರಡು ಕೈ ಗಳನ್ನು ಹಿಡಿದುಕೊಂಡು ಮುಗಿಲೆತ್ತರಕ್ಕೆ ಹಾರಿಸಿ ನಿನಗೇನೂ ಬೇಕು ಮಗು ಎಂದು ಕೇಳುತ್ತಾನೆ. ತನಗಿಲ್ಲದೇ ಹೋದರೂ ಮಕ್ಕಳಿಗಾಗಿ ತನ್ನ ಜೀವನವನ್ನೇ ಮುಡುಪಾಗಿಡುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಇಲ್ಲೊಬ್ಬ ಉದ್ಯಮಿಯ ಕಥೆಯಲ್ಲಿ ಅಪ್ಪನ ಪಾತ್ರ ಬಹುಮುಖ್ಯವಾಗಿದೆ.
ಹೌದು…ದಾವಣಗೆರೆಯ ಪ್ರತಿಷ್ಠಿತ ಶ್ರೀ ಬಸವೇಶ್ವರ ಟ್ರಾನ್ಸ್ ಪೋರ್ಟ್ ಮಹಾಂತೇಶ್ ಒಣರೊಟ್ಟಿ ತಂದೆ ವೀರಪ್ಪ ಒಣರೊಟ್ಟಿಯೊಂದಿಗಿನ ಕೆಲ ಕಾಲದ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ಪ್ರತಿಯೊಬ್ಬರಿಗೂ ಅಪ್ಪನೇ ಮೊದಲ ಹೀರೋ, ಹಾಗಾಗಿ ನನ್ನ ಜೀವನದಲ್ಲಿಯೂ ನನಗೆ ಅಪ್ಪನೇ ಮೊದಲ ಹೀರೋ, ಬಾಗಲಕೋಟೆ ಜಿಲ್ಲೆಯ ಬಾಗೇವಾಡಿ ನಮ್ಮ ಊರು, ತುಂಬು ಕುಟುಂಬದ ನಮ್ಮ ಮನೆಯಲ್ಲಿ ಆಗ ಸಾಕಷ್ಟು ಬಡತನವಿತ್ತು. ಆದರೆ ಪ್ರೀತಿಗೇನೂ ಕಡಿಮೆ ಇರಲಿಲ್ಲ. ವ್ಯಾಪಾರದಲ್ಲಿ ನಷ್ಟವಾದ ಅಪ್ಪ ಬಾಗಲಕೋಟೆಯ ಮುದ್ದೇಬಿಹಾಳ ತಾಲೂಕು ಕುಂಟೋಜಿ ಗ್ರಾಮದಿಂದ ದಾವಣಗೆರೆಗೆ ಬರುತ್ತಾರೆ. ಈ ವಿಷಯ ಮನೆಯಲ್ಲಿ ಗೊತ್ತಿರಲಿಲ್ಲ. ಹೀಗಿರುವಾಗ ಅಪ್ಪನನ್ನು ಹುಡುಕಿಕೊಂಡು ಮಹಾಂತೇಶ್ ದಾವಣಗೆರೆಗೆ ಬರುತ್ತಾರೆ.
ದಾವಣಗೆರೆಗೆ ಬಂದು ಕೆಲ ಕಾಲ ಪರಿಚಯಸ್ಥರ ಮನೆಗೆ ಉಳಿದುಕೊಳ್ಳುತ್ತಾರೆ. ಅಲ್ಲಿಂದ ಅಪ್ಪನ ಹುಡುಕಾಟ ನಡೆಯುತ್ತದೆ. ಬಹು ದಿನಗಳ ಕಾಲ ಅಪ್ಪ ಸಿಗಲೇ ಇಲ್ಲ. ಇಷ್ಟಾದರೂ ಅಪ್ಪನ ಹುಡುಕಾಟ ನಡೆಸಿದ ಒಣರೊಟ್ಟಿಗೆ ಅಪ್ಪ ಈರುಳ್ಳಿ ಮಾರ್ಕೆಟ್‌ನಲ್ಲಿ ಸಿಗುತ್ತಾರೆ. ಆದರೆ ಅಪ್ಪನ ಸ್ಥಿತಿ ನೋಡಿದ ಮಹಾಂತೇಶ್ ಕಣ್ಣಲ್ಲೀ ನೀರು ಹಾಕುತ್ತಾರೆ. ಅಲ್ಲಿ ಬದುಕುಬಾಳಿದ ಅಪ್ಪ ಗೋಣಿಚೀಲ ಹೊಲಿಯುತ್ತಿರುತ್ತಾರೆ.
ಅಲ್ಲಿಂದ ಅಪ್ಪನನ್ನು ಕರೆದುಕೊಂಡು ಹೋದ ಮಹಾಂತೇಶ್ ಒಣರೊಟ್ಟಿ ಜತೆ ಅಪ್ಪ ಬಹಳ ದಿವಸ ಇರಲಿಲ್ಲ, ಬಹು ಬೇಗನೇ ಸ್ವರ್ಗಸ್ಥರಾದರು. ಆದರೆ ಅಪ್ಪನ ಜತೆ ಕಳೆದ ನೆನಪುಗಳನ್ನು ಮಹಾಂತೇಶ್ ವಿಭಿನ್ನವಾಗಿ ಮೆಲುಕು ಹಾಕುತ್ತಾರೆ. ಅಪ್ಪ ಜತೆಗಿದ್ದರೆ ಪ್ರಪಂಚದಲ್ಲಿ ಎಲ್ಲವನ್ನೂ ಗೆಲ್ಲುತ್ತೇನೆ ಎಂಬ ಏನೋ ವಿಶ್ವಾಸವಿದೆ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ ಮಾತ್ರ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ನನ್ನ ಅಪ್ಪ ಕೇಳಿದ್ದೇನೆಲ್ಲ ಕೊಡಿಸುವ ತ್ಯಾಗಮಯಿ ಅಂದ್ರು.
ಪ್ರತಿ ದಿನವೂ ಅಪ್ಪ-ಅಮ್ಮನ ದಿನವೇ ಆದರೂ ಅವರು ನೀಡಿರುವ ಕೊಡುಗೆ, ಅವರ ತ್ಯಾಗ ಸ್ಮರಿಸುವುದಕ್ಕಾಗಿ ಅಪ್ಪನ ದಿನಾಚರಣೆ ಆಚರಿಸಲಾಗುತ್ತದೆ. ತನ್ನ ಜವಾಬ್ದಾರಿಯನ್ನು ಪೂರೈಸುತ್ತಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುವ ಶ್ರಮಜೀವಿ ಎಂದರೆ ಅದು ಅಪ್ಪ ಮಾತ್ರ. ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ.
ಅಪ್ಪ ಎಂದರೆ ನಮ್ಮೆಲ್ಲಾ ಕೋರಿಕೆಗಳ ಮ್ಯಾಜಿಕ್ ಬಾಕ್ಸ್. ಸಣ್ಣ ಸ್ಲೇಟಿನಿಂದ ಹಿಡಿದು ದೊಡ್ಡ ಕಾರಿನವರೆಗೆ ನಮ್ಮೆಲ್ಲಾ ಬಯಕೆಗಳನ್ನು ತನ್ನ ಶಕ್ತಿಯನುಸಾರ ತುಂಬಿದವನು. ಮಕ್ಕಳ ಪಾಲಿಗೆ ಅಪ್ಪನೇ ಮೊದಲ ಹೀರೋ…ತೋರು ಬೆರುಳು ಹಿಡಿದು ಸಂತೆಯಲ್ಲಿ ಜಗತ್ತನ್ನೇ ತೋರಿದವ….. ದಶಕಗಳ ಹಿಂದೆ ಅಪ್ಪ ಎಂದರೆ ಮಕ್ಕಳ ಮೊಗದಲ್ಲಿ ಮೂಡುತ್ತಿದ್ದ ಭಾವ ಭಯ. ಸಣ್ಣಪುಟ್ಟ ಕಾರಣಕ್ಕೂ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತೆ ಭಾವಿಸಿ, ಕೂಗಾಡಿ ದನಕ್ಕೆ ಬಡಿದ ಹಾಗೆ ಬಡಿಯುತ್ತಿದ್ದ ಆತನ ಕೋಪಕ್ಕೆ ಆತನೇ ಸಾಟಿ….ಅದಕ್ಕೆ ಏನೋ ಎಲ್ಲ ಮಕ್ಕಳ ಡಿಮ್ಯಾಂಡುಗಳು ಮೊದಲು ತಾಯಿಯ ಬಳಿಯೇ. ಒಟ್ಟಾರೆ ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ…ಹಿತೈಷಿಯಾಗಿ ಬೆಳೆದಿದ್ದಾನೆ. ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ ಎಂದು ಮಹಾಂತೇಶ್ ಒಣ ರೊಟ್ಟಿ ಹಳೆ ನೆನಪುಗಳನ್ನು ಮೆಲಕು ಹಾಕುತ್ತಾರೆ.