ಬಸವಾಪಟ್ಟಣ: ಬೇಸಿಗೆ ಬಿಸಿಲಿನ ತಾಪ ಈಗಾಗಲೇ ಹಲವಾರು ತರಕಾರಿಗಳಿಗೆ ತಾಗಿದ್ದು, ಈಗ ದಿನನಿತ್ಯ ಅಡುಗೆಗೆ ಬಳಸುವ ಕೊತ್ತಂಬರಿ ಸೊಪ್ಪಿನ ದರ ಗಗನಕ್ಕೇರುವಂತೆ ಮಾಡಿದೆ.
5–10 ರೂಪಾಯಿ ಆಸುಪಾಸಿನಲ್ಲಿದ್ದ ಕೊತ್ತಂಬರಿ ಸೊಪ್ಪಿನ ಒಂದು ಕಟ್ಟಿನ ದರ ಈಗ ₹20ರಿಂದ ₹30ಗೆ ಏರಿದೆ. ಉಪಾಹಾರ, ಅಡುಗೆ, ವಿಶೇಷ ಸಮಾರಂಭಗಳಲ್ಲಿ ವಿವಿಧ ಖಾದ್ಯಗಳಿಗೆ ಅತ್ಯಗತ್ಯವಾದ ಕೊತ್ತಂಬರಿ ಸೊಪ್ಪನ್ನು ಈಗ ಜನಸಾಮಾನ್ಯರು ಕೊಳ್ಳಲು ಯೋಚಿಸುವ ಸ್ಥಿತಿ ನಿರ್ಮಾಣವಾಗಿದೆ.
ಕೊಳವೆ ಬಾವಿಗಳಲ್ಲಿ ನೀರಿಲ್ಲದೇ ತರಕಾರಿ ಬೆಳೆಗಳು ಹಾಳಾಗುತ್ತಿವೆ. ಬೀನ್ಸ್ ಕಿಲೋಗೆ ₹250 ರಂತೆ ಮಾರಾಟವಾಗುತ್ತಿದ್ದರೆ, ಹಸಿಮೆಣಸಿನ ಕಾಯಿ ₹150ಕ್ಕೆ ಏರಿಕೆಯಾಗಿದೆ. ಈಗ ಕೊತ್ತಂಬರಿ ಸೊಪ್ಪಿನ ಸರದಿ.
ಮುಂದಿನ ದಿನಗಳಲ್ಲಿ ಮಳೆ ಚೆನ್ನಾಗಿ ಬಂದು ರೈತರು ಕೊತ್ತಂಬರಿ ಬಿತ್ತನೆ ಮಾಡಿ ಬೆಳೆದ ಹೊಸ ಫಸಲು ಮಾರುಕಟ್ಟೆಗೆ ಬಂದಾಗ ಮಾತ್ರ ಕೊತ್ತಂಬರಿ ಸೊಪ್ಪಿನ ಬೆಲೆ ಇಳಿಯಲು ಸಾಧ್ಯ. ಇಲ್ಲವಾದರೆ ಬೆಲೆ ಇನ್ನೂ ಹೆಚ್ಚಾಗಬಹದು ಎನ್ನುತ್ತಾರೆ ಇಲ್ಲಿನ ಸೊಪ್ಪಿನ ವ್ಯಾಪಾರಿ ಗುರುದೇವಯ್ಯ.
ದಿನನಿತ್ಯದ ಬಳಕೆಯ ತರಕಾರಿಗಳ ಬೆಲೆ ಈ ವರ್ಷ ಹಿಂದೆಂದೂ ಕಾಣದಷ್ಟು ಏರಿಕೆಯಾಗಿದೆ. ತರಕಾರಿಗಳಿಲ್ಲದೇ ಅಡುಗೆ ಮಾಡಲು ಬೇಳೆ ಕಾಳುಗಳನ್ನು ಅವಲಂಬಿಸಿದರೆ ಅವುಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಇಲ್ಲಿನ ನಿವಾಸಿ ಎಲ್.ಜಿ.ಹಾಲೇಶಪ್ಪ ಹೇಳಿದರು.