
ಚಿತ್ರದುರ್ಗ: ಬಸ್ಸಿಗಾಗಿ ಕಾದು ಕುಳಿತಿದ್ದ ವಿದ್ಯಾರ್ಥಿನಿಗೆ ಲಾರಿ ಡಿಕ್ಕಿಯಾಗಿ ಮೃತಪಟ್ಟಿರುವ ಘಟನೆ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾನೆ.
ರಾಷ್ಟ್ರೀಯ ಹೆದ್ದಾರಿ 4ರಲ್ಲಿ ವಿಜಾಪುರ ಗ್ರಾಮದ ಬಳಿ ಘಟನೆ ನಡೆದಿದ್ದು, ಹಿರೇಕಂದವಾಡಿ ಗ್ರಾಮದ ಪಿಯುಸಿ ವಿದ್ಯಾರ್ಥಿನಿ ಸುಚಿತ್ರಾ(18) ಮೃತಪಟ್ಟಿದ್ದಾರೆ. ಲಾರಿ ಅಪಘಾತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಆದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಾಪುರದಿಂದ ಚಿತ್ರದುರ್ಗಕ್ಕೆ ಕಾಲೇಜಿಗೆ ಬರಲು ಹೆದ್ದಾರಿಯಲ್ಲಿ ಬಸ್ಸಿಗಾಗಿ ವಿದ್ಯಾರ್ಥಿಗಳು ಕಾಯುತ್ತಿದ್ದಾಗ ಲಾರಿ ಡಿಕ್ಕಿಯಾಗಿದೆ.


ಅಪಘಾತದಿಂದ ಆಕ್ರೋಶಗೊಂಡಿರುವ ಸಾರ್ವಜನಿಕರು ವಿಜಾಪುರ ಬಳಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸರ್ವೀಸ್ ರಸ್ತೆ ಮೂಲಕ ಬಸ್ಸುಗಳು ಬಾರದ ಕಾರಣ ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ಪ್ರಯಾಣಿಕರು ಹೆದ್ದಾರಿಯಲ್ಲಿ ಬಂದು ಬಸ್ಸು ಹತ್ತಬೇಕಾದ ಪರಿಸ್ಥಿತಿ ಇರುವುದರಿಂದ ಈ ಅಪಘಾತ ನಡೆದಿದೆ. ವಿದ್ಯಾರ್ಥಿನಿ ಬಲಿಯಾಗಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಭರಮಸಾಗರ ಠಾಣೆಯ ಪೊಲೀಸರು ಆಗಮಿಸಿದ್ದು, ಸಾರ್ವಜನಿಕರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. ಆದರೆ, ಜನ ವಾಗ್ವಾದಕ್ಕೆ ಮುಂದಾಗಿದ್ದರು.

