ದಾವಣಗೆರೆ : ಅಯೋಧ್ಯೆ ಶ್ರೀರಾಮಮಂದಿರ ಲೋಕಾರ್ಪಣೆ ಸಲುವಾಗಿ ವಿದ್ಯಾನಗರಕ್ಕೆ ಅಯೋಧ್ಯದಿಂದ ಬಂದ ‘ಶ್ರೀರಾಮನ ಮಂತ್ರಾಕ್ಷತೆ ಭಾವಚಿತ್ರ ಮತ್ತು ಆಹ್ವಾನ ಪತ್ರಿಕೆಗಳನ್ನು’ ಬಿಜೆಪಿ, ಹಿಂದೂ ಸಂಘಟನೆಗಳು ಅದ್ದೂರಿಯಿಂದ ಸ್ವಾಗತಿಸಿದವು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಮಂದಿರದ ಲೋಕಾರ್ಪಣೆ ಹಾಗೂ ನೆಲಅಂತಸ್ತಿನ ಗರ್ಭಗುಡಿಯಲ್ಲಿ ಶ್ರೀ ರಾಮಲಲ್ಲಾ (ಬಾಲರಾಮ) ನೂತನ ವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಮನೆಮನೆಗಳಿಗೆ ಅಯೋಧ್ಯೆಯಲ್ಲಿ ಪೂಜಿಸಲ್ಪಟ್ಟ ಮಂತ್ರಾಕ್ಷತೆಯನ್ನು ವಿತರಿಸುವ ಅಭಿಯಾನವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಹಮ್ಮಿಕೊಂಡಿತ್ತು. ಅದರಂತೆ ಮನೆಗಳಿಗೆ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮ ನಡೆಯಿತು.
ಕೆ.ಬಿ.ಕೊಟ್ರೇಶ್ ಹೇಳೋದೇನು?
ದಾವಣಗೆರೆ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ.ಬಿ.ಕೊಟ್ರೇಶ್ ಮಾತನಾಡಿ, ಜನವರಿ 1 ರಿಂದ 15 ರ ತನಕ ನಮ್ಮ ಕಾರ್ಯಕರ್ತರು ಮಂತ್ರಾಕ್ಷತೆಯನ್ನು ಮನೆಗಳಿಗೆ ವಿತರಿಸಲಿದ್ದಾರೆ. ಶ್ರೀ ರಾಮಮಂದಿರ ಉದ್ಘಾಟನೆಗೆ 250 ಕನ್ನಡಿಗರಿಗೆ ಆಹ್ವಾನ ನೀಡಲಾಗಿದೆ.
ಶ್ರೀರಾಮನ ನೂತನ ವಿಗ್ರಹ ಪ್ರತಿಷ್ಠಾಪನೆಯ ದಿನದಂದು ಸಾವಿರಾರು ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದರೊಂದಿಗೆ ಅಯೋಧ್ಯೆಯಲ್ಲಿ ನಡೆಯುವ ಎಲ್ಲ ವೈದಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನೂ ಇಲ್ಲಿಯೂ ಸಹ ಹಮ್ಮಿಕೊಳ್ಳಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಮನೆ ಸಂಪರ್ಕ ಅಭಿಯಾನ:
ಜನವರಿ 22 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ಸುಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಇಡೀ ದೇಶದಲ್ಲಿ ಈ ಸಂಧರ್ಭದಲ್ಲಿ ಅಪೂರ್ವಭೂತ ಸಂಭ್ರಮದ ವಾತಾವರಣ ನಿರ್ಮಾಣವಾಗಲಿದೆ. ಈ ಅಮೃತ ಗಳಿಗೆಯನ್ನು ಪ್ರತಿಯೊಬ್ಬ ರಾಮಭಕ್ತರು ತಮ್ಮ ತಮ್ಮ ಊರು ಮನೆಗಳಲ್ಲಿ ಸಂಭ್ರಮ ಸಡಗರದಿಂದ ಆಚರಿಸುವಂತಾಗಲು
ಮನೆ ಮನೆ ಸಂಪರ್ಕ ಅಭಿಯಾನವನ್ನು ಕೈಗೊಂಡಿದ್ದು, ಪ್ರತೀ ಮನೆಗೆ ಪವಿತ್ರ ಮಂತ್ರಾಕ್ಷತೆ, ರಾಮಮಂದಿರದ ಭಾವಚಿತ್ರ ಮತ್ತು ಆಮಂತ್ರಣ ಪತ್ರವನ್ನು ನೀಡಲಾಗುತ್ತಿದೆ. ಈ ಅಭಿಯಾನದಲ್ಲಿ ಸಂಘಟನೆಗಳು, ಸಂಘಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು ಕೈಜೋಡಿಸಿವೆ. ಜನವರಿ 7ರಂದು ಮಹಾ ಸಂಪರ್ಕ ಅಭಿಯಾನ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಮೆರವಣಿಗೆ ವಿದ್ಯಾನಗರ ಸರ್ಕಲ್ ಗಾಂಧಿ ಸ್ಟ್ಯಾಚು ಹತ್ತಿರದಿಂದ ಈಶ್ವರ ಪಾರ್ವತಿ ದೇವಸ್ಥಾನದ ವರೆಗೆ ನಡೆಯಿತು. ಪ್ರಮುಖರಾದ ಲೋಕಿಕೆರೆ ನಾಗರಾಜ್, ವೀರೇಶ್ ಹನಗವಾಡಿ ಸೇರಿದಂತೆ ಇತರರು ಇದ್ದರು.