


ದಾವಣಗೆರೆ : ಬೆಂಗಳೂರಿನಲ್ಲಿ ಆರ್ ಸಿಬಿ ವಿಜಯೋತ್ಸವ ವೇಳೆ ಕಾಲ್ತುಳಿತಕ್ಕೆ ಮರಣ ಹೊಂದಿದ ಸಂಬಂಧ ಪೊಲೀಸ್ ಕಮಿಷನರ್ ದಯಾನಂದ್ ಸೇರಿದಂತೆ ಉಳಿದ ನಾಲ್ವರ ಪೊಲೀಸರ ಅಮಾನತಿಗೆ ದಾವಣಗೆರೆ ನಿವೃತ್ತ ಪೊಲೀಸ್ ಕೃಷ್ಣಪ್ಪ ಆಕ್ರೋಶ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಸಿಎಂನಿಂದ ಹಿಡಿದು ಕಾಮನ್ ಮ್ಯಾನ್ ಗೂ ಪೊಲೀಸ್ ಬೇಕು, ನಮ್ಮನ್ನು ಹೊಗಳುವರಿಗಿಂತ ತೆಗೋಳೇರೆ ಜಾಸ್ತಿ…ಎಲ್ಲರೂ ಹಬ್ಬ ಹರಿದಿನಗಳಲ್ಲಿ ಕುಟುಂಬದ ಜತೆ ಹಬ್ಬ ಮಾಡಿದರೆ ನಾವು ಬಂದೋಬಸ್ತ್ ನಲ್ಲಿ ಇರಬೇಕು. ಗಲಾಟೆ ಆದ್ರೆ ಜೀವ ಪಣಕ್ಕಿಟ್ಟು ನಿಯಂತ್ರಿಸಬೇಕು. ಬಿಸಿಲಿನಲ್ಲಿ ಒಣಗಿ ಪ್ಯಾಕೇಟ್ ಊಟ ಮಾಡಿ ಡ್ಯೂಟಿ ಮಾಡಬೇಕು..ರಜೆ ಇದ್ದರೂ ಕರ್ತವ್ಯ ಅಂದ ಕೂಡಲೇ ಓಡಿ ಬರಬೇಕು..ಹೀಗಿರುವಾಗ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಒಮ್ಮೇಲೇ ಎರಡು ಲಕ್ಷ ಜನ ನುಗ್ಗಿದರೆ ನಿಯಂತ್ರಿಸುವುದಾದರೂ ಹೇಗೆ? ಎಂದು ಪ್ರಶ್ನೆ ಮಾಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾಗಿದ್ದ ಬಿ.ದಯಾನಂದ ಅವರು ಬಿಡುವಿಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾನ್‌ಸ್ಟೇಬಲ್‌ನಿಂದ ಹೆಚ್ಚುವರಿ ಆಯುಕ್ತರ ವರೆಗೂ ಒಂದು ತಂಡವಾಗಿ ಸಮನ್ವಯದಿಂದ ನೋಡುತ್ತಿದ್ದ ಅವರನ್ನು ಡೈನಮಿಕ್ ಅಧಿಕಾರಿ ಎಂದೇ ಸಾರ್ವಜನಿಕ ವಲಯದಲ್ಲಿ ಹೆಸರುವಾಸಿಯಾಗಿದ್ದವರು. ಅಂತಹವರನ್ನು ಸಿಎಂ ಸಿದ್ದರಾಮಯ್ಯ ಅಮಾನತು ಮಾಡಿದ್ದಾರೆ ಇದಕ್ಕೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.

ಪೊಲೀಸರ ಮೇಲೆ ದರ್ಪ
ಈ ಹಿಂದೆ ದಾವಣಗೆರೆಯಲ್ಲಿ ದಕ್ಷ ಅಧಿಕಾರಿ ಡಾ.ಅರುಣ್ ಎಸ್ಪಿಯಾಗಿದ್ದ ವೇಳೆ ಎಸ್ಪಿ ಕೆಡಿಪಿ ಸಭೆ ಮುಗಿದ ನಂತರ ಹೊರಟ ವೇಳೆ ಅವರಿಗೆ ನಾನು ಸಿಎಂ ನಾನೇ ಹೊರಟಿಲ್ಲ, ನೀವೇ ಹೇಗೆ ಹೊರಡುತ್ತಿರೀ ಎಂದು ದರ್ಪ ತೋರಿದ್ದರು. ಇನ್ನು ಸಮಾರಂಭವೊಂದರಲ್ಲಿ ಎಸ್ಪಿ ಮೇಲೆ ಕೈ ಎತ್ತಲು ಹೋಗಿದ್ದರು. ಈಗ ಕಮಿಷನರ್ ದಯಾನಂದ ಮೇಲೆ ತಪ್ಪು ಹೊರಿಸಿ ಅಮಾನತು ಮಾಡುವ ಮೂಲಕ ದರ್ಪ ತೋರಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನಡೆ ಸರಿಯಿಲ್ಲ ಎಂದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಯಾರದೋ ತಪ್ಪಿಗೆ, ಯಾರಿಗೋ ಶಿಕ್ಷೆ?
ಕಾಲ್ತುಳಿತ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಸರ್ಕಾರ ನ್ಯಾಯಾಂಗ ತನಿಖೆ ಹಾಗೂ ಸಿಐಡಿ ತನಿಖೆಗೂ ಆದೇಶಿಸಿದೆ. ಇದೆಲ್ಲದರ ನಡುವೆ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುವ ಪ್ರಯತ್ನ ಮಾಡಿರುವ ರಾಜ್ಯ ಸರ್ಕಾರ ಯಾರದೋ ತಪ್ಪಿಗೆ ಯಾರಿಗೋ ಶಿಕ್ಷೆ ನೀಡಿದೆ.ಸರ್ಕಾರದ ಈ ಕ್ರಮ ಸರಿಯಲ್ಲ, ಇದು ಬೇಜವಾಬ್ದಾರಿ ಸರ್ಕಾರ. ಯಾವ ಆಧಾರದ ಮೇಲೆ ಕ್ರಮ ಕೈಗೊಂಡಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ
ಸರಕಾರದ ಕ್ರಮವೇ ಸರಿ ಇಲ್ಲ
ಈ ಸಂಬಂಧ ತನಿಖೆ ಆಗ್ಬೇಕು, ವಿಚಾರಣೆ ಕೂಡ ನಡೆಯಲೇಬೇಕು. ಕಮಿಷನರ್ ಅಂದ್ರೆ ಎಡಿಜಿಪಿ ಮಟ್ಟದ ಅಧಿಕಾರಿಯಾಗಿದ್ದು, ಅವರ ಮೇಲ್ಮಟ್ಟದ ಅಧಿಕಾರಿ ವಿಚಾರಣೆ ಮಾಡಬೇಕು. ತನಿಖೆ ನಡೆಸಿ ವರದಿ ಕೊಡಬೇಕು. ಯಾಕಾಯ್ತು, ಹೇಗಾಯ್ತು ಅಂತ ವಿಚಾರಣೆ ಮಾಡಬೇಕು. ಯಾರನ್ನೋ ಮೆಚ್ಚಿಸೋ ಸಲುವಾಗಿ ಈ ರೀತಿ ಮಾಡಿದ್ದಾರೆ ಎಂದು ನಿವೃತ್ತ ಪೊಲೀಸ್ ಕೃಷ್ಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮ ಬೇಡ ಅಂತ ಪೊಲೀಸರು ಹೇಳಿದ್ರು
ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡ್ತಿದ್ದಾರೆ ಎಂದ ಕೃಷ್ಣಪ್ಪ ಸರ್ಕಾರಕ್ಕೆ ಈ ಕಾರ್ಯಕ್ರಮ ಬೇಡ ಅಂತ ಪೊಲೀಸರು ಮೊದಲೇ ಹೇಳಿದ್ದಾರೆ. ಅವರ ಮಾತು ಸರ್ಕಾರ ಕೇಳಿಲ್ಲ. ಮೆರವಣಿಗೆ ಮಾಡಬೇಕು, ಸನ್ಮಾನ ಮಾಡಬೇಕು ಅಂತೆಲ್ಲಾ ಹೇಳಿದ್ದಾರೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ರು.
ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನ
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅಮಾನತು ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಅತ್ಯಂತ ಕರಾಳ ದಿನವಾಗಿದೆ. ಡೆತ್ ಮಾರ್ಚ್ ಅನ್ನು ಆಯೋಜಿಸಿದ ನಿಯಂತ್ರಿಸಲಾಗದ ಉಪಮುಖ್ಯಮಂತ್ರಿಯೇ ಪ್ರಮುಖ ಅಪರಾಧಿ ಎಂದು ಕರ್ನಾಟಕದ ಎಲ್ಲರಿಗೂ ತಿಳಿದಿದೆ ಎಂದು ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದು, ಅವರ ಟ್ವೀಟ್ ಗೆ ನನ್ನ ಬೆಂಬಲ ಇದೆ ಎಂದಿದ್ದಾರೆ..ಒಟ್ಟಾರೆ ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು. ಕಮಿಷನರ್ ಆಗಿದ್ದ ವೇಳೆ ದಯಾನಂದ್ ಕಾರ್ಯವೈಖರಿ, ದಕ್ಷತೆ, ಸಮಯ ಪ್ರಜ್ಞೆ ಕುರಿತು ಮಾತನಾಡಿರುವ ಕೃಷ್ಣಪ್ಪ. ಐ ಸ್ಟ್ಯಾಂಡ್ ವಿತ್ ಐಪಿಎಸ್ ದಯಾನಂದ್ ಎಂದು ಹೇಳಿದ್ದಾರೆ.