


ಭದ್ರಾವತಿ : ಉಕ್ಕಿನ ನಗರಿ ಭದ್ರಾವತಿಯಲ್ಲಿ ದಿನ ಕಳೆದಂತೆ ಅಕ್ರಮ ಚಟುವಟಿಕೆ, ಹಲ್ಲೆಗಳು ನಡೆಯುತ್ತಿದ್ದು, ಮಂಗಳವಾರ ರಾತ್ರಿ ಜೆಡಿಎಸ್ ನಾಯಕಿ ಶಾರದ ಅಪ್ಪಾಜಿ, ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡ ಪುತ್ರ ಅಜಿತ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಬೈಕಿನಲ್ಲಿ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಕಳೆದ ರಾತ್ರಿ ಭದ್ರಾವತಿಯಲ್ಲಿ ದಿಢೀರ್ ರಸ್ತೆ ತಡೆ ನಡೆಸಿದರು. ಈ ಸಂದರ್ಭ ಪೊಲೀಸರ ಜೊತೆಗೆ ಮಾತಿನ ಚಕಮಕಿ ನಡೆಸಿದರು.

ಪ್ರಮೋದ್ ಎಂಬುವರ ಮೇಲೆ ಹಲ್ಲೆ
ನಗರಸಭೆ ಸಮೀಪ ತರೀಕೆರೆ ರಸ್ತೆಯಲ್ಲಿ ಹೆಚ್.ಎಸ್.ಪ್ರಮೋದ್ ಎಂಬುವವರ ಮೇಲೆ ಹಲ್ಲೆ ನಡೆದಿದೆ. ರಾತ್ರಿ ಬಸ್ ನಿಲ್ದಾಣದ ಕಡೆಯಿಂದ ಬೈಕಿನಲ್ಲಿ ಪ್ರಮೋದ್ ತಮ್ಮ ಮನೆಗೆ ತೆರಳುತ್ತಿದ್ದರು. ನಗರಸಭೆ ಸಮೀಪ ತಿರುವಿನಲ್ಲಿ ಬೈಕಿನಲ್ಲಿ ಬಂದ ಯುವಕರು ಪ್ರಮೋದ್ ಅವರನ್ನು ಅಡ್ಡಗಟ್ಟಿದ್ದಾರೆ. ಹಿಂಬದಿಯಿಂದ ಅವರ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಲಾಗಿದೆ. ಈ ಸಂದರ್ಭ ಪ್ರಮೋದ್ ಕೊರಳಲ್ಲಿದ್ದ ಚಿನ್ನದ ಸರವನ್ನು ಕೂಡ ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಆರು ಯುವಕರು ಮೂರು ಬೈಕ್‌ನಲ್ಲಿ ಪ್ರಮೋದ್ ಅವರನ್ನು ಹಿಂಬಾಲಿಸಿಕೊಂಡು ಬಂದು ಕೃತ್ಯ ಎಸಗಿದ್ದಾರೆ ಎಂದು ಪ್ರಮೋದ್ ಆರೋಪಿಸಿದ್ದಾರೆ.

ದಿಢೀರ್ ರಸ್ತೆ ತಡೆ, ಆಕ್ರೋಶ
ಘಟನೆ ಬೆನ್ನಕೆಜೆಡಿಎಸ್ ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿ, ದಿಢೀರ್ ರಸ್ತೆ ತಡೆ ನಡೆಸಿದರು. ಹಲ್ಲೆಕೋರರನ್ನು ಬಂಧಿಸಬೇಕು, ಭದ್ರಾವತಿಯಲ್ಲಿ ನಡೆಯುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಬೇಕು ಎಂದು ಪಟ್ಟು ಹಿಡಿದರು. ಜೆಡಿಎಸ್ ನಾಯಕಿ ಶಾರದಾ ಅಪ್ಪಾಜಿಗೌಡ, ಪ್ರಮುಖರಾದ ಅಜಿತ್ ಗೌಡ ಸೇರಿ ಹಲವರು ರಸ್ತೆ ತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಜೆಡಿಎಸ್ ಮುಖಂಡರು ಮತ್ತು ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪ್ರಮೋದ್ ದೂರು ನೀಡಿದರು.