ಶಿವಮೊಗ್ಗ : ತೀವ್ರ ಕುತೂಹಲ ಕೆರಳಿಸಿದ್ದ ನೈಋತ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ನಿರಾಯಾಸವಾಗಿ ಗೆಲುವು ಸಾಧಿಸಿದರೆ, ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಬೋಜೇಗೌಡ ಪುನರಾಯ್ಕೆ ಆಗಿದ್ದಾರೆ.
ಚುನಾವಣೆಯಲ್ಲಿ ನೈರುತ್ಯ ಪದವಿಧರರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಆಯನೂರು ಮಂಜುನಾಥ್ ಗೆ ಬಾರಿ ಮುಖಭಂಗವಾಗಿದೆ. ಬಿಜೆಪಿ ಅಭ್ಯರ್ಥಿ ಧನಂಜಯ ಸರ್ಜಿ ವಿರುದ್ಧ ಮಂಜುನಾಥ್ ಹೀನಾಯವಾಗಿ ಸೋಲು ಕಂಡಿದ್ದಾರೆ.
ಪದವಿಧರ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಬಹುದು ಎಂಬ ನಿರೀಕ್ಷೆಯಿತ್ತು. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ನಿರೀಕ್ಷಿತ ಪೈಪೋಟಿ ನೀಡುವಲ್ಲಿ ವಿಫಲರಾಗಿದ್ದಾರೆ. ಬಿಜೆಪಿ ಕಾರ್ಯಕರ್ತರ ಸಂಘಟಿತ ಪ್ರಯತ್ನ ಇಲ್ಲಿ ಫಲ ನೀಡಿದೆ. ಜತೆಗೆ ಜೆಡಿಎಸ್ ಜತೆಗಿನ ಮೈತ್ರಿಕೂಡ ಸರ್ಜಿ ಗೆಲುವಿಗೆ ಮತ್ತಷ್ಟು ಬಲ ನೀಡಿದೆ.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮತ ಎಣಿಕೆ ಪ್ರಾರಂಭದಿAದಲೂ ಡಾ. ಧನಂಜಯ ಸರ್ಜಿ ನಿರಂತರವಾಗಿ ಮುನ್ನಡೆ ಸಾಧಿಸಿದರು. ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಎದುರಾಳಿ ಅಭ್ಯರ್ಥಿಗಳನ್ನು ಸನಿಹಕ್ಕೂ ಸುಳಿಯಲು ಅವಕಾಶ ನೀಡಲಿಲ್ಲ. 14 ಸಾವಿರ ಮತಗಳ ಎಣಿಕೆಯ ಮೊದಲ ಸುತ್ತಿನಲ್ಲಿ ಸರ್ಜಿ ಅವರಿಗೆ ಸಿಕ್ಕಿದ್ದು 6,714 ಮತಗಳು. ಎರಡನೇ ಸುತ್ತಿನ 14 ಸಾವಿರ ಮತಗಳ ಪೈಕಿ 7,363 ಮತಗಳು ಬಿಜೆಪಿ ಅಭ್ಯರ್ಥಿಗೆ ಲಭಿಸಿದವು. 4ನೇ ಸುತ್ತಿನ ಎಣಿಕೆ ಮುಕ್ತಾಯವಾದಾಗ ಡಾ. ಸರ್ಜಿ 19,700 ಮತಗಳ ಮುನ್ನಡೆ ಸಾಧಿಸಿದ್ದರು.
ಬಿಜೆಪಿ ಟಿಕೆಟ್ ದೊರೆಯದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಉಡುಪಿಯ ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ಕಾಂಗ್ರೆಸ್ ಆಯನೂರು ಮಂಜುನಾಥ್ ನಡುವೆ ಮೊದಲ ಎರಡು ಸುತ್ತಿನಲ್ಲಿ ಎರಡನೇ ಸ್ಥಾನಕ್ಕೆ ಪೈಪೋಟಿ ನಡೆಯಿತು. ಅದನ್ನು ಹೊರತುಪಡಿಸಿದರೆ ಚುನಾವಣೆ ಕಣದಲ್ಲಿ ಕಂಡು ಬಂದ ರೋಚಕತೆ ಮತ ಎಣಿಕೆ ಕೇಂದ್ರದೊಳಗೆ ಕಂಡು ಬರಲಿಲ್ಲ.
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲೂ ಉತ್ತಮ ಫಲಿತಾಂಶ ಸಿಕ್ಕಿದೆ.
ಶಿಕ್ಷಕರ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿದ್ದ ಎಸ್.ಎಲ್. ಭೋಜೇಗೌಡ ಪ್ರಥಮ ಪ್ರಾಶಸ್ತ್ರದ ಮತಗಳ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದ್ದು, ಡಾ.ಧನಂಜಯ ಸರ್ಜಿ ಕೂಡಾ ಜಯಗಳಿಸುವುದರೊಂದಿಗೆ ಮೈತ್ರಿಕೂಟಕ್ಕೆ ಈ ಎರಡು ಕ್ಷೇತ್ರಗಳಲ್ಲಿ ವಿಜಯಮಾಲೆ ದೊರಕಿದೆ.
ಮೊದಲ ಬಾರಿಗೆ ಚುನಾವಣಾ ಕಣಕ್ಕೆ ಧುಮುಕಿದ್ದ ವೈದ್ಯ ಡಾ. ಧನಂಜಯ ಸರ್ಜಿ ಅವರು ಪ್ರಥಮ ಪ್ರಯತ್ನದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಆ ಮೂಲಕ ವೃತ್ತಿಯಲ್ಲಿ ವೈದ್ಯರಾಗಿದ್ದ ಧನಂಜಯ ಸರ್ಜಿ ಇದೀಗ ಚುನಾವಣೆಯಲ್ಲಿ ಜಯ ಸಾಧಿಸುವುದರೊಂದಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ 85 ಸಾವಿರ ಮತ ನೋಂದಣಿಯಾಗಿತ್ತು. ಚುನಾವಣೆಯಲ್ಲಿ 66,497 ಮತಗಳು ಚಲಾವಣೆಯಾಗಿದ್ದವು. ಇದರಲ್ಲಿ ಡಾ. ಧನಂಜಯ ಸರ್ಜಿಗೆ 37,627 ಮತ ಲಭಿಸಿದರೆ, ಪ್ರತಿಸ್ಪರ್ಧಿಗಳಾಗಿದ್ದ ಕಾಂಗ್ರೆಸ್ ನ ಆಯನೂರು ಮಂಜುನಾಥ್ 13,516 ಮತಗಳು ಪಡೆದಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ಪಿ. ದಿನೇಶ್ 2515 ಮತ, ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ 7039 ಮತ ಲಭಿಸಿದೆ. ಚುನಾವಣಾ ಕಣದಲ್ಲಿ ಒಟ್ಟು 10 ಮಂದಿ ಸ್ಪರ್ಧಿಗಳಿದ್ದರು. ಒಟ್ಟು 66497 ಮತ ಚಲಾವಣೆಯಾಗಿದೆ. ಈ ಪೈಕಿ ಮತಗಳು 61382 ಸಿಂಧುವಾಗಿದ್ದವು. 5115 ಮತಗಳು ತಿರಸ್ಕೃತಗೊಂಡಿದೆ.
—
ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಎಸ್.ಎಲ್. ಭೋಜೇಗೌಡ ಅವರು ಮೊದಲ ಪ್ರಾಶಸ್ತ್ಯ ಮತದಲ್ಲೇ ಗೆಲುವು ಸಾಧಿಸಿದ್ದಾರೆ. ಇವರು ಮತ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ ವಿರುದ್ಧ 5,267 ಮತಗಳ ಭಾರಿ ಅಂತರದಿAದ ಗೆಲುವು ಪಡೆದಿದ್ದಾರೆ. ಕ್ಷೇತ್ರದಲ್ಲಿ 19,479 ಒಟ್ಟು ಚಲಾವಣೆ ಆಗಿದ್ದು, ಇದರಲ್ಲಿ 821 ಮತ ತಿರಸ್ಕೃತಗೊಂಡಿವೆ. ಇನ್ನುಳಿದ 18,658 ಮತಗಳಲ್ಲಿ 9,330 ಕೋಟಾ ನಿಗದಿಯಾಗಿತ್ತು. 9829 ಮೊದಲ ಪ್ರಾಶಸ್ತ್ಯ ಮತಗಳನ್ನು ಪಡೆದು ಭೋಜೇಗೌಡ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ. ಮಂಜುನಾಥ್ 4,562 ಮತಗಳನ್ನು ಪಡೆದಿದ್ದಾರೆ.