ದಾವಣಗೆರೆ: ವಿವಾಹ ಅಂದರೆ ಕೇವಲ ದೈಹಿಕ ಸಂಬಧವಲ್ಲ, ಮಾನಸಿಕ ಸಮ್ಮಿಲನ ಎನ್ನುವಂತೆ 56 ವರ್ಷದ ರುಕ್ಮಿಣಿ, 66 ವರ್ಷದ ನಾಗರಾಜ್ ಜೊತೆಯಾಗಿ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಪರೂಪದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಮುಪ್ಪಿನಲ್ಲಿ ಗಂಡ ಹೆಂಡತಿಗೆ, ಹೆಂಡತಿ ಗಂಡನಿಗೆ ಆಸರೆ ಆಗೋದೆ ದಾಂಪತ್ಯ ಜೀವನದ ಧ್ಯೇಯ. ಅಂತಹ ಆಸರೆಗಾಗಿ ಅದೆಷ್ಟೋ ಜೀವಗಳು ಪರಿತಪಿಸುತ್ತಿರುತ್ತವೆ. ಕೆಲವೊಮ್ಮೆ ಕೆಲವರ ಜೀವನದಲ್ಲಿ ವಿವಾಹ ಅನ್ನೋದೆ ಕನಸಾಗಿರತ್ತೆ. ಅಂತಹ ಕನಸನ್ನ ಇಲ್ಲೊಂದು ಇಳಿವಯಸ್ಸಿನ ಜೋಡಿ ನನಸು ಮಾಡಿಕೊಂಡಿದೆ. ಮುಪ್ಪಿನಲ್ಲಿ ಸಪ್ತಪದಿ ತುಳಿದು ಒಬ್ಬರಿಗೊಬ್ಬರು ಆಸರೆ ಆಗಿದ್ದಾರೆ.
ಹೊನ್ನಾಳಿ ತಾಲ್ಲೂಕು ಗೋವಿನಕೋವಿ ಗ್ರಾಮದ ನಿವೃತ್ತ ಶಿಕ್ಷಕ ನಾಗರಾಜ್ ಹಾಗೂ ಕುಂಬಳೂರು ಗ್ರಾಮದ ರುಕ್ಮಿಣಿ ನವ ದಂಪತಿಗಳು. ನಾಗರಾಜ್ಗೆ ಇದು ಎರಡನೇ ಮದುವೆ. ರುಕ್ಮಿಣಿಗೆ ಮಾತ್ರ ಇದು ಮೊದಲನೇ ಮದುವೆ. ನಾಗರಾಜ್ ಮೊದಲ ಪತ್ನಿ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದರು. ನಾಗರಾಜ್ ಗೆ ಇಬ್ಬರು ಮಕ್ಕಳಿದ್ದು, ಅವರಿಬ್ಬರೂ ಹೊರದೇಶದಲ್ಲಿ ವಾಸವಿದ್ದಾರೆ. ಇಳಿ ವಯಸ್ಸಿನಲ್ಲಿ ಒಂಟಿತನ ಕಾಡ್ತಾ ಇದೆ ಎಂದು ನಾಗರಾಜ್ ಮರು ಮದುವೆ ಆಗಲು ಬಯಸಿದ್ದರು. ಇತ್ತ ರುಕ್ಮಿಣಿ ಮದುವೆ ಆಗದೆ ಸಹೋದರನ ಮನೆಯಲ್ಲಿ ವಾಸವಿದ್ದು, ಅವರಿಗೂ ಒಂಟಿತನ ಕಾಡ್ತಾ ಇತ್ತು. ಈ ವಯಸ್ಸಿನಲ್ಲಿ ತಮ್ಮ ಫಿಲಿಂಗ್ ಹಂಚಿಕೊಳ್ಳಲು ಯಾರೂ ಇಲ್ವಲ್ಲ ಅನ್ನೋ ಕೊರಗು ಇಬ್ಬರಿಗೂ ಇತ್ತು. ಹೀಗಾಗಿ ಎರಡೂ ಮನೆಯವರು ಒಪ್ಪಿ ಕುಂಬಳೂರು ದೇವಾಲಯದಲ್ಲಿ ವಿವಾಹ ನೆರವೇರಿಸಿದ್ದಾರೆ.