ದಾವಣಗೆರೆ: ಮಳೆ ಇಲ್ಲದೆ ಬೆಳೆಗಳಿಗೆ ನೀರು ಒದಗಿಸುವುದು ಕೂಡ ರೈತರಿಗೆ ಕಷ್ಟವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗದ ಹಿನ್ನಲೆ ಫಲಕ್ಕೆ ಬಂದಿದ್ದ ಒಂದೂವರೆ ಎಕರೆ ಅಡಿಕೆ ತೋಟವನ್ನು ರೈತನೇ ಕಡಿದು ಹಾಕಿದ ಘಟನೆ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಹೊನ್ನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಸವರಾಜಪ್ಪ ಎಂಬುವರಿಗೆ ಸೇರಿದ ಒಂದೂವರೆ ಎಕರೆ ಅಡಿಕೆ ತೋಟವಾಗಿದ್ದು, ಮಳೆ ಇಲ್ಲದ ಹಿನ್ನಲೆ ಫಲಕ್ಕೆ ಬಂದ ಸಾವಿರಾರು ಅಡಿಕೆ ಗಿಡಗಳಿಗೆ ನೀರು ಒದಗಿಸಲಾಗದೆ ಪರದಾಡುತ್ತಿದ್ದ ಎನ್ನಲಾಗಿದೆ. ತನ್ನ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹತ್ತಕ್ಕೂ ಹೆಚ್ಚು ಬೋರ್ ವೆಲ್ ಕೊರೆಸಿದರೂ ಕೂಡ ನೀರು ಬಿದ್ದಿಲ್ಲ. ಅಲ್ಲದೆ ಇನ್ನೊಂದು ವರ್ಷ ತೋಟ ಉಳಿಸಿದರೆ ಅಡಿಕೆ ಫಲ ನೀಡುತ್ತಿತ್ತು, ಆದರೆ ಅಂತರ್ಜಲ ಕುಗ್ಗಿದ ಹಿನ್ನಲೆ 10ಕ್ಕೂ ಹೆಚ್ವು ಬೋರ್ ವೆಲ್ ಕೊರೆಸಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದು, ಇದರಿಂದ ಕೊನೆಗೆ ರೋಸಿಹೋಗಿದ್ದ ರೈತ ಬಸವರಾಜಪ್ಪ ಅಡಿಕೆ ಗಿಡಗಳನ್ನು ಕಡೆದು ಹಾಕಿದ್ದಾರೆ. ಅಲ್ಲದೆ ಹೀಗೆ ಬರಗಾಲದಲ್ಲಿ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ.