ದಾವಣಗೆರೆ: ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಕ್ಕೆ ಆಕ್ರೋಶಗೊಂಡು ಮಹಿಳೆಯ ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದ ನೇತ್ರಾವತಿ (47) ಕೊಲೆಯಾಗಿದ್ದರು. ಈ ಸಂಬಂಧ ಅದೇ ಠಾಣಾ ವ್ಯಾಪ್ತಿಯ ನಾಗೊಲೆಯ (ಅರಕೆರೆ ಗೇಟ್) ಕುಮಾರ ಎಚ್.ಜಿ. ಹಾಗೂ ಅರಕೆರೆ ಗ್ರಾಮದ ಚಿದಾನಂದಪ್ಪ ಅವರನ್ನು ಬಂಧಿಸಲಾಗಿದೆ.
ಆರೋಪಿಗಳ ಜಮೀನಿನಲ್ಲಿನ ಅಡಿಕೆ ಗಿಡಗಳನ್ನು ನೇತ್ರಾವತಿ ಕಳೆದ ಏ.20ರಂದು ಕಡಿದು ಹಾಕಿದ್ದರು. ಇದರಿಂದ ಕುಪಿತಗೊಂಡಿದ್ದ ಆರೋಪಿಗಳು, ಜಮೀನಿನಲ್ಲಿಯೇ ಅವರನ್ನು ಕೊಲೆ ಮಾಡಿ ಸಮೀಪದ ಭದ್ರಾ ನಾಲೆಯಲ್ಲಿ ಎಸೆದಿದ್ದರು. ಇದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಸವಾಪಟ್ಟಣ ಠಾಣೆ ವ್ಯಾಪ್ತಿಯ ಕಣಿವೆ ಬಿಳಚಿ ಗ್ರಾಮದ ಬಳಿಯ ಭದ್ರಾ ನಾಲೆಯಲ್ಲಿ ಮೇ 9ರಂದು ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನೀರುಗಂಟಿಯೊಬ್ಬರು ನೀಡಿದ ದೂರನ್ನು ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಬಸವಾಪಟ್ಟಣ ಪೊಲೀಸರು ಪರಿಶೀಲಿಸಿದ್ದರು. ಕೊರಳಲ್ಲಿ ಹಗ್ಗ ಸುತ್ತಿದ ಗುರುತು ಇದ್ದುದರಿಂದ ಕೊಲೆ ಮಾಡಿ ನಾಲೆಗೆ ಹಾಕಿರಬಹುದು ಎಂಬ ಅನುಮಾನ ಮೂಡಿತ್ತು.
ಮೃತ ಶವದ ಗುರುತು ಪತ್ತೆಗಾಗಿ ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿದಾಗ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣಕ್ಕೂ ಮಹಿಳೆಯ ಚಹರೆಗೂ ಹೋಲಿಕೆ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳಲಾಯಿತು. ಶವವು ನೇತ್ರಾವತಿ ಅವರದ್ದೇ ಎಂದು ಕುಟುಂಬದವರು ಖಚಿತಪಡಿಸಿದರು. ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಅವರು ತಪ್ಪೊಪ್ಪಿಕೊಂಡಿದ್ದಾರೆ.
ಎಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಚನ್ನಗಿರಿ ಉಪವಿಭಾಗದ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಅವರ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು