ದಾವಣಗೆರೆ: ಭದ್ರಾ ನೀರು ಇಲ್ಲದೆ ಬಿಸಿಲಿನ ಝಳದಿಂದ ಒಣಗಿರುವ ಕಬ್ಬು, ಅಡಿಕೆ, ತೆಂಗು, ಬಾಳೆ ಬೆಳೆಗಳ ನಾಶದ ಅಂದಾಜನ್ನು ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು ಎಂದು ರೈತ ಒಕ್ಕೂಟದ ಮುಖಂಡ ಬಿ.ಎಂ ಸತೀಶ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳೆ ನಾಶದಿಂದಾಗಿರುವ ನಷ್ಟದ ಅಂದಾಜು ಮಾಡುವ ಸಮೀಕ್ಷೆಯಲ್ಲಿ ರೈತರು ಸಾಲ ಸೋಲ ಮಾಡಿ ಖರೀದಿಸಿ ಬಿತ್ತಿದ ಬೀಜ, ಹಾಕಿದ ಗೊಬ್ಬರ, ಕ್ರಿಮಿನಾಶಕಗಳ ವೆಚ್ಚ ಸೇರಿದಂತೆ ಜಮೀನು ಉಳಿಮೆ, ರೈತನ ಕುಟುಂಬದ ಶ್ರಮ ಮತ್ತು ಕೂಲಿ ವೆಚ್ಚ ಸೇರಿಸಬೇಕು. .ಅಂತರ್ಜಲ ಮಟ್ಟ ಕುಸಿದು ಬತ್ತಿರುವ ಕೊಳವೆಬಾವಿಗಳ ಸಮೀಕ್ಷೆ ನಡೆಸಿ ಅವುಗಳ ಅಂತರ್ಜಲ ಮಟ್ಟ ಮರುಪೂರಣ ಮಾಡುವ ಮೂಲಕ ಪುನರ್ಜೀವಗೊಳಿಸಬೇಕು. ದನ ಕರುಗಳು ಕುರಿ ಮೇಕೆಗಳು ಬಿಸಿಲಿನ ಝಳದಿಂದ ನರಳುತ್ತಿವೆ. ಇವು ಮೇವಿಲ್ಲದೆ, ಕುಡಿಯಲು ನೀರಿಲ್ಲದೆ ಬಡಕಲಾಗಿವೆ. ಈಗಾಗಲೇ ಕೆಲವು ಜಾನುವಾರುಗಳು ಸತ್ತಿವೆ. ಕೆಲವನ್ನು ರೈತರು ಸಾಕಾಲಾಗದೆ ಕೈಗೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ನಷ್ಟದ ಸಮೀಕ್ಷೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಎಲ್ಲಾ ನಷ್ಟದ ಸಮೀಕ್ಷೆ ನಡೆಸಲು ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಜಂಟಿ ಜವಾಬ್ದಾರಿಯಿಂದ ಕರೆದು, ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಅಧಿಕಾರಿಗಳ ಸಮಿತಿ ರಚಿಸಬೇಕು.ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದೆ.
ಜನ ಜಾನುವಾರುಗಳು ಬಿಸಿಗಾಳಿಯಿಂದ ಬಳಲಿ ಬೆಂಡಾಗಿ ಹೋಗಿದ್ದಾರೆ. ರೈತರದ್ದು ಕಾದ ಹೆಂಚಿನ ಮೇಲೆ ಬದುಕು ಎಂಬಂತಾಗಿ, ಬದುಕುವುದೇ ಕಷ್ಟಕರವಾಗಿದೆ.ರೈತರು ಬಿಸಿಲ ಝಳದಿಂದ ತತ್ತರಿಸಿ, ಬವಳಿ ಬೆಂಡಾಗಿ ಬಿಸಿಗಾಳಿ ಸೇವನೆ ಮಾಡುತ್ತಾ ಉರಿ ಅನುಭವಿಸುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರದ ಅಧಿಕಾರಿಗಳು ಸದಾ ಫ್ಯಾನ್ ಮತ್ತು ಹವಾನಿಯಂತ್ರಿತದ ತಣ್ಣನೆ ಗಾಳಿ ಸೇವನೆ ಮಾಡುತ್ತಾ ಬಸವ ಜಯಂತಿ, 2ನೇ ಶನಿವಾರ, ಭಾನುವಾರವೆಂದು ರಜೆಯ ಮೂಡಿನಲ್ಲಿ ತಮ್ಮ ಕುಟುಂಬಸ್ಥರೊಂದಿಗೆ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.ಸಿಎಂ-ಡಿಸಿಎಂರವರು ರೆಸಾರ್ಟ್ ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಇವರಿಗೆ ರೈತರು ಬದುಕಿದರೇನು ಬಿಟ್ಟರೇನು ಚಿಂತೆ ಇಲ್ಲ. ಚುನಾವಣೆ ಮುಗಿಸಿ ರಿಲ್ಯಾಕ್ಸ್ ಮೂಡಿನಲ್ಲಿರುವ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯಾರೂಪಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.