ದಾವಣಗೆರೆ: ಪದವಿ ಶಿಕ್ಷಣದ ಮೂರು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ನಿಗಧಿತವಾದ ಪಠ್ಯಕ್ರಮಗಳನ್ನಷ್ಟೇ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಎಸ್ಪಿ ಉಮಾ ಪ್ರಶಾಂತ್ ಹೇಳಿದರು.
ನಗರದ ಎವಿ ಕಮಲಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಮಿತಿ ಹಾಗೂ ಕ್ರೀಡಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಮುಗಿದ ಮೇಲೆ ಕೆಎಎಸ್, ಐಪಿಎಸ್ ತೆಗೆದುಕೊಳ್ಳಲು ಅವಕಾಶ ಇರುತ್ತದೆ. ಪದವಿ ಶಿಕ್ಷಣದ ಮೂರು ವರ್ಷದ ಅವಧಿಯಲ್ಲಿ ವಿದ್ಯಾರ್ಥಿಗಳು ನಿಗಧಿತವಾದ ಪಠ್ಯಕ್ರಮಗಳನ್ನಷ್ಟೇ ಓದದೆ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳಿದುಕೊಂಡರೆ ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಕಾಲೇಜುಗಳಲ್ಲೂ ಹೇಳಿಕೊಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ಪದವಿ ಮುಗಿಸಿರುವ ನಿಮಗೆ, ನಿಮ್ಮ ಯೋಚನೆ ಮೇಲೆ ನಿಮ್ಮ ಮುಂದಿನ ಶಿಕ್ಷಣ ಮತ್ತು ಜೀವನ ನಿರ್ಧಾರವಾಗುತ್ತದೆ. ನಕಾರಾತ್ಮಕವಾಗಿ ಯೋಚಿಸದೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡುವತ್ತ ಗಮನ ಹರಿಸಬೇಕು ಎಂದರು.
ಪ್ರಸ್ತುತ ಜಗತ್ತಿನಲ್ಲಿ ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಆರ್ಥಿಕ ಸ್ವಾತಂತ್ರ ಬಹಳ ಮುಖ್ಯವಾಗಿದ್ದು, ಆರ್ಥಿಕವಾಗಿ ಸ್ವಾತಂತ್ರರಾದರೆ ಜೀವನದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು, ಉದ್ಯೋಗಸ್ಥರಾದರೆ ಜೀವನದಲ್ಲಿ ಚನ್ನಾಗಿ ಇರಬಹುದು ಮತ್ತು ನಿಮ್ಮ ಮನೆಯಲ್ಲೂ ನೀವು ಹೇಳುವ ಮಾತಿಗೆ ಪ್ರಾಮುಖ್ಯತೆ ಸಿಗಲಿದೆ ಎಂದರು.
ನಾಯಕತ್ವದ ಗುಣ ಪ್ರತಿಯೊಬ್ಬ ಮಹಿಳೆಯರಲ್ಲೂ ಇರಬೇಕು. ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡರೆ ಜೀವನದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿನಿಯರು ಮೊಬೈಲ್’ನಲ್ಲೇ ತಮ್ಮ ಮೂಲ್ಯ ಸಮಯವನ್ನು ಕಳೆಯಬಾರದು. ಹುಡುಗಿಯರು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಫೋಟೋಗಳು ದುರ್ಬಳಕೆ ಆಗುತ್ತಿದ್ದು, ಇದರಿಂದ ನಿಮಗೆ ತೊಂದರೆ ಆಗಲಿದೆ. ಆದ್ದರಿಂದ ಮೊಬೈಲ್’ಗಳನ್ನು ಜವಾಬ್ದಾರಿನದಿಂದ ಬಳಕೆ ಮಾಡಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿನಿಯರು ಶಿಕ್ಷಣ ಹೆಚ್ಚು ಎನ್ನುವ ಬದಲು ಪ್ರೀತಿಯಲ್ಲಿ ಬೀಳುತ್ತಿದ್ದಾರೆ. ಓದುವಾಗ ಪ್ರೀತಿಯ ಕಡೆ ಗಮನಕೊಡದೆ ಚೆನ್ನಾಗಿ ಓದಿ ಸಾಧನೆ ಮಾಡಬೇಕು. ನಿಮಗೆ ಕಾನೂನಿನಲ್ಲಿ ಇರುವ ಹಕ್ಕುಗಳ ಬಗ್ಗೆ, ಸರ್ಕಾರದಿಂದ ಸಿಗುವ ಸೌಲಭ್ಯಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ನಾನೂ ಕೂಡ ಮಹಿಳಾ ಕಾಲೇಜಿನಲ್ಲಿ ಓದಿದ್ದೇನೆ. ಎವಿಕೆ ಕಾಲೇಜು ತುಂಬ ಹಳೇಯ ಮತ್ತು ಮಹಿಳೆಯರಿಗಾಗಿ ದಾವಣಗೆರೆಯಲ್ಲಿ ಆರಂಭಗೊAಡ ಮೊದಲ ಪದವಿ ಕಾಲೇಜು ಎಂದು ಕೇಳಿ ಖುಷಿ ಆಯಿತು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗ ಮಹಿಳೆಯರು ಹೆಚ್ಚು ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದು, ಎಷ್ಟೋ ಮಕ್ಕಳು ಓದನ್ನು ಮುಂದುವರೆಸಲು ಸಾಧ್ಯವಾಗಿರುವುದಿಲ್ಲ. ಆದರೆ ನೀವೆಲ್ಲ ಈಗ ಪದವಿ ಮುಗಿಸಿ ಮುಂದಿನ ವಿಧ್ಯಾಭ್ಯಾಸಕ್ಕೆ ಹೋಗುತ್ತಿದ್ದು, ಇದಕ್ಕಾಗಿ ನಿಮ್ಮ ತಂದೆ ತಾಯಿಗಳಿಗೆ ಕೃತಜ್ಞರಾಗಿರಬೇಕು ಎಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿಡಿ ರಾಘವನ್, ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕಮಲಾ ಸೊಪ್ಪನ್ ಅವರು ಮಾತನಾಡಿದರು. ರ‍್ಯಾಂಕ್ ಪಡೆದ ವಿದ್ಯಾರ್ಥಿನಿಯರಾದ ಭೂಮಿಕ ಹೊಳಲ್, ಕಿರಣಕುಮಾರಿ ಎಲ್ ಎ, ಸೈಯದಾ ಉಮ್ಮೆ ಹಾನಿ ಇವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಎವಿಕೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರವಿ ಬಣಕಾರ್, ಐಕ್ಯೂಎಸಿ ಸಂಚಾಲಕ ಆರ್.ಆರ್.ಶಿವಕುಮಾರ್, ಕ್ರೀಡಾ ಸಮಿತಿ ಸಂಯೋಜಕ ಆರ್ ಚನ್ನಬಸವನಗೌಡ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಶ್ರೀಮತಿ ಪ್ರಭಾವತಿ ಎಸ್ ಹೊರಡಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ರಣಧೀರ, ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಡಾ ಕವಿತ ಆರ್ ಜಿ ಸೇರಿದಂತೆ ಇತರರು ಇದ್ದರು.