ಶಿವಮೊಗ್ಗ: ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಅಂಜಲಿ ಹತ್ಯೆ ಅತ್ಯಂತ ಕ್ರೂರವಾದುದು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಡೀ ರಾಜ್ಯಾದ್ಯಂತ ಹೆಣ್ಣು ಮಕ್ಕಳ ಸರಣಿ ಕೊಲೆಗಳಾಗುತ್ತಿವೆ. ಕಾನೂನು ಸುವ್ಯವಸ್ಥೆ ಕುಸಿದುಬಿದ್ದಿದೆ. ಈ ಹಿಂದೆ ಹುಬ್ಬಳ್ಳಿಯ ನೇಹಾ, ಮಡಿಕೇರಿಯ ಮೀನಾ, ಹತ್ಯೆಯಾಗಿತ್ತು. ಅದೇ ರೀತಿ ಈಗ ಅಂಜಲಿ ಕೊಲೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಕೊಲೆಗಡುಕರಿಗೆ ಹೆದರಿಕೆ ಇಲ್ಲದಂತಾಗಿದೆ ಎಂದು ದೂರಿದರು.
ಈ ಪ್ರಕರಣದ ಬಗ್ಗೆ ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು. ಆರೋಪಿಯನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು. ಶೀಘ್ರವೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಗಾಯತ್ರಿದೇವಿ ಮಲ್ಲಪ್ಪ, ಪ್ರಮುಖರಾದ ಮಂಗಳಾ ನಾಗೇಂದ್ರ, ಜ್ಯೋತಿ ರಘು, ಯಶೋದಾ, ರಶ್ಮಿ ಶ್ರೀನಿವಾಸ್, ಸುರೇಖಾ ಪಾಲಾಕ್ಷಪ್ಪ, ಸುಮಿತ್ರಾ ಇದ್ದರು.