ಬೆಂಗಳೂರು : ಹೊಸ ವರ್ಷಾಚರಣೆಗಾಗಿ ಮಾದಕ ಪದಾರ್ಥಗಳನ್ನು ಸಂಗ್ರಹ ಮಾಡಿಟ್ಟಿದ್ದ ದಾವಣಗೆರೆ ಮೂಲದ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಖೆಡ್ಡಾಕ್ಕೆ ಬೀಳಿಸಿಕೊಂಡಿದ್ದಾರೆ. ದಾವಣಗೆರೆ ಮೂಲದ ರಕ್ಷಿತ್ ಆರ್.ಎಂ (30 ) ಬಂಧಿತ ವ್ಯಕ್ತಿ. ಈತ ಸಂಪಿಗೆಹಳ್ಳಿ ಠಾಣೆ ವ್ಯಾಪ್ತಿಯ ಚೊಕ್ಕನಹಳ್ಳಿಯ ಅಪಾರ್ಟ್ಮೆಂಟ್‌ನಲ್ಲಿ 2.50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸವಿದ್ದ ಬಂಧಿತ ಆರೋಪಿಯು ಟ್ಯಾಟೂ ಆರ್ಟಿಸ್ಟ್ ಆಗಿ ಕೆಲಸ ಮಾಡಿಕೊಂಡಿದ್ದ. ಗೋವಾದಿಂದ ಎಲ್‌ಎಸ್‌ಡಿ, ಥೈಲ್ಯಾಂಡ್‌ನಿಂದ ಹೈಡ್ರೋ ಗಾಂಜಾ, ಹಿಮಾಚಲ ಪ್ರದೇಶದಿಂದ ಚರಸ್ ಹಾಗೂ ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಂಡು ಸಂಗ್ರಹಿಸಿಟ್ಟುಕೊಂಡಿದ್ದ.

ಆತನ ವಶದಲ್ಲಿದ್ದ 3.55 ಕೆಜಿ ಹೈಡ್ರೋ ಗಾಂಜಾ, 16.65 ಕೆಜಿ ಗಾಂಜಾ, 40 ಎಲ್‌ಎಸ್‌ಡಿ ಸ್ಟ್ರಿಪ್ಸ್, 130 ಗ್ರಾಂ ಚರಸ್, 2.3 ಗ್ರಾಂ ಎಂಡಿಎಂಎ ಕ್ರಿಸ್ಟಲ್, 1.30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅದೇ ರೀತಿ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಪ್ರತ್ಯೇಕ ಕಾರ್ಯಾಚರಣೆ ಕೈಗೊಂಡಿದ್ದ ಪೊಲೀಸರು 11 ಜನ ಆರೋಪಿಗಳನ್ನ ಬಂಧಿಸಿದ್ದು ಒಟ್ಟು 13 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ. ಹಾಗೂ ಆರು ಆರೋಪಿಗಳನ್ನ ಬಂಧಿಸಿ 12.70 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿರುವುದಾಗಿ ತಿಳಿಸಿದರು.

Share.
Leave A Reply

Exit mobile version