ನಂದೀಶ್ ಭದ್ರಾವತಿ, ದಾವಣಗೆರೆ

ದಿನದಿಂದ ದಿನಕ್ಕೆ ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷ ಯಾರು ಎಂಬುದಕ್ಕೆ ಬಹುತೇಕ ಸಂಕ್ರಾಂತಿಯೊಳಗೆ ಉತ್ತರ‌ ಸಿಗುವ ಲಕ್ಷಣವಿದೆ. ಇತ್ತೀಚೆಗೆ ನಗರಕ್ಕೆ ಭೇಟಿ ನೀಡಿದ್ದ ಬಿಜೆಪಿ ನಾಯಕ ವಿಜಯೇಂದ್ರ ಎರಡು ಬಣಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ಪ್ರಮುಖ್ ರ ಸಭೆ ನಡೆಸಲಾಗಿದೆ. ಇನ್ನು  ಮುಖಂಡರ ಅಭಿಪ್ರಾಯ ಪಡೆದುಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಈಗಾಗಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಸದ್ಯ‌ 6 ಜನರ ಪಟ್ಟಿ ನೀಡಲಾಗಿದೆ. ಅದರಲ್ಲಿ ಮೂರು ಜನರನ್ನು ಫೈನಲ್ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಬಿಜೆಪಿ ನೂತನ ಜಿಲ್ಲಾಧ್ಯಕ್ಷರ ಹೆಸರು ಘೋಷಿಸುವುದೊಂದೇ ಬಾಕಿ ಉಳಿದಿದೆ. ಅದಕ್ಕೆ ಸಂಕ್ರಾಂತಿಯ ಮುಹೂರ್ತ ನಿಗದಿಯಾಗಿದೆ ಎಂದು ತಿಳಿದು ಬಂದಿದೆ.

ಆಕಾಂಕ್ಷಿಗಳು ಯಾರ್‍ಯಾರು?:

ಈಗಾಗಲೇ ಜಿಲ್ಲಾ ಬಿಜೆಪಿ ಅಧ್ಯಕ್ಷರ ಅವಧಿ ಪೂರ್ಣಗೊಂಡಿದೆ. ಸದ್ಯ‌ ಹನಗವಾಡಿ ವೀರೇಶ್ ಅಧ್ಯಕ್ಷರಾಗಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಭೆ ನಡೆಸಿ, ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆಯಲಾಗಿದ್ದು, 46 ಕ್ಕೂ ಹೆಚ್ಚು ಜನ ಪ್ರಮುಖ ಆಕಾಂಕ್ಷಿಗಳಿದ್ದರು‌ ಎಂಬ ಮಾಹಿತಿ ಇದೆ.  ಆದರೆ, ಪ್ರಮುಖವಾಗಿ ಕೆಲವೊಂದು ಹೆಸರು ಮಾತ್ರ ಕೇಳಿ ಬರುತ್ತಿವೆ.

ಸದ್ಯ ಲಿಂಗಾಯಿತರ ಕೋಟಾ, ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕ ಬಿ.ಪಿ.ಹರೀಶ್ ಇರುವ ಕಾರಣ ಅವರ ಹೆಸರು ಮೊದಲ ಸ್ಥಾನದಲ್ಲಿದೆ. ಇನ್ನು ಬಿಜೆಪಿ ನಾಯಕ ದೂಡಾ ಮಾಜಿ ಅಧ್ಯಕ್ಷ ಕೆಎಂ ಸುರೇಶ್, ಜಗದೀಶ್, ಕಾರ್ಪೋರೇಟೇರ್, ಮಾಜಿ ಮೇಯರ್ ವೀರೇಶ್  ಇದ್ದಾರೆ. ಅಲ್ಲದೇ ಎಸ್ಟಿ ಕೋಟಾದಲ್ಲಿ ಶ್ರೀನಿವಾಸ್ ದಾಸಕರಿಯಪ್ಪ ಎರಡನೇ‌ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಆಪ್ತ ರಾಜನಹಳ್ಳಿ ಶಿವಕುಮಾರ್ ಇದ್ದಾರೆ.

ಶಾಸಕ ಬಿ.ಪಿ.ಹರೀಶ್ ಬಹುತೇಕ ಸಾಧ್ಯತೆ

 ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಶಾಸಕ ಬಿ.ಪಿ.ಹರೀಶ್ ಗೆ ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಬದಲಾವಣೆ ಆದರೂ ಆಗಬಹುದು. ಲಿಂಗಾಯಿತ ಕೋಟಾ ಬಿಟ್ಟರೇ ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್ ಇದ್ದಾರೆ

ಶಾಸಕ ಬಿ.ಪಿ.ಹರೀಶ್ ಬಿಎಸ್ ವೈ ಆಪ್ತ

ಈ ಹಿಂದೆ ಬಿ.ಎಸ್‌. ಯಡಿಯೂರಪ್ಪನವರೊಂದಿಗೆ ಕೆಜೆಪಿ ಪಕ್ಷಕ್ಕೂ ಹೋಗಿದ್ದರು. ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರಿಗೆ ನಿಷ್ಠರಾಗಿದ್ದಾರೆ. ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಪದಾಧಿಕಾರಿಗಳ ನೇಮಕದಲ್ಲೂ ವಿಜಯೇಂದ್ರ ಅವರ ಆಪ್ತರಿಗೆ ಪ್ರಾಶಸ್ತ್ಯ ಸಿಕ್ಕಿದೆ. ಹೀಗಾಗಿ ಬಿ.ಪಿ.ಹರೀಶ್  ಅವರನ್ನು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಎಸ್ ಎಆರ್ ಬೆಂಬಲ

ಮಾಜಿ ಶಾಸಕ ಎಸ್.ಎ.ರವೀಂದ್ರನಾಥ್ ಕಟ್ಟಾ ಬೆಂಬಲಿಗ, ಆಪ್ತ ಕೆಎಂ ಸುರೇಶ್ ಕೂಡ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೇ ಬಿ.ವೈ.ವಿಜಯೇಂದ್ರ ಎಸ್.ಎಆರ್ ಮನೆಗೆ ಹೋಗಿದ್ದ ವೇಳೆ ಈ ವಿಷಯ ಚರ್ಚೆಯಾಗಿರಬಹುದು ಎಂಬ ಮಾತಿದೆ.

ಸಂಘದ ನಿಷ್ಠಾವಂತ ಜಗದೀಶ್

ಇನ್ನು, ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಕೇಳಿ ಬರುತ್ತಿರುವ ಪ್ರಮುಖ ಹೆಸರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ದಾಗಿದ್ದು, ಇವರ ಬೆಂಬಲಕ್ಕೆ ಜಿ.ಎಂ.ಸಿದ್ದೇಶ್ವರ ನಿಂತಿದ್ದಾರೆ. ಅಲ್ಲದೇ ಪ್ರಧಾನ ಕಾರ್ಯದರ್ಶಿ ಸ್ಥಾನವೂ ಸಿಕ್ಕಿರುವ ಕಾರಣ ಇವರ ಹೆಸರು ಕೂಡ ಕೇಳಿಬರುತ್ತಿದೆ.

 ಹಿಂದೂ ಹೋರಾಟದಿಂದ ಬಂದ ಮಾಜಿ ಮೇಯರ್ :

ಮಾಜಿ ಮೇಯರ್ ವೀರೇಶ್ ಹಿಂದೂ ಹೋರಾಟದಿಂದ ಬಂದಿದ್ದು, ಹಿಂದೂ ಬ್ರಾಂಡ್ ಇವರ ಬೆಂಬಲಕ್ಕೆ ಇದೆ. ಅಲ್ಲದೇ ಸಂಘಟನಾ ಕೌಶಲ, ಮಾತುಗಾರಿಕೆ, ಕಲೆಗಾರಿಕೆ ಇವರಲ್ಲಿ ತುಸು ಹೆಚ್ಚಿದೆ‌. ಇವರಿಗೂ ಕೂಡ ಬಿಜೆಪಿ ನಾಯಕರ ಬೆಂಬಲವಿದೆ.

ಅಹಿಂದ ಮತಗಳು ರಾಜನಹಳ್ಳಿ ಶಿವಕುಮಾರ್ ಬೆಂಬಲಕ್ಕೆ

ದಾವಣಗೆರೆ ಜಿಲ್ಲೆಯಲ್ಲಿ ಲಿಂಗಾಯಿತರ ಮತಗಳು ಬಿಟ್ಟರೇ ಕುರುಬ ಸಮುದಾಯದ ಮತಗಳು ಹೆಚ್ಚಿದೆ. ಅಲ್ಲದೇ ಅಹಿಂದ ಮತಗಳು ರಾಜನಹಳ್ಳಿ ಶಿವಕುಮಾರ್ ಬೆಂಬಲಕ್ಕಿದೆ. ಇನ್ನು ರಾಜಕೀಯ ನಾಯಕರ ಬೆಂಬಲವೂ ಇದೆ.

ಯೂತ್ ಐಕಾನ್ : ಶ್ರೀನಿವಾಸ ದಾಸಕರಿಯಪ್ಪ

 ಯೂತ್ ಐಕಾನ್ ಶ್ರೀನಿವಾಸ್ ದಾಸಕರಿಯಪ್ಪ ಆಗಿದ್ದು, ರಾಜಕೀಯ ಚತುರ..ಮಾತು ಕಡಿಮೆಯಾದರೂ, ಸಂಘಟನಾ ಪ್ರಾಬಲ್ಯ ಹೆಚ್ಚಿದೆ. ಇನ್ನೂ ಸಿದ್ದೇಶ್ವರ ಆಪ್ತ ಬಳಗದಲ್ಲಿ ಇವರು ಕೂಡ ಒಬ್ಬರು. ಆದ್ದರಿಂದ ಕೋಟಾದಡಿ ಇವರಿಗೆ ಜಿಲ್ಣಾಧ್ಯಕ್ಷ ಸಿಗಬಹುದಾ ಎಂಬ ಲೆಕ್ಕಾಚಾರವಿದೆ.

ಇವರೆಲ್ಲರೂ ಪಕ್ಷದ ನಿಷ್ಠಾವಂತರು

ಈ ಆ  ಹಲವು ವರ್ಷಗಳಿಂದ ಆರು ಜನ ಪಕ್ಷಕ್ಕೆ ನಿಷ್ಠರಾಗಿ ಕೆಲಸ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್‌ ನೀಡಬೇಕೆಂದು ಬಹಿರಂಗವಾಗಿಯೇ ಆಗ್ರಹಿಸಿರುವ ಮಾಜಿ ಶಾಸಕ ರೇಣುಕಾಚಾರ್ಯ ಕೂಡ ಜಿಲ್ಲಾಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿದ್ದಾರೆ.  ಅದಕ್ಕಾಗಿ ತೆರೆಮರೆಯಲ್ಲಿ  ಕಸರತ್ತು ನಡೆಸಿದ್ದಾರೆ. ಪಕ್ಷ ಅಂತಿಮವಾಗಿ ಯಾರಿಗೆ ಮಣೆ ಹಾಕುತ್ತದೋ? ಸಂಕ್ರಾಂತಿಯ ಸಿಹಿ ಯಾರಿಗೆ ಸಿಗುತ್ತದೋ ಕಾದು ನೋಡಬೇಕು.

ಹಿರಿತನ, ಸಂಘಟನಾ ಚತುರರಿಗೆ ಆದ್ಯತೆ :

ಹಿರಿತನ, ಸಂಘಟನಾ ಚತುರ ಹಾಗೂ ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ವ್ಯಕ್ತಿಗೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಿದೆ. ಎರಡ್ಮೂರು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆಯೂ ಇದೆ.  ಇನ್ನು ಪಕ್ಷಕ್ಕೆ ಸಲ್ಲಿಸಿರುವ ಸೇವೆ, ಸಂಘಟನೆಯಲ್ಲಿ ನಿರ್ವಹಿಸಿದ ಜವಾಬ್ದಾರಿ, ನಿರ್ವಹಿಸಿದ ಕೆಲಸಗಳು, ಜಿಲ್ಲಾದ್ಯಂತ ಹೊಂದಿರುವ ಸಂಪರ್ಕ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.‌ ಜತೆಗೆ ವೈಯಕ್ತಿಕ ಸಾಮರ್ಥ್ಯ, ಪರಿಶ್ರಮ, ಪಕ್ಷಕ್ಕೆ ಆಗುವ ಲಾಭ ಎಲ್ಲವನ್ನೂ ಯೋಚಿಸಿ ತೀರ್ಮಾನಕ್ಕೆ ಬರಲಾಗುತ್ತದೆ.

ಪಕ್ಷ ನಿಷ್ಠೆಯೋ, ವ್ಯಕ್ತಿ ನಿಷ್ಠೆಯೋ?

ಬಿಜೆಪಿಯಲ್ಲಿ ಪಕ್ಷ ನಿಷ್ಠರಿಗಿಂತ ವ್ಯಕ್ತಿ ನಿಷ್ಠರಿಗೆ ಮೊದಲಿನಿಂದಲೂ ಪ್ರಾಶ್ಯಸ್ತ ಕೊಡುತ್ತ ಬರಲಾಗಿದೆ. ಬಿಜೆಪಿ ರಾಜ್ಯ ಘಟಕದ ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕೂಡ ರಾಜ್ಯ ಪದಾಧಿಕಾರಿಗಳ ಪಟ್ಟಿಯಲ್ಲಿ ಅವರ ಆಪ್ತರಿಗೆ ಮಣೆ ಹಾಕಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.  

ಜಿಲ್ಲಾಧ್ಯಕ್ಷರ ನೇಮಕದಲ್ಲೂ ವಿಜಯೇಂದ್ರ ತಮಗೆ ಆಪ್ತರಾದವರಿಗೆ ಮಣೆ ಹಾಕುತ್ತಾರೆ ಎಂಬ ಚರ್ಚೆಗಳು ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಿವೆ. ಅಂತಿಮವಾಗಿ ಪಕ್ಷ ನಿಷ್ಠರಿಗೋ ಅಥವಾ ವ್ಯಕ್ತಿ ನಿಷ್ಠರಿಗೋ? ಯಾರಿಗೆ ಟಿಕೆಟ್‌ ಸಿಗಲಿದೆ ಎನ್ನುವುದು ಬಿಜೆಪಿಯಲ್ಲೂ ಕುತೂಹಲ ಮನೆ ಮಾಡಿದೆ

ಕಮಲ ಪಡೆಯ ಸಂಘಟನೆ ಕಾರ್ಯ ಚುರುಕು ;

ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ.ವೈ. ವಿಜಯೇಂದ್ರ ಅವರನ್ನು ನೇಮಕ ಮಾಡಿದ ನಂತರ ಕಮಲ ಪಡೆಯ ಸಂಘಟನೆ ಕಾರ್ಯ ಚುರುಕುಗೊಂಡಿದೆ. ಹಾಗೆಯೇ ಯಡಿಯೂರಪ್ಪ, ವಿಜಯೇಂದ್ರ ಅವರ ಆಪ್ತರೇ ದಾವಣಗೆರೆಯಲ್ಲಿ ಜಿಲ್ಲಾಧ್ಯಕ್ಷ ಸ್ಥಾನ ಸಿಗುವ ನಿರೀಕ್ಷೆ ಇದೆ.

ಕೆಲ ಆಪ್ತವಲಯ ಈಗಾಗಲೇ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ಸಮಿತಿಗೆ ಶಿಫಾರಸು

ರಾಜ್ಯ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ನಂತರ ಹಲವು ತಂಡಗಳನ್ನು ಮಾಡಿ ಜಿಲ್ಲೆಗಳಿಗೆ ಈಗಾಗಲೇ ಕಳಿಸಲಾಗಿದೆ. ಅವರು ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಕೋರ್ ಕಮಿಟಿ ಜತೆಗೆ ಚರ್ಚಿಸಿ ಕೆಲವು ಹೆಸರುಗಳನ್ನು ರಾಜ್ಯ ಸಮಿತಿಗೆ ಶಿಫಾರಸು ಮಾಡಿದ್ದಾರೆ.

ಈ ವರ್ಷ ಸಾಲು ಸಾಲು ಚುನಾವಣೆ

ಇನ್ನೇನು ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಮುಂಬರುವ ದಿನಗಳಲ್ಲಿ ವಿಧಾನ ಪರಿಷತ್‌, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹೀಗೆ ಸಾಲು ಸಾಲು ಚುನಾವಣೆಗಳು ಬರಲಿವೆ. ಅದಕ್ಕಾಗಿ ಜಿಲ್ಲಾದ್ಯಂತ ಪ್ರವಾಸ ಮಾಡಿ, ಸಂಘಟನೆಗೆ ಶಕ್ತಿ ತುಂಬುವ ಮಹತ್ವದ ಜವಾಬ್ದಾರಿ ನೂತನ ಸಾರಥಿಯ ಮೇಲಿರುತ್ತದೆ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸವಾಲನ್ನು ಅವರು ಹೇಗೆ ನಿಭಾಯಿಸುತ್ತಾರೆ ಎನ್ನುವುದೂ ಕೂಡ ಪ್ರಮುಖ ಅಂಶವಾಗಿದೆ. ಒಟ್ಟಾರೆ ಜಿಲ್ಲಾಧ್ಯಕ್ಷರು ಯಾರು ಆಗುತ್ತಾರೆಂದು ಕಾದು ನೋಡಬೇಕು.

Share.
Leave A Reply

Exit mobile version