ನಂದೀಶ್ ಭದ್ರಾವತಿ, ದಾವಣಗೆರೆ
ದಾವಣಗೆರೆ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆ ಫೆ.7 ಕ್ಕೆ ನಡೆಯಲಿದ್ದು, ಕಾಂಗ್ರೆಸ್ ನಲ್ಲಿಯೇ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ.
ಈಗಾಗಲೇ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ (ಡಿಸಿಸಿ ಬ್ಯಾಂಕ್) ಆಡಳಿತ ಮಂಡಳಿ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ನೇತೃತ್ವದಲ್ಲಿ 10 ಜನರು ನಿರ್ದೇಶಕರಾಗಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ತೆಕ್ಕೆಗೆ ಆಡಳಿತ ಬಂದಿದೆ. ಈ ಹಿನ್ನೆಲೆಯಲ್ಲಿ ಸಚಿವ ಮಲ್ಲಿಕಾರ್ಜುನ್ ಹೇಳುವ ನಿರ್ದೇಶಕರೇ ಅಧ್ಯಕ್ಷರಾಗುವ ಸಂಭವವಿದೆ.
ಅಧ್ಯಕ್ಷ ಸ್ಥಾನಕ್ಕೆ ಯಾರು ಆಕಾಂಕ್ಷಿಗಳು
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಸ್ವತಃ ಮುತುವರ್ಜಿವಹಿಸಿ ನಾಮಪತ್ರ ಸಲ್ಲಿಸಿದ್ದ ಕೋಗುಂಡಿ ಬಕ್ಕೇಶಪ್ಪ ಅಧ್ಯಕ್ಷ ಹಾದಿಯ ಮೊದಲ ಸ್ಥಾನದಲ್ಲಿದ್ದಾರೆ.ಹೊನ್ನಾಳಿ, ನ್ಯಾಮತಿ, ಚನ್ನಗಿರಿ ಭಾಗ 2 ರ ಹಾಲು ಉತ್ಪಾದಕರ ಸಂಘದಿಂದ ಆಯ್ಕೆಯಾಗಿದ್ದ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಉಳಿದಂತೆ ಮೂರನೇ ಆಂಕಾಕ್ಷಿಯಾಗಿ ಮುದೇಗೌಡ್ರು ಗಿರೀಶ್ ಕಣದಲ್ಲಿದ್ದಾರೆ. ಬಹುತೇಕ ಅವಿರೋಧ ಆಯ್ಕೆಯಾಗುವ ಎಲ್ಲ ಲಕ್ಷಣಗಳು ಇವೆ.
ಲೋಕಸಭೆ ಚುನಾವಣೆ, ಕಾಂಗ್ರೆಸ್ ಗೆಲ್ಲಿಸುವ ಶಕ್ತಿ ಇರೋರಿಗೆ ಅಧ್ಯಕ್ಷ ಸ್ಥಾನ
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಬೇಕೆಂಬ ಹೊಣೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೆಗಲ ಮೇಲೆ ಇದೆ. ಇದರಲ್ಲಿ ಡಿಸಿಸಿ ಬ್ಯಾಂಕ್ ಮತದಾರರ ಹೊಣೆ ಸಾಕಷ್ಟಿದೆ. ಆದ್ದರಿಂದ ಕಾಂಗ್ರೆಸ್ ಗೆ ಮತ ಹಾಕಿಸುವ ಆರ್ಥಿಕ ಶಕ್ತಿ ಇರೋರು ನೇಮಕವಾಗುವ ಸಾಧ್ಯತೆಯೇ ಬಹುತೇಕ ಹೆಚ್ಚಿದೆ. ಕೋಗುಂಡಿ ಬಕ್ಕಣ್ಣ ಸಹಕಾರ ಕ್ಷೇತ್ರದಲ್ಲಿ ತಮ್ಮದೇ ಹೆಸರು ಮಾಡಿದ್ದಾರೆ. ಆದರೆ ಅವರಿಗೆ ಅಷ್ಟಾಗಿ ರಾಜಕೀಯ ಅನುಭವವಿಲ್ಲ. ಇನ್ನು ಕಂಚುಗಾರನಳ್ಳಿ ಬಸಪ್ಪ ಹಾಲಿ ಶಿಮುಲ್ ಉಪಾಧ್ಯಕ್ಷರಾಗಿದ್ದು, ಅಡೆ ತಡೆಗಳ ನಡುವೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಬಹು ಮತಗಳ ಅಂತರದಿಂದ ಗೆದ್ದಿದ್ದಾರೆ. ಇವರು ಸಹ ಆಕಾಂಕ್ಷಿಯಾಗಿದ್ದು, ನಿರ್ದೇಶಕರ ಮನವೊಲಿಸುತ್ತಿದ್ದಾರೆ. ಇನ್ನು ಮುದೇಗೌಡ್ರು ಗಿರೀಶ್ ಈ ಹಿಂದೆ ಎಪಿಎಂಸಿ ಅಧ್ಯಕ್ಷರಾಗಿದ್ದು, ಅವರಿಗೂ ರಾಜಕೀಯ ಅನುಭವವಿದೆ. ಇವೆಲ್ಲದರ ನಡುವೆ ತೆರೆಮರೆ ಆಟ ಕೂಡ ನಡೆಯುತ್ತಿದೆ.
ನಿರ್ದೇಶಕರ ಮನವೊಲಿಕೆ
ಕಾಂಗ್ರೆಸ್ ಬೆಂಬಲಿತರು ಹತ್ತು ಸ್ಥಾನ ಗೆದ್ದ ಹಿನ್ನೆಲೆಯಲ್ಲಿ ಅವರಲ್ಲಿಯೇ ಪೈಪೋಟಿ ಹೆಚ್ಚಿದೆ. ಆದ್ದರಿಂದ ಅಧ್ಯಕ್ಷ ಸ್ಥಾನ ಹಾದಿಯ ಆಕಾಂಕ್ಷಿಗಳು ನಿರ್ದೇಶಕರ ಮನವೊಲಿಸುತ್ತಿದ್ದಾರೆ. ಅಲ್ಲದೇ ಅವರ ಬೇಡಿಕೆಗಳನ್ನು ಕೇಳುತ್ತಿದ್ದಾರೆ. ಇನ್ನು ವ್ಯಕ್ತಿ ರಾಜಕಾರಣ ನಡೆಯುತ್ತಿದ್ದು, ಶಾಸಕರ ಮನವೊಲಿಕೆಯೂ ನಡೆಯುತ್ತಿದೆ.
ಬಿಜೆಪಿ ಮತಗಳು ನಿರ್ಣಾಯಕ
ಕಾಂಗ್ರೆಸ್ ಹತ್ತು ಸ್ಥಾನಗಳು ಗಳಿಸಿದ್ದರೂ, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮತಗಳೇ ನಿರ್ಣಾಯಕವಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳು ಹೆಚ್ಚು ಇರುವ ಕಾರಣ ಬಿಜೆಪಿಯ ಮೂರು ಮತಗಳು ನಿರ್ಣಾಯಕವಾಗಿದೆ. ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಹೆಚ್ಚು ನಾಮಪತ್ರ ಸಲ್ಲಿಸಿದರೆ ಮತಗಳು ವಿಭಜನೆಗೊಳ್ಳಲಿವೆ. ಆಗ ಬಿಜೆಪಿ ಮತಗಳು ಪ್ರಮುಖ ಪಾತ್ರವಹಿಸುತ್ತದೆ.
ಉಲ್ಟಾ ಮತದಾನ ಸಾಧ್ಯತೆ
ಡಿಸಿಸಿ ಬ್ಯಾಂಕ್ ನಲ್ಲಿ ಕಾಂಗ್ರೆಸ್ ತನ್ನ ಹಿಡಿತ ಸಾಧಿಸಿದರೂ, ಅಧ್ಯಕ್ಷರನ್ನು ಯಾರು ಮಾಡಬೇಕೆಂಬ ಗೊಂದಲದಲ್ಲಿ ಇದೆ. ಒಂದು ವೇಳೆ ಬಿಜೆಪಿಯಿಂದ ಯಾರಾದರೂ ಸ್ಪರ್ಧಿಸಿದರೆ ಉಲ್ಟಾ ಮತದಾನವಾಗುವ ಸಾಧ್ಯತೆ ಇದೆ. ಇಲ್ಲಿ ಬಿಜೆಪಿ ಗೆಲ್ಲದೇ ಹೋದರೂ ಮತ ವಿಭಜನೆ ಮಾಡುವ ಶಕ್ತಿ ಹೊಂದಿದೆ.
ಕಾಂಗ್ರೆಸ್ ನಿಂದ ಗೆದ್ದವರು ಯಾರು?
ಕಾಂಗ್ರೆಸ್ ಬೆಂಬಲಿತ ದಾವಣಗೆರೆ ‘ಎ’ ವರ್ಗ ಭಾಗ-2 ಬಿ.ಕರಿಬಸಪ್ಪ, ಹರಿಹರ ‘ಎ’ವರ್ಗ ಡಿ.ಕುಮಾರ್, ಚನ್ನಗಿರಿ ‘ಎ’ ವರ್ಗ ಭಾಗ 2 ಸಂತೋಷ ಜಿ.ಎಸ್., ಹೊನಾಳ್ಳಿ ಭಾಗ-1 ಡಿ.ಎಸ್.ಸುರೇಂದ್ರ, ಭಾಗ-2 ಡಿ.ಜೆ.ವಿಶ್ವನಾಥ್, ದಾವಣಗೆರೆ ‘ಬಿ’ ವರ್ಗದಿಂದ ಜೆ.ಆರ್.ಷಣ್ಮುಖಪ್ಪ (ಅವಿರೋಧ) ದಾವಣಗೆರೆ ‘ಸಿ’ ವರ್ಗದಿಂದ ಕೋಗುಂಡಿ ಬಕ್ಕೇಶಪ್ಪ, ದಾವಣಗೆರೆ ಜಿಲ್ಲಾ ‘ಇ’ ವರ್ಗದಿಂದ ಮುದೇಗೌಡ್ರ ಗಿರೀಶ್, ದಾವಣಗೆರೆ, ಜಗಳೂರು, ಹರಿಹರ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಸುರೇಶ್ ಕೆಂಚಮ್ಮನಹಳ್ಳಿ, ಚನ್ನಗಿರಿ ಹೊನಾಳ್ಳಿ, ನ್ಯಾಮತಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಎಚ್.ಕೆ.ಬಸಪ್ಪ ಕಂಚುಗಾರನಹಳ್ಳಿ ಚುನಾಯಿತರಾಗಿದ್ದಾರೆ. ಒಟ್ಟಾರೆ ಅಧ್ಯಕ್ಷ ಹಾದಿಗೆ ಒಂದೇ ಪಕ್ಷದಲ್ಲಿ ಭಾರೀ ಪೈಪೋಟಿ ಇದ್ದು, ಅಧಿಕಾರ ಸಿಗದೇ ಹೋದರೂ ಬಿಜೆಪಿ ತೆರೆಮರೆ ಆಟ ನಡೆಸುತ್ತಿದೆ. ಈ ನಡುವೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಸಹ ಉತ್ತಮ ನಾಯಕನ ತಲಾಷೆ ನಡೆಸಿದ್ದು, ಚುನಾವಣೆ ಫಲಿತಾಂಶ ಬರುವ ತನಕ ಕಾಯಬೇಕಿದೆ.