ದಾವಣಗೆರೆ ; ನಾವು ಜಾತಿಗಣತಿ ವಿರೋಧಿಗಳು ಅಲ್ಲ ಎಂದು ಸಚಿವ ಹಾಗೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಹೇಳಿದರು.

ನಗರದ ಎಂಬಿಎ ಕಾಲೇಜು ಮೈದಾನದಲ್ಲಿ ಆರಂಭಗೊಂಡ ಎರಡು ದಿನಗಳ ಮಹಾಧಿವೇಶನದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಜಾತಿಗಣತಿ ವಿರೋಧಿಗಳು ಅಲ್ಲ. ಆದರೆ ಸಮೀಕ್ಷೆ ವಾಸ್ತವಾಂಶದಿಂದ ಹಾಗೂ ವೈಜ್ಞಾನಿಕತೆಯಿಂದ ಕೂಡಿರಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ..

ಆದ್ದರಿಂದ ಸರಕಾರ ಹೊಸ ಜಾತಿ ಜನಗಣತಿಯನ್ನು ಮಾಡಬೇಕು. ಈಗಾಗಲೇ ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ನಾವು ಮನವಿ ಮಾಡಿದ್ದೇವೆ. ಪಕ್ಷಾತೀತವಾಗಿ ಈ ನಿರ್ಣಯ ಮಾಡಿದ್ದೇವೆ ಎಂದರು.

ಸಂಘಟಿತವಾಗಿ ಸರಕಾರಕ್ಕೆ ಒತ್ತಾಯ ಮಾಡಬೇಕಿದೆ

ಸಂಘಟಿತವಾಗಿ ಸರ್ಕಾರಕ್ಕೆ ಒತ್ತಾಯ ಮಾಡಬೇಕು. ಎಲ್ಲ ಜಾತಿಗಳನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಸಮುದಾಯವೆಂದರೆ ಅದು ವೀರಶೈವ ಲಿಂಗಾಯತ ಸಮುದಾಯ ಎಂದು ಸಚಿವ ಖಂಡ್ರೆ ಹೇಳಿದರು.

ನಮ್ಮದು ಹೇಡಿ ಸಮುದಾಯವಲ್ಲ

ಲಿಂಗಾಯತರು ಸುಧಾರಿಸಿದರೆ ರಾಜ್ಯ ಸುಧಾರಿಸುತ್ತದೆ. ಲಿಂಗಾಯತರು ಹಾಳಾದರೆ ರಾಜ್ಯ ಹಾಳಾಗುತ್ತದೆ. ನಮ್ಮದು ಹೇಡಿ ಸಮುದಾಯವಲ್ಲ. ಆರ್ಥಿಕವಾಗಿ ನಮ್ಮ ಸಮುದಾಯ ಸದೃಢರಾಗಬೇಕು. ನಾವು ಸದೃಢರಾದರೆ ಇತರ ಸಮುದಾಯವನ್ನು ಜತೆಗೆ ಕರೆದುಕೊಂಡು ಹೋಗಬಹುದು. ಇಂದು ನಮ್ಮ ಸಮಾಜದಲ್ಲಿ ಹಲವು ಕವಲು ದಾರಿಗಳಾಗಿವೆ.

ನಾವೆಲ್ಲರೂ ಶ್ರೀಮಂತರಿದ್ದೇವೆ. ಆದರೆ, ಒಗ್ಗಟ್ಟಿನ ಕೊರತೆ ಹೆಚ್ಚಾಗಿದೆ. ವೀರಶೈವ ಲಿಂಗಾಯತ ಒಂದೇ ಎಂಬ ಭಾವನೆ ಮೂಡಬೇಕು. ಅದು ಈಗ ಮೂಡುತ್ತಿದೆ. ಎಲ್ಲ ಜಾತಿ, ಮತ, ಪಂಥಗಳ ಮೀರಿ ಅಪ್ಪಿಕೊಳ್ಳುವ ಸಮುದಾಯ ನಮ್ಮದು ಎಂದು ಈಶ್ವರ ಖಂಡ್ರೆ ಹೇಳಿದರು.

1993ರಲ್ಲಿ ಓಬಿಸಿ ಪಟ್ಟಿಯಲ್ಲಿ ಬಿಟ್ಟು ಹೋಗಿದೆ.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ನಮ್ಮ ಸಮುದಾಯ 1993ರಲ್ಲಿ ಬಿಟ್ಟು ಹೋಗಿದೆ. ಅಭಿವೃದ್ಧಿ ಹೊಂದಿದ ಎಷ್ಟೋ ಸಮುದಾಯಗಳು ಒಬಿಸಿ ಪಟ್ಟಿಯಲ್ಲಿ ಇವೆ. ಆದರೆ, ನಮ್ಮ ಸಮುದಾಯ ಮಾತ್ರ ಇಲ್ಲ. ಹೀಗಾಗಿ ಒಬಿಸಿ ಪಟ್ಟಿಗೆ ಸಮುದಾಯವನ್ನು ಸೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಕೂಡ ನಮ್ಮ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕು. ಶೇಕಡಾ 27 ರಷ್ಟು ಒಬಿಸಿ ಪಟ್ಟಿಯಲ್ಲಿ ನಮ್ಮನ್ನು ಸೇರಿಸಬೇಕು ಎಂದು ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದರು.

Share.
Leave A Reply

Exit mobile version