
ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಮಲ ಪಡೆಯನ್ನು ನಿಧಾನವಾಗಿ ತನ್ನ ತೆಕ್ಕೆಗೆ ತೆದುಕೊಳ್ಳುತ್ತಿದ್ದಾರೆ. ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ನಂತರ ಮರಿರಾಜಾಹುಲಿಯೇ ಬಿಜೆಪಿಗೆ ಬಿಗ್‌ಬಾಸ್ ಎನ್ನುವ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ. ಹಾಗಾದ್ರೆ ವಿಜಯೆಂದ್ರ ಅವರನ್ನು ತಡೆಯುವವರು ಯಾರು ಇಲ್ವಾ? ಬಿಜೆಪಿ ರೆಬೆಲ್ ನಾಯಕರು ಫುಲ್ ಸೈಲೆಂಟ್ ಆಗಿದ್ಯಾಕೆ? ಈ ಕುರಿರು ಸ್ಟೋರಿ ಇಲ್ಲಿದೆ.
ಕಳೆದ ಒಂದೂವರೆಗೆ ವರ್ಷದಿಂದ ಬಿಜೆಪಿ ಮನೆಯೊಂದು ಮೂರು ಬಾಗಿಲು ಎನ್ನುವಂತಿತ್ತು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಆಯ್ಕೆಯಾಗಿ ಒಂದು ವರ್ಷ ಕಳೆದರೂ ಪಕ್ಷ ಸಂಘಟನೆಗಿಂತ ತಮ್ಮದೆ ಪಕ್ಷದ ನಾಯಕರ ವಿರುದ್ಧವೇ ಹೋರಾಟ ಮಾಡುವಂಥ ಸ್ಥಿತಿ ನಿರ್ಮಾಣವಾಗಿತ್ತು. ಒಂದೆಡೆ ಬಸನಗೌಡ ಪಾಟೀಲ್ ಯತ್ನಾಳ, ದಿನಬೆಳಗಾದರೆ ವಿಜಯೇಂದ್ರ ಹಾಗೂ ಅವರ ತಂದೆ ಯಡಿಯೂರಪ್ಪ ವಿರುದ್ಧ ಕೆಂಡಕಾರುತ್ತಿದ್ದರು. ಜತೆಗೆ ಹೊಂದಾಣಿಕೆ ರಾಜಕೀಯ, ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿದ್ದರು.
ಇವರಿಗೆ ಇನ್ನು ಹಲವು ನಾಯಕರು ಕೈಜೋಡಿಸಿದ್ದು ವಿಜಯೇಂದ್ರ ವಿರುದ್ಧ ಕತ್ತಿ ಮಸಿಯುತ್ತಿದ್ದರು. ಗೋಕಾಕ್ ಶಾಸಕ ರಮೇಶ ರಾಜಕಿಹೋಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಶಾಸಕ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ್‌ಸಿಂಹ, ಸಂಸದ ಡಾ.ಸುಧಾಕರ್ ಸೇರಿ ಹಲವು ನಾಯಕರು ವಿಜಯೇಂದ್ರ ವಿರುದ್ಧ ತೊಡೆ ತಟ್ಟಿದ್ದರು. ಇದರಿಂದ ವಿರೋಧ ಪಕ್ಷವಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುವ ಬದಲು ತಮ್ಮದೆ ಪಕ್ಷದ ನಾಯಕರ ವಿರುದ್ಧ ಹೋರಾಟ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಪಕ್ಷದ ಸ್ಥಿತಿ ಸಂಪೂರ್ಣ ಹಾಳಾಗಿತ್ತು.
ಉಡುಪಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದ ನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಫಿಲ್ಡ್ಗೆ ಎಂಟ್ರಿ ಕೊಟ್ಟಿದ್ದು ರೆಬೆಲ್ ನಾಯಕರಿಗೆ ಖಡಕ್ ಸೂಚನೆ ನೀಡಲು ಸೂಚಿಸಿದರು. ಹೀಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿಯ ಐವರು ರೆಬೆಲ್ ನಾಯಕರಿಗೆ ನೋಟೀಸ್ ನೀಡಿದ್ದರು. ಬಳಿಕ ಬಿಜಾಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಆರು ವರ್ಷಗಳ ಕಾಲ ಬಿಜೆಪಿಯಿಂದ ಉಚ್ಛಾಟನೆ ಮಾಡಿದ್ದರು. ಇದರಿಂದ ಬಹುತೇಕ ಬಂಡಾಯ ಥಂಡ ಹೊಡೆದಿದೆ.
ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆಯಾದ ನಂತರ ವಿಜಯೇಂದ್ರ ಫುಲ್ ಆಕ್ವಿವ್ ಆಗಿದ್ದು ರಾಜ್ಯ ಸರ್ಕಾರದ ವಿರುದ್ದ ತೊಡೆ ತಟ್ಟಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ವಿಜಯೇಂದ್ರ ನೇತೃತ್ವದಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದರು. ಅಲ್ಲದೆ ಬೆಲೆ ಏರಿಕೆ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಿ ದೊಡ್ಡ ಮಟ್ಟದ ಹೋರಾಟ ನಡೆಸಿದ್ದರು. ಜೊತೆಗೆ ಏಪ್ರಿಲ್ 7ರವರೆಗೆ ನಿರಂತರ ಹೋರಾಟ ಮಾಡಲು ಮುಂದಾಗಿದ್ದಾರೆ.ಒಟ್ಟಿನಲ್ಲಿ ವಿಜಯೇಂದ್ರ ಬಿಜೆಪಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು ಯಾಕ್ಟಿವ್‌ಆಗಿ ಕೆಲಸ ಮಾಡುತ್ತಿದ್ದಾರೆ.