ದಾವಣಗೆರೆ:

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಂಭೀರ ಗಾಯವಾಗಿದೆ. ಮಾರ್ಚ್‌ 14ರಂದು ಶುಕ್ರವಾರ ಸಂಜೆ ಈ ಘಟನೆ ನಡೆದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ.

ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅವರು ಬೆಂಗಳೂರಿನಿಂದ ಕರ್ನಾಟಕ ವಿಧಾನ ಮಂಡಲ ಅಧಿವೇಶನ ಮುಗಿಸಿಕೊಂಡು ಹಾವೇರಿ ಜಿಲ್ಲೆಯ ಕುಮಾರಪಟ್ಟಣಂ ಸಮೀಪದ ಸ್ವಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

ಗಾಯಗೊಂಡಿದ್ದ ಲಮಾಣಿ ಅವರನ್ನು  ದಾವಣಗೆರೆಯ S.S.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ, ಇದೀಗ ಏಕಾಏಕಿ ರುದ್ರಪ್ಪ ಲಮಾಣಿ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸೇರಿಸಲಾಗಿತ್ತು.

ಹೇಗಾಯಿತು ಘಟನೆ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜೆಜೆ ಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಲಮಾಣಿ ಅವರು ಎಳನೀರು ಕುಡಿಯಲು ಕಾರನ್ನು ಸೈಡಿಗೆ ಹಾಕಿ ಇಳಿದಿದ್ದಾರೆ. ಅದೇ ವೇಳೆ ವೇಗವಾಗಿ ಬಂದ ಬೈಕ್​ವೊಂದು ರುದ್ರಪ್ಪ ಲಮಾಣಿ ಅವರಿಗೆ ಗುದ್ದಿದೆ. ಪರಿಣಾಮ ಅವರು ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಹಣೆ, ಹಲ್ಲು, ಗದ್ದ ಮತ್ತು ಬಲ ಮೊಣಕಾಲಿಗೆ ಗಾಯವಾಗಿದ್ದು, ಕೂಡಲೇ ಅವರನ್ನು ಹಿರಿಯೂರಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ದಾವಣಗೆರೆಯ ಎಸ್​ಎಸ್​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.

ಎಸ್​ಎಸ್​ ಆಸ್ಪತ್ರೆಯಲ್ಲಿ ರುದ್ರಪ್ಪ ಲಮಾಣಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸಿಟಿ ಸ್ಕ್ಯಾನ್ ಸೇರಿದಂತೆ ಇತರೆ ಚಿಕಿತ್ಸೆ ನೀಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿದುಬಂದಿತ್ತು. ಆದ್ರೆ, ಇದೀಗ ಇಂದು (ಮಾರ್ಚ್ 15) ಬೆಳಗ್ಗೆ ಏಕಾಏಕಿ ದಾವಣಗೆರೆ ಎಸ್​​ಎಸ್​ ಆಸ್ಪತ್ರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.ಸದ್ಯ ರುದ್ರಪ್ಪ ಲಮಾಣಿ ಅವರ ಆರೋಗ್ಯದ ಬಗ್ಗೆ ವೈದ್ಯರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

 

Share.
Leave A Reply

Exit mobile version