ಸುಮಖ್  ಎಸ್ ಪವಾರ್, ಚನ್ನಗಿರಿ

ಬಡವರಿಗೆ  ಕಡಿಮೆ ಹಣದಲ್ಲಿ  ಆಹಾರ ಪದಾರ್ಥಗಳನ್ನು ನೀಡುವಂತಹ  ಕಾಂಗ್ರೆಸ್  ಸರಕಾರದ  ಮಹಾತ್ವಾಕಾಂಕ್ಷಿ  ಯೋಜನೆಗಳಲ್ಲಿ  ಒಂದಾದ  ಇಂದಿರಾ ಕ್ಯಾಂಟಿನ್ ಸೋಮವಾರ ಗ್ರಾಹಕರಿಗೆ ಆಹಾರ ಪದಾರ್ಥಗಳನ್ನು ನೀಡದೇ ಬಾಗಿಲು ಹಾಕಿತ್ತು. ಇದರಿಂದ ಬಡ ವರ್ಗದವರಿಗೆ ತೊಂದರೆಯಾಗಿತ್ತು. ಇಂದಿರಾ ಕ್ಯಾಂಟಿನ್ ಬಾಗಿಲು ಹಾಕಿದ್ದ ಕಾರಣ, ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನ ಊಟವಿಲ್ಲದೇ  ಬಡ ಕೂಲಿ ಕಾರ್ಮಿಕರು  ಹೆಚ್ಚು ಹಣವನ್ನು ನೀಡಿ  ಹೋಟೆಲ್‌ಗಳಲ್ಲಿ  ಊಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. . 

ಹೌದು…ಈ ಹಿಂದೆ 2017 ರ ಸಾಲಿನಲ್ಲಿ ಕಾಂಗ್ರೆಸ್ ಸರಕಾರವು ಆಡಳಿತದಲ್ಲಿ ಇದ್ದಂತಹ ಸಂದರ್ಭದಲ್ಲಿ  ಬಡಕೂಲಿಕಾರ್ಮಿಕರಿಗೆ  ಕಡಿಮೆ  ದರದಲ್ಲಿ  ತಮಿಳುನಾಡಿನ ಅಮ್ಮ ಕ್ಯಾಂಟಿನ್ ಮಾದರಿಯಲ್ಲಿ  ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿ ಊಟ  ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳು ವ ಮೂಲಕ  ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ  ಇಂದಿರಾ ಕ್ಯಾಂಟಿನ್‌ಗಳನ್ನು ತೆರೆಯಲಾಗಿದ್ದು, ಸದ್ಯ ಯಾವುದಕ್ಕೂ ಉಪಯೋಗವಿಲ್ಲದಂತಾಗಿದೆ.

ಪ್ರಾರಂಭದಲ್ಲಿ  ಹುರುಪಿನಿಂದ  ಟೆಂಡರ್ ಪಡೆದಂತಹ ಟೆಂಡರ್‌ದಾರರು ಆಹಾರ ಪದಾರ್ಥಗಳನ್ನು ನೀಡುವ ಮೂಲಕ  ಕೂಲಿ ಕಾರ್ಮಿಕರಿಗೆ  ತಿಂಡಿ ಊಟ ನೀಡಲು  ಪ್ರಾರಂಭಿಸಿದರು. ಇದರಿಂದ ಕೂಲಿಗಾಗಿ ತೆರಳುತ್ತಿದ್ದ  ಕಾರ್ಮಿಕರು ಮತ್ತು ಕಾಲೇಜಿಗೆ  ಬರುವಂತಹ   ವಿದ್ಯಾರ್ಥಿಗಳು ಮತ್ತು ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುವಂತಹ  ರೋಗಿಗಳು  ಸೇರಿದಂತೆ  ಸಾಕಷ್ಟು  ಜನರು  ಇಂದಿರಾಕ್ಯಾಂಟಿನ್‌ನ  ಊಟ  ತಿಂಡಿಗಳಿಗೆ  ಹೊಂದಿಕೊಂಡಿದೆ. 

ಚನ್ನಗಿರಿ ಪಟ್ಟಣದ ಇಂದಿರಾ ಕ್ಯಾಂಟಿನ್‌ನಲ್ಲಿ  ಮುಂಜಾನೆ  ಸುಮಾರು  400 ಕ್ಕೂ ಹೆಚ್ಚು  ಜನ 5 ರೂ.ಗಳನ್ನು ನೀಡಿ ತಿಂಡಿ ಮದ್ಯಾಹ್ನ 300 ಕ್ಕೂ ಹೆಚ್ಚು  ಜನ 10 ರೂಗಳನ್ನು  ನೀಡಿ ಊಟ ಮಾಡಲು ಮುಂದಾದರು.  ಆದರೆ  ಕೆಲ ವರ್ಷಗಳಲ್ಲಿ  ಗುತ್ತಿಗೆ ಪಡೆದ  ಗುತ್ತಿಗೆದಾರರು  ಸೂಕ್ತ ನಿರ್ವಹಣೆ ಮಾಡದೇ  ಬೇರೆಯವರಿಗೆ  ವಹಿಸಿ ಹೋದರು. ಆವರು ನಿರಂತರವಾಗಿ ನಡೆಸಿಕೊಂಡು ಬಂದ ನಂತರ  ಸಾಕಷ್ಟು  ನಿರ್ವಹಣೆ ಮಾಡುವವರು ಬದಲಾವಣೆಯಾದರು. ಆದರೆ  ಕಳೆದ 7 ತಿಂಗಳಿನಿಂದ ಚನ್ನಗಿರಿಯವರೇ  ವಹಿಸಿಕೊಂಡು ಉತ್ತಮ ಅಹಾರ  ತಿಂಡಿ ನೀಡುತ್ತಿದ್ದರು.  

ಸರಕಾರದಿಂದ  ತಿಂಡಿಗೆ 300 ಟೋಕನ್,  ಮದ್ಯಾಹ್ನದ ಊಟಕ್ಕೆ 300 ಟೋಕನ್, ರಾತ್ರಿ ಊಟಕ್ಕೆ 300  ಟೋಕನ್‌ಗಳಿದ್ದು  ಸರಕಾರದಿಂದ  ಊಟ ತಿಂಡಿ ಸೇರಿ 54 ರೂ.ಗಳನ್ನು ನಿಗದಿಪಡಿಸಲಾಗಿತ್ತು. ಆದರೆ ಟೆಂಡರ್‌ದಾರ  ಊಟ  ತಿಂಡಿ ಸೇರಿ 17  ರೂ.ಗಳಿಗೆ  ಕರೆದಿದ್ದಾರೆ.   ಮತ್ತು  ಜನರಿಗೆ  ಉತ್ತಮವಾದ ಶುದ್ದ ನೀರನ್ನು ನೀಡಬೇಕಾಗಿದ್ದು ಹಣ ನೀಡಿ  ನೀರನ್ನು ಖರೀದಿ ಮಾಡಬೇಕಿತ್ತು.  ಆದರೆ  ನಿರ್ವಹಣೆ  ಮಾಡುವ  ಹಣವನ್ನು  ಸರಿಯಾದ  ಸಮಯಕ್ಕೆ ನೀಡಲಾಗಿಲ್ಲ. ಇದರಿಂದ ಟೆಂಡರ್ ದಾರ  ತೀವ್ರ ನಷ್ಟ ಅನುಭವಿಸಬೇಕಾಗಿತ್ತು. ಮತ್ತು ಬಿಲ್ ಸರಿಯಾದ  ರೀತಿಯಲ್ಲಿ  ಪಾವತಿಯಾಗದ  ಕಾರಣ ಕಳೆದ 4 ದಿನಗಳಿಂದ ಇಂದಿರಾ ಕ್ಯಾಂಟಿನ್ ಮುಚ್ಚಿರುವುದಾಗಿ ಮೂಲಗಳು ತಿಳಿಸಿವೆ. 

ಪುರಸಭೆ ಉಸ್ತುವಾರಿ

ಇಂದಿರಾ ಕ್ಯಾಂಟಿನ್ ಉಸ್ತುವಾರಿಯನ್ನು ಪುರಸಭೆ ನಿರ್ವಹಣೆ ಮಾಡುತ್ತಿದ್ದು  ಸರಿಯಾದ  ರೀತಿಯಲ್ಲಿ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡದ ಕಾರಣ ಪುರಸಭೆಯ  ಹಿರಿಯ ಆರೋಗ್ಯಾಧಿಕಾರಿ  ಶಿವರುದ್ರಪ್ಪ ಪುರಸಭೆಗೆ ನೋಟಿಸ್‌ನ್ನು  ಸಹ ನೀಡಿದ್ದಾರೆ.  

ಸಾಮಾನ್ಯ ಜನರಿಗೆ ತೊಂದರೆ

ನಾವು  ಪ್ರತಿದಿನ ಕೆಸಕ್ಕೆ  ಹೋಗುವ  ಸಂದರ್ಭದಲ್ಲಿ  ಇಂದಿರಾ ಕ್ಯಾಂಟಿನ್‌ನಲ್ಲಿ  5  ರೂ. ನೀಡಿ ತಿಂಡಿ ತಿಂದು ಹೋಗುತ್ತಿದ್ದೆವು. ಆದರೆ  ಬಾಗಿಲು ಹಾಕಿರುವ ಕಾರಣ  ಹೋಟೆಲ್‌ಗಳಲ್ಲಿ 50  ರಿಂದ  60  ರೂಗಳನ್ನು ನೀಡಬೇಕಾಗಿದೆ ಎಂದು ಕಾರ್ಮಿಕ ಇಸ್ಮಾಯಿಲ್‌ಸಾಬ್ ಬೇಸರ ವ್ಯಕ್ತಪಡಿಸುತ್ತಾರೆ.

ತಾಲೂಕು ಕಚೇರಿಯ  ಕೆಲಸಗಳಿಗೆ  ಬರುವ ಸಾಕಷ್ಟು  ಜನರು ಮದ್ಯಾಹ್ನದ  ಊಟವನ್ನು ಇಲ್ಲಿ ಮಾಡುತ್ತಿದ್ದರು. ಆದರೆ  ಇದನ್ನು ಸಹ  ಮುಚ್ಚಿರುವುದರಿಂದ ನೂರು ರೂಪಾಯಿಗಳನ್ನು ನೀಡಿ  ಊಟ ಮಾಡುವಂತಾಗಿದೆ  ಎಂದು ನಲ್ಲೂರು ಮಾಜಿ ತಾ.ಪಂ. ಸದಸ್ಯ ಊಸ್ಮಾನ್ ಷರೀಫ್ ಹೇಳುತ್ತಾರೆ. ಒಟ್ಟಾರೆ ಸರಕಾರದ  ಮಹತ್ವಾಕಾಂಕ್ಷಿ ಯೋಜನೆಯೊಂದು  ಕಾಂಗ್ರೇಸ್  ಸರಕಾರದ  ಅವಧಿಯಲ್ಲಿಯೇ  ಬಾಗಿಲು ಹಾಕುವಂತಾಗಿದೆ

 

Share.
Leave A Reply

Exit mobile version