ದಾವಣಗೆರೆ : ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅವರದೇ ಪಕ್ಷದ ಇನ್ನೊಂದು ಟೀಂ ಹೆಜ್ಜೆಹೆಜ್ಜೆಗೂ ಸವಾಲು ಒಡ್ಡುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ ನಂತರ ಇನ್ನು ಕೆಲವರು ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಬಣಗಳ ತಿಕ್ಕಾಟದಿಂದ ಕೇಂದ್ರ ನಾಯಕರು ಗರಂ ಆಗಿದ್ದಾರೆ. ಬಣರಾಜಕೀಯ ತಣಿಸಲು ಆರ್‌ಎಸ್‌ಎಸ್ ನೇತೃತ್ವದಲ್ಲಿ ಸಂದಾನ ಸಭೆ ನಡೆಸಿದರೂ ಭಿನ್ನಮತ ಕಡಿಮೆಯಾಗಿಲ್ಲ ಎನ್ನಲಾಗಿದೆ. ಹಾಗಾದ್ರೆ ಸಭೆಯಲ್ಲಿ ನಡೆದಿದ್ದೇನು? ಯತ್ನಾಳ ಬಣದಲ್ಲಿ ಗುರುತಿಸಿಕೊಂಡವರು ಯಾರು? ಈ  ಸ್ಟೋರಿ ನೋಡಿ.

ರಾಜ್ಯ ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ಧ ಬೆಂಗಳೂರಿನಿAದ ಮೈಸೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಬಿಜೆಪಿಗೆ ಬಲ ತಂದುಕೊಟ್ಟಿತ್ತು. ಪಾದಯಾತ್ರೆ ಯಶಸ್ವಿಯಾದರೆ ಇದರ ಕ್ರೆಡಿಟ್ ವಿಜಯೇಂದ್ರಗೆ ಹೋಗುತ್ತೆ ಎನ್ನುವುದನ್ನು ಅರಿತ ವಿರೋಧ ಬಣದ ನಾಯಕ ಬಸನಗೌಡ ಪಾಟೀಲ್ ಯತ್ನಾಳ ಪಾದಯಾತ್ರೆಯಿಂದ ದೂರು ಉಳಿದಿದ್ದರು. ಈಗ ವಾಲ್ಮೀಕಿ ಹಗರಣ ಖಂಡಿಸಿ ಬಿಜೆಪಿ ಪಾದಯಾತ್ರೆ ಮಾಡಲು ಮುಂದಾಗಿದ್ದು ಇದಕ್ಕೆ ಯತ್ನಾಳ ನೇತೃತ್ವವಹಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಯತ್ನಾಳ ಬೆಂಬಲಕ್ಕೆ ಬಿಜೆಪಿ ಭಿನ್ನ ನಾಯಕರು ಧ್ವನಿಗೂಡಿಸಿದ್ದಾರೆ.

ಆರಂಭದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಲ್ಲಿ ಏಕಾಂಗಿಯಾಗಿ ಸಮರ ಸಾರುತ್ತಿದ್ದರು. ವಿರೋಧಿ ಪಾಳಯದ ಮೇಲೆ ನಿರಂತರ ಆರೋಪಗಳನ್ನು ಮಾಡುತ್ತಿದ್ದರು. ಬಳಿಕ ಅವರ ತಂಡಕ್ಕೆ ರಮೇಶ್ ಜಾರಕಿಹೊಳಿ ಸೇರ್ಪಡೆಯಾದರು. ಇದರ ನಡುವೆ ಯತ್ನಾಳ್‌ಗೆ ಬಿಜೆಪಿ ಕೆಲ ನಾಯಕರು ಸಾಥ್ ನೀಡುತ್ತಿದ್ದು ವಿರೋಧಿಬಣ ಸ್ಟ್ರಾಂಗ್ಆಗುತ್ತಿದೆ. ಬೆಂಗಳೂರಿನಲ್ಲಿ ಭಿನ್ನರ ಸಭೆ ನಡೆಸಿದರೂ ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ ಸಿಂಹ ಯತ್ನಾಳ ತಂಡಕ್ಕೆ ಬೆಂಬಲ ನೀಡಿದ್ದು ಕಂಡುಬಂದಿತು.

ಇದೀಗ ಯತ್ನಾಳ್ ತಂಡ ಮತ್ತಷ್ಟು ಬಲಗೊಳ್ಳುತ್ತಿದೆ. ಬಿಜೆಪಿ ಶಾಸರ ಬಿಪಿ ಹರೀಶ್ ಯತ್ನಾಳ್ ರೀತಿಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಮಾತನಾಡಲು ಶುರುಮಾಡಿದ್ದಾರೆ. ಬಿವೈ ವಿಜಯೇಂದ್ರ ಶಿಕಾರಿಪುರದಲ್ಲಿ ಹೊಂದಾಣಿಕೆ ರಾಜಕಾರಣದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ದಾವಣಗೆರೆಯಲ್ಲಿ ಬಿಜೆಪಿ ಸೋಲಿಗೂ ಹೊಂದಾಣಿಕೆ ರಾಜಕಾರಣ ಕಾರಣ ಎಂದು ಆರೋಪಿಸಿದ್ದಾರೆ.

ವಾಲ್ಮೀಕಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ದೂರನ್ನು ನೀಡಿದೆ. ಈ ನಿಯೋಗದಲ್ಲಿ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿ.ಪಿ. ಹರೀಶ್, ಮಾಜಿ ಶಾಸಕ ಸೋಮಲಿಂಗಪ್ಪ ,ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ಸೇರಿದಂತೆ ಕೆಲ ನಾಯಕರು ಕಾಣಿಸಿಕೊಂಡಿದ್ದರು.ಈ ಮೂಲಕ ವಿಜಯೇಂದ್ರ ಪಾದಯಾತ್ರೆಗೆ ಕೌಂಟರ್ ಆಗಿ ನಡೆಯಲಿರುವ ಬಳ್ಳಾರಿ ಪಾದಯಾತ್ರೆಗೆ ಪೂರ್ವ ಸಿದ್ಧತೆಯನ್ನು ಯತ್ನಾಳ್ ನಡೆಸುತ್ತಿದ್ದಾರೆ. ಇದೀಗ ಯತ್ನಾಳ್ ಜೊತೆಗೆ ಗುರುತಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರ ಪರಿಣಾಮ ಏನೆಲ್ಲಾ ಆಗಲಿದೆ ಎಂಬುವುದು ಕುತೂಹಲ ಮೂಡಿಸಿದೆ.ಒಟ್ಟಿನಲ್ಲಿ ವಿಜಯೇಂದ್ರಗೆ ಹೆಜ್ಜೆಹೆಜ್ಜೆಗೂ ಸ್ವಪಕ್ಷದ ನಾಯಕರೇ ಮುಳುವಾಗುತ್ತಿರುವುದು ಸುಳ್ಳಲ್ಲ.

Share.
Leave A Reply

Exit mobile version