ಬೆಂಗಳೂರು; ರಾಜ್ಯ ಕಂಡ ಮುತ್ಸದ್ದಿ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ (93) ಚಿರ ನಿದ್ರೆಗೆ ಜಾರಿದ್ದು, ಗಣ್ಯಾತೀತರು, ರಾಜಕೀಯ ಮುತ್ಸದ್ದಿಗಳು, ನಟ, ನಟಿಯರು ಸೇರಿದಂತೆ ಸಂಬಂಧಿಕರು ಸದಾಶಿವನಗರದ ನಿವಾಸದಲ್ಲಿ ಮಂಗಳವಾರ ಅಂತಿಮ ದರ್ಶನ ಮಾಡಿದರು.

ಮಂಗಳವಾರ ನಸುಕಿನ 2.30ರ ವೇಳೆಗೆ ಕೃಷ್ಣ ಅವರ ಆರೋಗ್ಯದಲ್ಲಿ ಏರುಪೇರಾಗಿತು ಉಸಿರಾಟದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ವೈದ್ಯರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಕೂಡಲೇ ವೈದ್ಯರು ಮನೆಗೆ ಆಗಮಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ 3.30ಕ್ಕೆ ವೈದ್ಯರು ಕೃಷ್ಣ ಕೊನೆಯುಸಿರೆಳೆದಿದ್ದಾರೆ ಎಂದು ಘೋಷಿಸಿದರು.

ರಾತ್ರಿಯೇ ಅಸ್ವಸ್ಥರಾಗಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮನೆಯಿಂದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲು ಕುಟುಂಬಸ್ಥರು ನಿರ್ಧಾರ ಮಾಡಿದ್ದರು. ಆದರೆ, ಅಷ್ಟರೊಳಗೆ ಎಸ್.ಎಂ.ಕೃಷ್ಣ ಇಹ ಲೋಕ ತ್ಯಜಿಸಿದ್ದರು.

ಸದಾ ನಗುಮುಖದಿಂದ ಇದ್ದ ಎಸ್.ಎಂ.ಕೃಷ್ಣ, ಬಾಕ್ಸ್ನಲ್ಲಿ ಶಾಂತವಾಗಿ ಮಲಗಿದ್ದರು. ಅವರು ವಿಧಿವಶವಾಗಿರುವ ಸುದ್ದಿ ವಾಟ್ಸ್ಅಫ್, ಫೇಸ್‌ಬುಕ್ ಸೇರಿದಂತೆ ಮಾಧ್ಯಮದಲ್ಲಿ ಕ್ಷಣಾರ್ಧದಲ್ಲಿಯೇ ಹಬ್ಬಿತ್ತು. ಸ್ವತಃ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಕ್ರಮ ಕೈಗೊಂಡರು. ಮಂಡ್ಯ, ಮೈಸೂರು ಸೇರಿದಂತೆ ರಾಜ್ಯಾದ್ಯಂತ ಅವರ ಅಭಿಮಾನಿಗಳು ಮನೆ ಬಳಿ ತಂಡೋಪತAಡವಾಗಿ ಬೃಹತ್ ಸಂಖ್ಯೆಯಲ್ಲಿ ಬಂದು ಹಾರ ಹಾಕಿ ದರ್ಶನ ಪಡೆದರು.

ಶ್ವಾಸಕೋಶದಿಂದ ಬಳಲುತ್ತಿದ್ದ ಕೃಷ್ಣ

ಮಾಜಿ ರಾಜ್ಯಪಾಲ ಎಸ್.ಎಂ.ಕೃಷ್ಣ ಕಳೆದ 6 ತಿಂಗಳಿನಿAದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು. ಇತ್ತೀಚೆಗೆ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಸೋಮನಹಳ್ಳಿ ಗ್ರಾಮದವರಾದ ಇವರು ಎಸ್.ಸಿ.ಮಲ್ಲಯ್ಯ ಮತ್ತು ತಾಯಮ್ಮ ದಂಪತಿಯ ಪುತ್ರನಾಗಿ ಮೇ 1, 1932ರಲ್ಲಿ ಜನಿಸಿದ್ದರು. 2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. ವಿಧಾನಸಭೆ ಸ್ಪೀಕರ್. ಉಪಮುಖ್ಯಮಂತ್ರಿ, ವಿದೇಶಾಂಗ ವ್ಯವಹಾರಗಳ ಸಚಿವ ಹಾಗೂ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ನಟ, ನಟಿ, ಸಾಹಿತಿಗಳ ಆಗಮನ

ಬೆಳಗ್ಗೆ ನಟಿ ರಮ್ಯ, ಶಿವರಾಜ್‌ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್, ಸುಮಲತಾ, ಬರಗೂರು ರಾಮಚಂದ್ರಪ್ಪ, ಸೇರಿದಂತೆ ಹಲವು ನಟ, ನಟಿಯರು ಎಸ್.ಎಂ.ಕೃಷ್ಣರಿಗೆ ನಮಸ್ಕರಿಸಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೊರಟರು. ನಂತರ ಮಾಜಿ ಸಿಎಂ ಜತೆ ಕಳೆದ ಕ್ಷಣಗಳನ್ನು ನೆನಪು ಮಾಡಿಕೊಂಡರು.

ಸದಾಶಿವನಗರ ಮನೆ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್

ಎಸ್. ಎಂ. ಕೃಷ್ಣ ನಿವಾಸದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆರಂಭದಲ್ಲಿಯೇ ನಾಕಾಬಂಧಿಯನ್ನು ಹಾಕಲಾಗಿತ್ತು. ರಾಜಕಾರಣಿಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ನಿವಾಸದ ಬಳಿ ಪೊಲೀಸರೇ ತುಂಬಿದ್ದರು. ಇನ್ನು ಆಂಬ್ಯುಲೇನ್ಸ್ ಸಹ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು. ಲಘು ಉಪಹಾರ ಕೊಡ ನೀಡಲಾಗಿತ್ತು.

ನಾಲ್ಕು ತಲೆಮಾರಿನ ರಾಜಕಾರಣದ ಕೊಂಡಿ.

ನಾಲ್ಕು ತಲೆಮಾರಿನ ರಾಜಕಾರಣದ ಕೊಂಡಿ ಕೇಂದ್ರ ಸಚಿವ ಸಂಪುಟದಲ್ಲಿ ವಿವಿಧ ಹುದ್ದೆಗಳ ಜೊತೆಗೆ ಮಹತ್ವದ ವಿದೇಶಾಂಗ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿ ಮಹಾರಾಷ್ಟ್ರದ ರಾಜ್ಯಪಾಲರು ಆಗಿ ಎಸ್.ಎಂ.ಕೃಷ್ಣ ಸೇವೆ ಸಲ್ಲಿಸಿದ್ದರು. ಕೃಷ್ಣ ಅವರು ನಾಲ್ಕು ತಲೆಮಾರಿನ ರಾಜಕಾರಣದ ಬಹುದೊಡ್ಡ ಕೊಂಡಿಯಾಗಿದ್ದರು.

ಆರೋಗ್ಯಕರ ಮನಸ್ಸು ಕ್ರಿಯಾಶೀಲತೆಯ ಸಂಕೇತ ಎನ್ನುವ ನಿಟ್ಟಿನಲ್ಲಿ ತಮ್ಮ ಬದುಕಿನ ಕೊನೆಯ ಉಸಿರಿರುವವರೆಗೂ ಸಂಸ್ಕಾರ ಹಾಗೂ ಸುಸಂಸ್ಕೃತ ನಡವಳಿಕೆ ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ತಮ್ಮ ಇಡೀ ರಾಜಕಾರಣದ ಜೀವನದಲ್ಲಿ ಕಪ್ಪು ಕಲೆಯನ್ನು ಎಂದೂ ಅಂಟಿಸಿಕೊಳ್ಳದ ಕೃಷ್ಣ ಪರಿಶುಭ್ರತೆಗೆ ಮಾದರಿಯಾದವರು. ಕರ್ನಾಟಕದ ರಾಜಕಾರಣದಲ್ಲಿ ಕೃಷ್ಣರಿಗೆ ಕೃಷ್ಣರೇ ಸಾಟಿ ಅವರಿಲ್ಲದ ಕರುನಾಡು ನೆನೆಸಿಕೊಳ್ಳುವುದು ಅತ್ಯಂತ ಕಷ್ಟಕರ, ನಮ್ಮಂತ ಯುವ ಪೀಳಿಗೆಯ ರಾಜಕಾರಣಿಗಳಿಗೆ ಅವರು ಆದರ್ಶದ ದಾರಿದೀಪ, ಅವರು ಇಹಲೋಕವನ್ನು ತ್ಯಜಿಸಿದರೂ ಅವರ ನಡೆ-ನುಡಿ ನಿತ್ಯವೂ ಜೀವಂತವಾಗಿ ರಾಜಕಾರಣದ ಆಗಸದಲ್ಲಿ ಮಿನುಗುತ್ತಿರುತ್ತದೆ ಎಂದು ಹಲವರು ಮಾತನಾಡಿಕೊಂಡರು.

ಮಂಡ್ಯದಿಂದ ದೆಹಲಿ ತನಕ ರಾಜಕೀಯ.

ಮಾಜಿ ಸಿಎಂ ಎಸ್. ಎಂ. ಕೃಷ್ಣ ಮಂಡ್ಯದಿಂದ ದೆಹಲಿ ತನಕ ರಾಜಕೀಯ ಮಾಡಿದವರು. ರಾಜ್ಯ ಮತ್ತು ರಾಷ್ಟ್ರ ರಾಜಕೀಯದಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದ ಅವರು ಯಾವುದೇ ಒತ್ತಡವನ್ನು ತೋರಿಸಿಕೊಳ್ಳದೇ ಸದಾ ನಗುಮೊಗದಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಬೆಂಗಳೂರು ನಗರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ. 1962ರಲ್ಲಿ ಅವರು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಿಂದ ಚುನಾವಣಾ ರಾಜಕೀಯವನ್ನು ಆರಂಭಿಸಿದರು. ಮೊದಲ ಚುನಾವಣೆಯಲ್ಲಿಯೇ ಗೆದ್ದಿದ್ದರು. 1967ರ ಚುನಾವಣೆಯಲ್ಲಿ ಸೋಲು ಕಂಡರು. 1968ರ ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ

ಸಂಸತ್ ಸದಸ್ಯರಾದರು.

1971ರಲ್ಲಿ ಸಂಸದರಾಗಿದ್ದ ಅವರನ್ನು ಡಿ. ದೇವರಾಜ ಅರಸು ಅವರು ಎಂಎಲ್‌ಸಿ ಮಾಡಿ, ಸಚಿವ ಸ್ಥಾನ ನೀಡಿದರು. ಆದ್ದರಿಂದ ಎಸ್. ಎಂ. ಕೃಷ್ಣ ರಾಜ್ಯ ರಾಜಕೀಯಕ್ಕೆ ವಾಪಸ್ ಆದರು. 1989ರಲ್ಲಿ ಮದ್ದೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದ ಎಸ್. ಎಂ. ಕೃಷ್ಣ ಚುನಾವಣೆಯಲ್ಲಿ ಗೆದ್ದರು. ಉಪ ಮುಖ್ಯಮಂತ್ರಿಗಳಾಗಿ ಮತ್ತು ಕರ್ನಾಟಕ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯ ನಿರ್ವಹಣೆ ಮಾಡಿದರು. 1994ರ ಚುನಾವಣೆಯಲ್ಲಿ ಸೋಲು ಕಂಡರು.1996ರಲ್ಲಿ ಎಸ್. ಎಂ. ಕೃಷ್ಣ ರಾಜ್ಯಸಭಾ ಸದಸ್ಯರಾದರು. 1999ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ರಾಜ್ಯ ರಾಜಕೀಯಕ್ಕೆ ಬಂದರು. ಎಸ್. ಎಂ. ಕೃಷ್ಣ ನೇತೃತ್ವದಲ್ಲಿಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿತು. ಪಕ್ಷ 132 ಸೀಟುಗಳಲ್ಲಿ ಜಯಗಳಿಸಿತು. ಕಾಂಗ್ರಸ್ ಪಕ್ಷ ಎಸ್. ಎಂ. ಕೃಷ್ಣ ಅವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿತು.

ಮದ್ದೂರಿನಿಂದ ಸಿಎಂ.

ಈ ಚುನಾವಣೆಯಲ್ಲಿ ಎಸ್. ಎಂ. ಕೃಷ್ಣ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಅವರು 56,907 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಎದುರಾಳಿಯಾಗಿದ್ದ ಜೆಡಿಎಸ್‌ನ ಎಂ. ಮಹೇಶ್ ಚಂದ್ 27,448 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕರ್ನಾಟಕ ರಾಜ್ಯ ರೈತ ಸಂಘದ ವಿ. ಅಶೋಕ 11,775 ಮತಗಳನ್ನು ಪಡೆದಿದ್ದರು. 1999ರಲ್ಲಿ ಸ್ಪಷ್ಟ ಬಹುಮತ ಪಡೆದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಅಕ್ಟೋಬರ್‌ನಲ್ಲಿ ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡರು. ಆದರೆ ಅಧಿಕಾರಾವಧಿ ಪೂರ್ಣಗೊಳ್ಳಲು 5 ತಿಂಗಳು ಬಾಕಿ ಇರುವಾಗ ಲೋಕಸಭೆ ಚುನಾವಣೆ ಎದುರಾಯಿತು. ಆದ್ದರಿಂದ ವಿಧಾನಸಭೆ ಚುನಾವಣೆಯೂ ಒಟ್ಟಿಗೆ ನಡೆಯಲಿ ಎಂದು ಎಸ್. ಎಂ. ಕೃಷ್ಣ ಸರ್ಕಾರ ವಿಸರ್ಜನೆ ಮಾಡಿದರು. ಆದ್ದರಿಂದ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಲಿಲ್ಲ. ಒಟ್ಟಾರೆ ರಾಜಕೀಯ ಅಜಾತ ಶತ್ರು ಇನ್ನಿಲ್ಲವಾಗಿದ್ದು, ಕರುನಾಡಿಗೆ ಒಬ್ಬ ಮುತ್ಸದ್ದಿ ರಾಜಕಾರಣಿಯನ್ನು ಕಳೆದುಕೊಂಡಿತಾಗಿದೆ.

Share.
Leave A Reply

Exit mobile version