ನಂದೀಶ್ ಭದ್ರಾವತಿ ದಾವಣಗೆರೆ
ಎಗ್ ಲೆಸ್ ಕೇಕ್,ಚಕ್ಕುಲಿ,ನಿಪ್ಪಟ್ಟು, ಬಿಸಿಬೇಳೆಬಾತ್ ಇದೇನೂ ಊಟದ ಮೆನು ಅನ್ಕೊಂಡ್ರಾ…ಅಲ್ಲ ಇವೆಲ್ಲಾ ಸಿರಿಧಾನ್ಯದಿಂದ ತಯಾರಿಸಿದ ಖಾದ್ಯಗಳು.
ಹೌದು…ದಾವಣಗೆರೆ ಕೃಷಿ ಇಲಾಖೆ ಆವರಣದಲ್ಲಿ ಜಿಲ್ಲಾ ಮಟ್ಟದಲ್ಲಿ ಸಿರಿ ಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು 63 ಸ್ಪರ್ಧಿಗಳು ಖಾದ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯನ್ನು ಎರಡು ವಿಭಾಗದಲ್ಲಿ ವಿಂಗಡಿಸಲಾಗಿತ್ತು ಸಿರಿಧಾನ್ಯಗಳಿಂದ ಸಿಹಿ ಖಾದ್ಯ ಹಾಗೂ ಖಾರದ ಖಾದ್ಯ ಸ್ಪರ್ಧೆ ನಡೆಸಲಾಗಿತ್ತು.ಈ ಸಿರಿಧಾನ್ಯ ಪಾಕಮೇಳ ಜನಾಕರ್ಷಕವಾಗಿತ್ತು.
ಬಾಯಲ್ಲಿ ನೀರೂರಿಸಿದ ಸಿರಿಧಾನ್ಯ ಖಾದ್ಯ
ಧಾನ್ಯ ಬಳಸಿ ತಯಾರಿಸಿದ ಖೀಲ್ಸ, ಖರ್ಚಿಕಾಯಿ, ಲಡ್ಡು, ಬಿಸ್ಕೇಟ್, ಕೇಕ್, ಹೋಳಿಗೆ, ಚಕ್ಕುಲಿ, ಪುಲಾವ್, ಬಿಸಿ ಬೇಳೆಬಾತ್, ರಾಗಿ ಸೂಪ್, ಕೋಡುಬಳೆ, ನಿಪ್ಪಟ್ಟುಗಳು ಬಾಯಲ್ಲಿ ನೀರೂರಿಸಿದವು.
ಪ್ರತಿ ಸ್ಪರ್ಧಿಗೆ ತಲಾ ಒಂದು ಬಗೆಯ ಸಿಹಿ ಹಾಗೂ ಖಾರವಾದ (ಸಸ್ಯಹಾರಿ) ಖಾದ್ಯ ತಯಾರಿಸಲು ಅವಕಾಶ ಕಲ್ಪಿಸಲಾಗಿತ್ತು. ದಾವಣಗೆರೆಯ ಸಿಹಿ ಖಾದ್ಯ ಗುಳ್ಳಡಿಕೆ ಉಂಡೆ ಹಾಗೂ ಸಾವೆ ಕಾರ್ನ್‌ಫ್ಲೆಕ್ ಹಾಗೂ ರಾಗಿ ಸೂಪ್ ಗಮನ ಸೆಳೆದವು.
ಸ್ಪರ್ಧೆಯಲ್ಲಿ ಗೆದ್ದವರು
ಸಿಹಿ ತಿನಿಸುಗಳಲ್ಲಿ ಹಾರಕದ ಗುಳ್ಳಡಿಕೆ ಉಂಡೆ ತಯಾರಿಸಿದ ದಾವಣಗೆರೆಯ ಸಿದ್ದೇಶ್ ಪ್ರಥಮ ಬಹುಮಾನ ಪಡೆದರೆ, ಸಿರಿಧಾನ್ಯದಿಂದ ಲಡ್ಡು ತಯಾರಿಸಿದ ದಾವಣಗೆರೆಯ ಎ.ಎಂ. ರಾಕೇಶ್ ದ್ವಿತೀಯ ಹಾಗೂ ರಾಗಿ ಖೀಲ್ಸ ತಯಾರಿಸಿದ ಶಿಲ್ಪಾ ದರ್ಶನ್ ತೃತೀಯ ಬಹುಮಾನ ಪಡೆದರು.
ಖಾರದ ಖಾದ್ಯಗಳಲ್ಲಿ ದಾವಣಗೆರೆಯ ಜಿ.ಎಂ.ಎಸ್. ರಾಜೇಶ್ ಅವರು ತಯಾರಿಸಿದ ಸಾಮೆ ಅವಲಕ್ಕಿ ಚೂಡಕ್ಕೆ ಪ್ರಥಮ, ನವಣಕ್ಕಿ ಬುತ್ತಿ ಮಾಡಿದ ಹೊನ್ನಾಳಿ ತಾಲ್ಲೂಕಿನ ಕೋಟಿ ಮಲ್ಲೂರಿನ ಪಿ.ಜಿ.ಶಶಿಕಲಾಗೆ ದ್ವಿತೀಯ, ನವಣಕ್ಕಿ ಚಕ್ಕುಲಿ ತಯಾರಿಸಿದ ದಾವಣಗೆರೆಯ ದೀಕ್ಷಾ ಹಾಗೂ ಕೊರಲೆ ಕಟ್ಟು ಕಡುಬು ಮಾಡಿದ ಹರಿಹರದ ಸರೋಜಾ ಪಾಟೀಲ್ ಜಂಟಿಯಾಗಿ ತೃತೀಯ ಬಹುಮಾನ ಗಳಿಸಿದರು.
63 ಸ್ಪರ್ಧಿಗಳು ಭಾಗವಹಿಸಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಸುಪ್ರಿಯಾ ತೀರ್ಪುಗಾರರಾಗಿ ಭಾಗವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಇಲಾಖೆಯ ಅಧಿಕಾರಿಗಳಾದ ಅಶೋಕ್, ಶ್ರೀಧರಮೂರ್ತಿ ಇದ್ದರು.
ಈ ವೇಳೆ ದಾವಣಗೆರೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ ಮಾತನಾಡಿ, ಬರುವ 2024 ರ ಜ.5,6,7 ರಂದು ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಯಲ್ಲಿ ಸಿರಿಧಾನ್ಯದ ಖಾದ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
ಸಿರಿಧಾನ್ಯದಿಂದ ಒಬ್ಬರು ಸಿಹಿ ಖಾದ್ಯ ಹಾಗೂ ಮತ್ತೊಬ್ಬರು ಖಾರ ಖಾದ್ಯ ತಯಾರಿಸಬೇಕಿದೆ ಹಾಗೂ ಜಿಲ್ಲಾಮಟ್ಟದಲ್ಲಿ ಸ್ಪರ್ಧೆ ಏರ್ಪಡಿಸಲಾಗಿದೆ.
ಸಿರಿಧಾನ್ಯದಿಂದ ತಯಾರಿಸುವ ಖಾದ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಪ್ರತಿನಿಧಿಸುವ ಅವಕಾಶ ಕಲ್ಪಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಸಿರಿ ಧಾನ್ಯ ಪಾಕ ಸ್ಪರ್ಧೆ ಏರ್ಪಡಿಸಲಾಗಿದೆ.ಈ ಸ್ಪರ್ಧೆಯಲ್ಲಿ 63 ಜನ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಗಮಿಸಿದ್ದಾರೆ.
ಹೊನ್ನಾಳಿಯ ರಾಮೇಶ್ವರ,ದಾವಣಗೆರೆ, ಹರಿಹರ,ಜಗಳೂರು ಸೇರಿದಂತೆ ಆರು ತಾಲ್ಲೂಕುಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಈ ಸ್ಪರ್ಧೆಗೆ ಆಹಾರ ತಜ್ಞರು ಖಾದ್ಯಗಳನ್ನು ಪರೀಕ್ಷಿಸಿ ಹೆಚ್ಚು ಚೆನ್ನಾಗಿರುವ ಖಾದ್ಯಕ್ಕೆ ಐದುಸಾವಿರ ರೂಪಾಯಿ ಬಹುಮಾನ ನೀಡಲಾಗುವುದು ತದನಂತರ ಗೆದ್ದ ಇಬ್ಬರು ಸ್ಪರ್ಧಿಗಳು ರಾಜ್ಯಮಟ್ಟದ ಸಿರಿಧಾನ್ಯ ಮೇಳದ ಪಾಕ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಪ್ರತಿನಿಧಿಸಲಿದ್ದಾರೆಂದರು.
ಮೇಳದಲ್ಲಿ ಸಿರಿಧಾನ್ಯ ಖಾದ್ಯ ಗಳಾದ ನವಣೆ, ಊದಲು, ಆರಕ, ಬರಗು, ಸಾಮೆ ಈ ರೀತಿ ಸಿರಿಧಾನ್ಯಗಳ ಖಾದ್ಯ ಮಾಡಲಾಗಿದೆ.
ಬಿಸಿಬೇಳೆಬಾತ್,ಹಲ್ವಾ,ಚಕ್ಕಲಿ,ಕೋಡುಬಳೆ,ನಿಪ್ಪಟ್ಟು,ಕೇಕ್ ಈ ರೀತಿಯ ವಿವಿಧ ಖಾದ್ಯಗಳನ್ನು ತಯಾರಿಸಲಾಗಿದೆ ಎಂದರು
ಸಾಫ್ಟವೇರ್ ಎಂಜಿನಿಯರ್ ದೀಕ್ಷಾ ಮಾತನಾಡಿ, ಸಿರಿಧಾನ್ಯವಾದ ನವಣೆಯಿಂದ ಚಕ್ಕಲಿ ಮಾಡಿದ್ದೇನೆ.ಇದು ಆರೋಗ್ಯಕ್ಕೆ ಒಳ್ಳೆಯದು ಹಾಗೂ ಇದರಿಂದ ಸಕ್ಕರೆ ಖಾಯಿಲೆ ನಿಯಂತ್ರಣ ಮಾಡಬಹುದು.ನವಣೆ ತೊಳೆದು ಪುಡಿಮಾಡಿಕೊಂಡು ಚಕ್ಕಲಿಗೆ ಬೇಕಾದ ಜೀರಿಗೆ,ಕಾರದಪುಡಿ,ಉಪ್ಪು ಮಿಶ್ರಣ ಮಾಡಿ ಮಾಡಿದ್ದೇನೆ.ಉತ್ತಮ ಆರೋಗ್ಯಕ್ಕಾಗಿ ಈ ಖಾದ್ಯ ಮಾಡಿದ್ದೇವೆ.ಜನರೂಕೂಡ ಇಂತಹ ಸಿರಿಧಾನ್ಯಗಳ ಬಳಕೆಮಾಡಬೇಕು ಎಂದರು. ಒಟ್ಟಾರೆ ಸಿರಿಧಾನ್ಯ ನೋಡುಗರ ಗಮನ ಸೆಳೆಯುತ್ತಿತ್ತು.