ಶಿವಮೊಗ್ಗ :ವಿಕಸಿತ ಭಾರತ ನಿರ್ಮಾಣದಲ್ಲಿ ಸಹಕಾರ ಸಂಘಗಳಿಂದಲೂ ವಿವಿಧ ಸಾಲ ನೀಡಲು ಅವಕಾಶ ಇರುವುದರಿಂದ ಆಡಳಿತ ಮಂಡಳಿಗಳು ಹೊಸ ಉದ್ಯಮಗಳಿಗೆ ಸಾಲ ನೀಡಿ ಸಹಕಾರಿ ಕ್ಷೇತ್ರವನ್ನು ಇನ್ನಷ್ಟು ಸದೃಢ ಮಾಡಬಹುದಾಗಿದೆ ಎಂದು ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ. ಶ್ರೀನಿವಾಸ್ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಸಹಕಾರ ಯೂನಿಯನ್, ಡಿಸಿಸಿ ಬ್ಯಾಂಕ್, ಶಿಮೂಲ್, ಇಹಕಾರ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ 71 ನೇ ಅಖಿಲ ಭಾರತ ಸಹಕಾರ ಸಪ್ತಾಹದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಸಹಕಾರಿ ಉದ್ಯಮಗಳಲ್ಲಿ ಪರಿವರ್ತನೆ ಕುರಿತು ಉಪನ್ಯಾಸ ನೀಡಿದರು.

ದೇಶ ಅಭಿವೃದ್ಧಿಯಾಗುತ್ತಿದೆ ಎಂದರೆ ಸಹಕಾರಿ ಕ್ಷೇತ್ರದ ಪಾತ್ರ ಮುಖ್ಯವಾಗಿದೆ. ಆರಂಭದಲ್ಲಿ ರೈತರಿಗೆ ಮಾತ್ರ ಸಾಲ ನೀಡಲಾಗುತ್ತಿತ್ತು. ಈಗ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಎಲ್ಲಾ ರೀತಿಯ ಸಾಲ ನೀಡಲಾಗುತ್ತಿದೆ. ಹಳ್ಳಿಯಲ್ಲಿಯೇ ಅಗತ್ಯ ಉದ್ಯಮವನ್ನು ಆರಂಭಿಸಿದರೆ ಸದಸ್ಯರು ಬೇರೆ ಕಡೆ ಹೋಗುವುದಿಲ್ಲ ಎಂದರು.

ಠೇವಣಿ ಹಾಗೂ ಎಸ್‍ಬಿ ಖಾತೆಗಾಗಿ ಖಾಸಗಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‍ನವರು ಗ್ರಾಹಕರ ಮನೆ ಬಾಗಿಲಿಗೆ ಹೋಗುತ್ತಾರೆ. ಆದರೆ ಸಹಕಾರಿ ಬ್ಯಾಂಕ್‍ನವರು ಗ್ರಾಹಕರ ಬಳಿ ಹೋಗುತ್ತಿಲ್ಲ ಹೊಸ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಲು ಅವಕಾಶವಿದ್ದರೂ ಆ ಬಗ್ಗೆ ಚಿಂತನೆ ನಡೆಸುತ್ತಿಲ್ಲ. ಇಂತಹ ಮನೋಭಾವನೆ ಬಿಟ್ಟು ಹೊಸ ಸಾಧ್ಯತೆಗಳ ಕಡೆ ಗಮನನೀಡಬೇಕಿದೆ ಎಂದರು.

ಇಸ್ರೇಲ್‍ನಲ್ಲಿ ಸಹಕಾರಿ ಕ್ಷೇತ್ರ ಬಲಿಷ್ಠವಾಗಿದೆ. ಎಲ್ಲದಕ್ಕೂ ಸಹಕಾರಿ ಸಂಘಗಳಿವೆ. ಅಂತಹ ವ್ಯವಸ್ಥೆ ನಮ್ಮ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಆದರೆ ಶಿವಮೊಗ್ಗದಲ್ಲಿ ಇಲ್ಲ. ಇದಕ್ಕೆ ಕೌಸಲ್ಯ ಭರಿತ ವ್ಯಕ್ತಿಗಳು ಇರಬೇಕು. ಮಾರಾಟ ಸಹಕಾರಸಂಘಗಳು ಉತ್ತಮ ಅಂಗಡಿ ಮಳಿಗೆಮಾಡಿ ಹೊಳಪಿನ ವಸ್ತುಗಳನ್ನು ಇಟ್ಟಾಗ ವ್ಯಾಪಾರ ಅಭಿವೃದ್ದಿಯಾಗುತ್ತದೆ.

ಬಿತ್ತನೆ ಬೀಜ ಮಾರಾಟಮಾಡಿ ಲಾಭಗಳಿಸಬಹುದಾಗಿದೆ. ಇದರ ಬಗ್ಗೆ ಯಾವುದೇ ಸಹಕಾರ ಸಂಘಗಳ ಆಡಳಿತ ಮಂಡಳಿ ಇಚ್ಛಾಶಕ್ತಿ ತೋರುತ್ತಿಲ್ಲ. ಹೀಗಾಗಿ ಖಾಸಗಿ ಕಂಪನಿಗಳು ಇದನ್ನು ವ್ಯಾಪಿಸಿಕೊಂಡಿವೆ. ಖಾಸಗಿ ಕ್ಷೇತ್ರಕ್ಕಿಂತ ಸಹಕಾರಿ ಕ್ಷೇತ್ರ ಶಕ್ತಿಯುತವಾಗಿರುವುದರಿಂದ ಅದನ್ನು ಬಳಸಿಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ಪ್ರಾಸ್ತಾವಿಕ ಮಾತನಾಡಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಸಹಕಾರ ಸಂಘಗಳಿಗೆ ತೆರಿಗೆ ಹಾಕಬಾರದು ಎಂಬ ಒತ್ತಾಯವಿದೆ. ಆದರೂ ಆದಾಯ ತೆರಿಗೆ ಕಟ್ಟುವಂತೆ ಅನೇಕ ಪ್ರಾಥಮಿಕ ಸಹಕಾರಿ ಸಂಘಗಳಿಗೆ ನೋಟೀಸ್ ನೀಡಲಾಗಿದೆ. ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವ ಸೊಸೈಟಿಗಳು 3 ಕೋಟಿ ತೆರಿಗೆ ಕಟ್ಟಿದರೆ ಸೊಸೈಟಿ ಮುಚ್ಚಿ ಹೋಗಲಿವೆ. ಇದರ ಬಗ್ಗೆ ಹೋರಾಟ ನಡೆಸಬೇಕಿದೆ ಎಂದರು.

2011-12 ರಿಂದ ತೆರಿಗೆ ವಿರೋಧ ಮಾಡಿಕೊಂಡು ಬರಲಾಗಿದೆ. ಆದರೂ ಆದಾಯ ತೆರಿಗೆ ಇಲಾಖೆಯವರು ಈಗ ನೊಟೀಸ್ ನೀಡುತ್ತಿದ್ದಾರೆ. ಕೋಟಿ ಲೆಕ್ಕದಲ್ಲಿ ತೆರಿಗೆ ಹಾಕಿದರೆ ಯಾವ ಸಹಕಾರಿ ಸಂಘಗಳು ಉಳಿಯಲು ಸಾಧ್ಯವಿಲ್ಲ ಎಂದರು.

ಬದ್ದತೆ ಇಲ್ಲದಿದ್ದರೆ ಯಾರೂ ಕೂಡ ಈ ಕ್ಷೇತ್ರಕ್ಕೆ ಬರಬಾರದು. ಬೈಲಾಗಳನ್ನು ಸರಿಯಾಗಿ ಓದಿಕೊಂಡು ಒಂದಿಷ್ಟು ಸಮಯವನ್ನು ನೀಡಬೇಕಿದೆ. ತೆರಿಗೆಯನ್ನು ಎಲ್ಲಾ ಸಹಕಾರಿ ಸಂಸ್ಥೆಗಳವರು ವಿರೋದಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕಿಶ್ ಬಾನು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಶಿಮುಲ್ ಅಧ್ಯಕ್ಷ ಎಚ್.ಎನ್. ವಿದ್ಯಾಧರ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಸಹಕಾರಿಗಳಾದ ಪಿ.ವೀರಮ್ಮ ಕೆ.ಪಿ. ದುಗ್ಗಪ್ಪಗೌಡ, ಎಸ್,ಎನ್. ಮಹಾಲಿಂಗಶಾಸ್ತ್ರೀ, ಆರ್. ವಿಜಯಕುಮಾರ್ ಮೊದಲಾದವರು ಇದ್ದರು.

Share.
Leave A Reply

Exit mobile version