ಬೆಂಗಳೂರು.
ವರ್ಷದಿಂದ ವರ್ಷಕ್ಕೆ ಬಿಎಂಟಿಸಿ ಬಸ್ ಹತ್ತುವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ವರದಿ ನೀಡಿದೆ.
ಕಿಕ್ಕಿರಿದು ತುಂಬಿರುವ ಬಸ್, ಕಳಪೆ ಸೇವೆ, ಸಿಬ್ಬಂದಿಯ ವರ್ತನೆ ಮತ್ತು ಗೊತ್ತುಪಡಿಸಿದ ಸ್ಥಳಗಳಲ್ಲಿ ನಿಲುಗಡೆ ಇಲ್ಲದಿರುವುದು ಸೇರಿದಂತೆ ಇತರ ಸಮಸ್ಯೆಗಳ ಭಾಗವಾಗಿ ನಡೆಸಿದ ಸಮೀಕ್ಷೆಯಲ್ಲಿ ಪ್ರಯಾಣಿಕರು ಪ್ರಮುಖ ದೂರುಗಳನ್ನು ವ್ಯಕ್ತಪಡಿಸಿದ್ದಾರೆ.
ಅಲ್ಲದೇ ಬಿಎಂಟಿಸ್ ಕಾರ್ಯಕ್ಷಮತೆ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಆಡಿಟ್ ವರದಿ ಸಲ್ಲಿಸಲಾಗಿದ್ದು, 2017-18 ರಿಂದ 2021-22 ರವರೆಗಿನ ಅವಧಿಗೆ ನಡೆಸಿದ ಲೆಕ್ಕಪರಿಶೋಧನೆಯು ಬಿಎಂಟಿಸಿ ಯ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತ ಗಮನಿಸಿದೆ,
ಸಿಟಿ ಬಸ್‌ಗಳ ಅವಲಂಬನೆ ಕಡಿಮೆ
2017-18 ರಲ್ಲಿ 44.4 ಲಕ್ಷ ಪ್ರಯಾಣಿಕರು ಬಿಎಂಟಿಸಿ ಹತ್ತಿದರೆ, 2019-2020ಕ್ಕೆ 33.1 ಲಕ್ಷ ಪ್ರಯಾಣಿಕರು ಬಿಎಂಟಿಸಿ ಹತ್ತಿದ್ದಾರೆ. ಮತ್ತೊಂದು ಮಹತ್ವದ ಅವಲೋಕನದಲ್ಲಿ, ನಗರದ ಜನಸಂಖ್ಯೆಯು ಹೆಚ್ಚುತ್ತಿದ್ದು, ಖಾಸಗಿ ವಾಹನಗಳ ಬಳಕೆ, ಸ್ವಂತ ವಾಹನ, ಮೆಟ್ರೋ, ಕ್ಯಾಬ್, ಆಟೋ ಬಳಕೆ ಹೆಚ್ಚಾಗಿರುವ ಕಾರಣ ಸಿಟಿಬಸ್‌ಗಳ ಅವಲಂಬನೆ ಕಡಿಮೆಯಾಗಿದೆ.
ಬಸ್‌ಗಳ ಸಂಖ್ಯೆ ಇಳಿಮುಖ.
2017-18ರಲ್ಲಿ ಬೆಂಗಳೂರಿನ ಜನಸಂಖ್ಯೆ 1.2 ಕೋಟಿಯಷ್ಟಿದ್ದು, 65 ಲಕ್ಷಕ್ಕೂ ಹೆಚ್ಚು ವಾಹನಗಳು ನಗರದ ರಸ್ತೆಗಳಲ್ಲಿ ಸಂಚರಿಸುತ್ತಿದ್ದವು. ಆಗ 44 ಲಕ್ಷ ಜನರು ತಮ್ಮ ಪ್ರಯಾಣಕ್ಕೆ ಸಿಟಿ ಬಸ್‌ಗಳನ್ನು ಅವಲಂಬಿಸಿದ್ದರು. ಅದೇ 2021-22 ರಲ್ಲಿ ನಗರದ ಜನಸಂಖ್ಯೆಯು 1.4 ಕೋಟಿ ಗಡಿ ಮುಟ್ಟಿದ್ದು, ವಾಹನಗಳ ಸಂಖ್ಯೆ 91.3 ಲಕ್ಷವಾಗಿದೆ. ಆದರೆ, ಪ್ರತಿನಿತ್ಯ ಸಿಟಿ ಬಸ್ ಬಳಸುವವರ ಸಂಖ್ಯೆ 16 ಲಕ್ಷಕ್ಕೆ ಇಳಿದಿದೆ.
44 ಲಕ್ಷದ ಗಡಿ ದಾಟಿದ ಪ್ರಯಾಣಿಕರು.
2021-22ರಲ್ಲಿ ಏಕಾಏಕಿ ಕೋವಿಡ್-19 ಸಾಂಕ್ರಾಮಿಕ ರೋಗ ಬಂದಿದ್ದು, ಅಲ್ಲಿಂದ ಪ್ರಯಾಣಿಕರು ಕಡಿಮೆಯಾಗಿದ್ದರು. ಆದಾಗ್ಯೂ, ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಂಡು ಎರಡು ವರ್ಷಗಳ ನಂತರವೂ, ಪ್ರಯಾಣಿಕರ ಸಂಖ್ಯೆ 2017-18ರಲ್ಲಿ ದಾಖಲಾದ 44 ಲಕ್ಷದ ಗಡಿಯನ್ನು ದಾಟಿಲ್ಲ. ಹೊಸ ಬಸ್‌ಗಳ ಸೇರ್ಪಡೆಯಾಗದಿರುವುದು, ಸಿಬ್ಬಂದಿ ಕೊರತೆ ಮತ್ತು ಮೆಟ್ರೊ ಜಾಲದ ವಿಸ್ತರಣೆಯು ಸಿಟಿ ಬಸ್ ಹತ್ತೋರು ಕಡಿಮೆಯಾಗಿದ್ದಾರೆ ಎಂದು ಸಿಎಜಿ ಕಾರಣ ನೀಡಿದೆ. ಇನ್ನು ಪ್ರಸ್ತುತ, ಬಿಎಂಟಿಸಿ ಬಸ್‌ಗಳನ್ನು 39 ಲಕ್ಷ ಪ್ರಯಾಣಿಕರು ಬಳಸುತ್ತಾರೆ, ಇದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ ಶಕ್ತಿ ಯೋಜನೆಯಿಂದ ನಿಗಮವು ಪಡೆಯುತ್ತಿರುವ ಪ್ರೋತ್ಸಾಹವೂ ಸೇರಿದೆ.
ಪ್ರಯಾಣಿಕರ ಅಭಿಪ್ರಾಯವೇನು..?
ಸಿಎಜಿ ನಡೆಸಿದ ಆನ್‌ಲೈನ್ ಸಮೀಕ್ಷೆಯಲ್ಲಿ 2,079 ಪ್ರತಿವಾದಿಗಳು ಭಾಗವಹಿಸಿದ್ದು, ಸುಮಾರು 50% ರಷ್ಟು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು 73% ಜನರು ಅದರ ಸೇವೆಗಳಿಂದ ತೃಪ್ತರಾಗಿದ್ದಾರೆ. ಪ್ರಯಾಣಿಕರಿಗೆ (90%) ಬಿಎಂಟಿಸಿಯನ್ನು ಆಯ್ಕೆ ಮಾಡಲು ಆರ್ಥಿಕ ದರಗಳು ಅಥವಾ ಬಸ್ ನಿಲ್ದಾಣಗಳ ಸಾಮೀಪ್ಯವು ಪ್ರಮುಖ ಕಾರಣಗಳಾಗಿದ್ದರೆ, ನಿಗಮದ ವಾಹನಗಳಲ್ಲಿ ಪ್ರಯಾಣಿಸಲು ಆಯ್ಕೆ ಮಾಡದವರಿಗೆ ದೀರ್ಘ ಪ್ರಯಾಣದ ಸಮಯ ಮತ್ತು ಸೇವೆಗಳ ಕಳಪೆ ಆವರ್ತನವು ಮುಖ್ಯ ಕಾರಣಗಳಾಗಿವೆ.”ಹೀಗಾಗಿ, ಸಂಪರ್ಕ ಮತ್ತು ಆವರ್ತನವನ್ನು ಸುಧಾರಿಸುವುದು ಬಿಎಂಟಿಸಿ ಯ ಸೇವೆಗಳನ್ನು ವಿಶ್ವಾಸಾರ್ಹಗೊಳಿಸಿದೆ ಮತ್ತು ನಗರದಲ್ಲಿ ಅತ್ಯಂತ ಆರ್ಥಿಕ ಸಾರಿಗೆ ಸೌಲಭ್ಯವಾಗಿ ಅದರ ಪ್ರಯಾಣಿಕರ ನೆಲೆಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ” ಎಂದು ವರದಿ ಹೇಳಿದೆ.
ಬಿಎಂಟಿಸಿ ಸಿಬ್ಬಂದಿ ನಡವಳಿಕೆ ಬಗ್ಗೆ ಬೇಸರ.
ಪ್ರತಿಕ್ರಿಯಿಸಿದವರಲ್ಲಿ ಸಿಬ್ಬಂದಿಯ ನಡವಳಿಕೆಯಿಂದ ತೃಪ್ತರಾಗಿರಲಿಲ್ಲ. ಅವರ ವರ್ತನೆ ಪ್ರಯಾಣಿಕರ ಸುರಕ್ಷತೆಯ ಮೇಲೆ ಪರಿಣಾಮ ಬೀರಿದೆ. “ನಿಯೋಜಿತ ಬಸ್ ನಿಲ್ದಾಣಗಳಲ್ಲಿ ಬಸ್‌ಗಳು ನಿಲ್ಲುವುದಿಲ್ಲ ಮತ್ತು ಕಂಡಕ್ಟರ್‌ಗಳು, ಟಿಕೆಟ್ ಖರೀದಿಯಲ್ಲಿ ಬದಲಾವಣೆ ತರಬೇಕು ಎಂಬ ಪ್ರಮುಖ ದೂರುಗಳಿವೆ. ಸುಮಾರು 26% ರಷ್ಟು ಪ್ರತಿಕ್ರಿಯಿಸಿದವರು ಬಸ್ ನಿಲ್ದಾಣಗಳಲ್ಲಿ ಬಸ್ಸುಗಳು ರಸ್ತೆಯ ಮಧ್ಯದಲ್ಲಿ ನಿಲ್ಲುತ್ತವೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೆಲವು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಬಸ್‌ಗಳ ಜನದಟ್ಟಣೆ ಹೆಚ್ಚಿದೆ. ಗೊತ್ತುಪಡಿಸಿದ ಬಸ್ ನಿಲ್ದಾಣಗಳಲ್ಲಿ ಬಸ್ಸುಗಳನ್ನು ನಿಲ್ಲಿಸೋದಿಲ್ಲ. ಬಸ್ ಬಾರದ ಕಾರಣ ಅನೇಕ ವಿದ್ಯಾರ್ಥಿಗಳು ತಮ್ಮ ಮೊದಲ-ಗಂಟೆಯ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ವರದಿ ಹೇಳಿದೆ.
ಉತ್ತಮ ಸೌಕರ್ಯ ಇಲ್ಲ.
“ನಿಲ್ದಾಣದಲ್ಲಿ ಒದಗಿಸಿದ ಸೌಕರ್ಯಗಳು ಬಳಸಬಹುದಾದ ಸ್ಥಿತಿಯಲ್ಲಿಲ್ಲ, ಶುಚಿತ್ವ / ನೈರ್ಮಲ್ಯವನ್ನು ಸಹ ನಿರ್ವಹಿಸಲಾಗಿಲ್ಲ. ಜೊತೆಗೆ, ಯಾವುದೇ ರಿಫ್ರೆಶ್ಮೆಂಟ್ ಕೊಠಡಿಗಳು, ಅಂಗಡಿಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಇಲ್ಲ. ಕನಿಷ್ಠ ಪ್ರಯಾಣಿಕರ ಮಾಹಿತಿ ವ್ಯವಸ್ಥೆಗಳಾದ ಬಸ್ ವೇಳಾಪಟ್ಟಿಯು ಪ್ರದರ್ಶನ ಮಾಡಿಲ್ಲ ಎಂದು ವರದಿ ಹೇಳಿದೆ. ಒಟ್ಟಾರೆ ಬಿಎಂಟಿಸಿ ಬಸ್ ವ್ಯವಸ್ಥೆ ಬಗ್ಗೆ ಸಿಎಜಿ ವರದಿ ನೀಡಿರುವುದು ಬೇಸರ ತಂದಿದೆ.
—-
ಟಿಟಿಎಂಸಿಗಳ ಕಳಪೆ ನಿರ್ವಹಣೆ.
ನಗರ ಮೂಲಸೌಕರ್ಯಗಳನ್ನು ಸುಧಾರಿಸಲು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಯುಆರ್‌ಎಂ) ಅಡಿಯಲ್ಲಿ ನಿರ್ಮಿಸಲಾದ ಅನೇಕ ಸಂಚಾರ ಸಾರಿಗೆ ನಿರ್ವಹಣಾ ಕೇಂದ್ರಗಳು (ಟಿಟಿಎಂಸಿ) ದಯನೀಯ ಸ್ಥಿತಿಯಲ್ಲಿವೆ ಎಂದು ಸಿಎಜಿ ವರದಿ ಹೇಳಿದೆ.
—
‘ಕಳಪೆ ಸೇವೆಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಬಸ್‌ಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದು, ಪ್ರಯಾಣಿಕರು ನಿಲ್ಲಲು ಸಹ ಜಾಗವಿಲ್ಲದಂತಾಗಿದೆ. ಪ್ರಯಾಣಿಕರು ತಮ್ಮ ನಿಲ್ದಾಣ ಬಂದಾಗ ಬಸ್‌ನಿಂದ ಕೆಳಗಿಳಿಯುವ ಸ್ಥಿತಿಯಲ್ಲಿರುವುದಿಲ್ಲ, ಅದರ ಮೇಲೆ ಕೆಲವು ಮಾರ್ಗಗಳಲ್ಲಿ ವಿಪರೀತ ದಟ್ಟಣೆ ಉಂಟಾಗುತ್ತಿದೆ. ಮುಂದಿನ ಹಂತವನ್ನು ತಲುಪುವ ಮೊದಲು ಟಿಕೆಟ್ ನೀಡಲು ಸಾರಿಗೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ.
-ತೀರ್ಥಹಳ್ಳಿ ಅನಂತ ಕಲ್ಲಾಪುರ, ಸುಮನಹಳ್ಳಿಯಿಂದ ಬನಶಂಕರಿಗೆ ಸಿಟಿ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕ