ನಂದೀಶ್ ಭದ್ರಾವತಿ, ದಾವಣಗೆರೆ 

ಅವರು ಅಲ್ಪಸಂಖ್ಯಾತ ಕುಟುಂಬದಲ್ಲಿ ಹುಟ್ಟಿದ ಮಹಿಳೆ, ಶಿಕ್ಷಣ ಎಂಬುದು ಮರೀಚೀಕೆ ಈ ನಡುವೆ ತಂದೆಯೇ ಎಲ್ಲ. ಇದರ ಜತೆ ಉನ್ನತ ಅಧಿಕಾರಿಯಾಗಬೇಕೆಂಬ ಆಸೆ…. ಆದರೆ ಸರಿಯಾದ ಶಿಕ್ಷಣವಿರಲಿಲ್ಲ…ಆದರೂ ನಾನಾ ಕಷ್ಟಗಳನ್ನು ಮೆಟ್ಟಿ ಇಂದು ದಾವಣಗೆರೆಯಲ್ಲಿ ಉನ್ನತ ಮಹಿಳಾ  ಅಧಿಕಾರಿಯಾಗಿ ಜನರ ಸೇವೆ ಮಾಡುತ್ತಿದ್ದಾರೆ.

ಹೌದು..ಇದು ದಾವಣಗೆರೆ ವಿಶೇಷ ಭೂ ಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ನಜ್ಮಾರವರ ಜೀವನದ ಕಥೆ-ವ್ಯಥೆ.

ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೆ ಆಳಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ನಜ್ಮಾರವರು ಇದ್ದು, ದಾವಣಗೆರೆ ಜಿಲ್ಲೆಯಾದ್ಯಂತ ಎಲ್ಲ ಕ್ಷೇತ್ರಗಳಲ್ಲೂ ಅವರದ್ದೇ ಮೇಲುಗೈ.

ಹೆಣ್ಣು ಹುಟ್ಟಿದರೆ ತಂದೆ ತಾಯಿಗೆ ಹೊರೆ ಎಂಬ ಸಮಸ್ಯೆ ಸಮಾಜದಲ್ಲಿ ಆಳವಾಗಿ ಬೇರೂರಿರುವ ಈ ದಿನಗಳಲ್ಲಿ ಒಬ್ಬ ಮಹಿಳಾ ಅಧಿಕಾರಿಯಾಗಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈಯುವ ಮೂಲಕ ತಮ್ಮ ಸಾಮರ್ಥ್ಯ ತೊರಿಸಿದ್ದಾರೆ. ಮಹಿಳೆಯರು ಎಂದರೆ ಮನೆ, ಮಕ್ಕಳು ಮತ್ತು ಅಡುಗೆಗೆ ಮಾತ್ರ ಸೀಮಿತ ಎಂಬ ಮಾತನ್ನು ಇವರು ಸುಳ್ಳಾಗಿಸಿದ್ದಾರೆ.

ಮಲೆನಾಡಿನ ಹೆಣ್ಣು ಮಗಳಾದ ನಜ್ಮಾ ಕೂಡು ಕುಟುಂಬದಲ್ಲಿ ಬೆಳೆದವರು..ತಂದೆ ಶಿಕ್ಷಣ ಇಲಾಖೆಯಲ್ಲಿ ಎಫ್ ಡಿಎ ಆಗಿದ್ದರು. ಈ ನಡುವೆ ಉನ್ನತ ಅಧಿಕಾರಿಯಾಗಬೇಕೆಂಬ ಕನಸು ಹೊತ್ತ ಇವರು ಮೊದಲು ಎಂಎ ಮುಗಿಸಿ ನಂತರ ಬಿಇಡಿ ಓದಿದರು. ಬಳಿಕ ಪ್ರೌಢ ಶಾಲಾ ಶಿಕ್ಷಕರಾದರು.

ಶಿವಮೊಗ್ಗದ ಅನುದಾನಿತ ಶಾಲೆಯಲ್ಲಿ ಕೆಲಸ ಮಾಡಿದ ಇವರು, ಇದೇ ಜಿಲ್ಲೆಯ ಹಾರನಹಳ್ಳಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದರು. ಬಳಿಕ 2006ರ ಬ್ಯಾಚ್‌ನಲ್ಲಿ ಕೆಎಎಸ್ ಮಾಡಿ ತಹಶೀಲ್ದಾರ್‌ ಆಗಿ ಆಯ್ಕೆಯಾದರು. ತಹಶೀಲ್ದಾರರಾಗಿ ಬೆಳಗಾವಿಯಲ್ಲಿ ಮೊದಲ ಪೋಸ್ಟಿಂಗ್ ಕೆಲಸ ಮಾಡಿದರು. ಮಣಿಪಾಲ, ಹರಿಹರ ತಹಸೀಲ್ದಾರ್ ಆಗಿ ರೈತರಿಗೆ, ಜನರಿಗೆ ಬೇಕಾದ ಕೆಲಸಗಳನ್ನು ಮಾಡಿದರು. ಇದರ ಜತೆಗೆ ಟೀಕೆಗಳನ್ನು ಎದುರಿಸಿದರು.

ಸಹಾಯಕ ಆಯುಕ್ತರಾಗಿ ಬಡ್ತಿ

ಶಿಕ್ಷಕಿಯಾಗಿ, ತಹಸೀಲ್ದಾರ್ ಆಗಿದ್ದ ನಜ್ಮಾರಿಗೆ  2016ರಲ್ಲಿ ಸಹಾಯಕ ಆಯುಕ್ತರಾಗಿ ಬಡ್ತಿ ಸಿಕ್ಕಿತು. ನಂತರ ದಾವಣಗೆರೆ ಪ್ರಧಾನ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಕೆಲಸ ಮಾಡಿದರು. ಅಲ್ಲದೇ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿಯಾಗಿ ಕೆಲಸ ಮಾಡಿದರು. 

ಎಸಿಯಾಗಿ ಕೆಲಸ

ಹರಪನಹಳ್ಳಿ ಮತ್ತು ಜಮಖಂಡಿಯಲ್ಲಿ ಎಸಿಯಾಗಿ ಕೆಲಸ ಮಾಡಿದರು. ಇನ್ನು ಡೆಪ್ಯೂಟಿ ಡೈರೈಕ್ಟರ್ ಆಫ್ ಪುಡ್ ಸಪ್ಲೇಯಲ್ಲಿ ಕೆಲಸ ಮಾಡಿದರು. ಅಲ್ಲದೇ ದಾವಣಗೆರೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಉಪನಿರ್ದೇಶಕರು.ತುಮಕೂರಿನಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಸ್ತುತ ಇವರು ದಾವಣಗೆರೆ ವಿಶೇಷ  ಭೂ ಸ್ವಾಧೀನ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.‌

ಮದುವೆ ನಂತರ ಶಿಕ್ಷಕಿ

ನಜ್ಮಾರವರಿಗೆ  ಪತಿ ಮತ್ತು ಮಗನಿದ್ದು ಸುಖಿ ಸಂಸಾರ ನಡೆಸುತ್ತಿದ್ದಾರೆ. ಮದುವೆಯ ನಂತರ ಹೆಚ್ಚಿನ ಶಿಕ್ಷಣವನ್ನು ಅವರ ಪತಿ ಸಹಕಾರದಿಂದ ಪಡೆದ ಇವರು ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದರು. ಅಲ್ಲದೇ ಅವರ ಸಹೋದರ ಬೆಂಬಲವಾಗಿ ನಿಂತರು.

ಕಲಸಕ್ಕೆ ಹೋಗುವ ಮಹಿಳೆಗೆ ಬೇಕು ಪತಿ ಬೆಂಬಲ

ಕೆಲಸಕ್ಕೆ ಹೋಗುವ ಮಹಿಳೆಗೆ ಪತಿ ಬೆಂಬಲ, ಅತ್ತೆ ಮಾವನ ಬೆಂಬಲವಿದ್ದರೇ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುತ್ತಾರೆ ನಜ್ಮಾ. ಮಹಿಳೆಯರು ಯಾವಾಗಲೂ ಸಮಾನತೆಯನ್ನು ಬಯಸುತ್ತಾರೆ.  ಸಮಾನರಲ್ಲ ಎಂದು ನಾವು ಭಾವಿಸಿದಾಗ ನಾನಾ ಪ್ರಶ್ನೆ ಉದ್ಭವಿಸುತ್ತದೆ. ಪುರುಷರು ಮತ್ತು ಮಹಿಳೆಯರು ಒಂದೇ ನಾಣ್ಯದ ಎರಡು ಭಾಗಗಳು. ಪರಸ್ಪರ ಅರ್ಥ ಮಾಡಿಕೊಳ್ಳದೇ ಹೋದರೆ ಜೀವನ ನಡೆಸುವುದು ಕಷ್ಟ.

ನಮ್ಮ ಕುಟುಂಬಕ್ಕೆ ನಾವು ನೀಡುವ ಪ್ರೀತಿ ಮತ್ತು ಕಾಳಜಿ ಮಾತ್ರ ಅಂತಿಮವಾಗಿ ಹಿಂತಿರುಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತೇನೆ.  ದುಡಿಯುವ ಮಹಿಳೆಯರಿಗೆ ಕುಟುಂಬದ ನಂಬಿಕೆ ಅತ್ಯಂತ ಮುಖ್ಯವಾಗಿದೆ.  ಕುಟುಂಬದ ಬೆಂಬಲವಿಲ್ಲದೆ ನಾವು ಏನು  ಸಾಧಿಸಲು ಸಾಧ್ಯವಿಲ್ಲ ಎನ್ನುತ್ತಾರೆ ನಜ್ಮಾ.

ನಜ್ಮಾ ಮಾಡಿದ ಕೆಲಸವೇನು ?

ನಜ್ಮಾ  ತಹಸೀಲ್ದಾರರಾಗಿ ಕೆಲಸ ಮಾಡುವಾಗ ಅನೇಕ ಜಮೀನು ಸಮಸ್ಯೆಗಳ ನಿವಾರಣೆ ಮತ್ತು ಅಲ್ಪಸಂಖ್ಯಾತರ ಹಾಸ್ಟೆಲ್‌ಗಳಿಗೆ ಭೂಮಿ ಮಂಜೂರು ಮಾಡಿದ್ದಾರೆ. ಜಾತಿ, ಭೇದವಿಲ್ಲದೇ ಕೆಲಸ ಮಾಡಿದ್ದಾರೆ. ಇನ್ನು ದಾವಣಗೆರೆ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಿಸ್ತು ಬದ್ಧವಾಗಿ ನಡೆಸಿದ ಕೀರ್ತೀ ಇವರಿಗೆ ಸಲ್ಲುತ್ತದೆ‌. ಒಟ್ಟಾರೆಯಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿ ಕಾರ್ಯದಲ್ಲಿ ಇವರ ಪಾಲು ಹೆಚ್ಚಿದ್ದು, ಈ ಮೂಲಕ ಜಿಲ್ಲೆಯಲ್ಲಿ ಮಹಿಳೆಯರು ಪುರುಷರಷ್ಟೇ ಸಮಾನರಾಗಿ ಮೆರೆದಿರುವುದು ಶ್ಲಾಘನೀಯ.

 

Share.

2 Comments

  1. ರಾಮಗಿರಿ ಯೋಗೀಶ್ on

    ಮೇಡಂ ಅವರ ಸಾಧನೆ ಕುರಿತ ಲೇಖನ ಮಹಿಳೆಯರಿಗೆ ಅಷ್ಟೆ ಅಲ್ಲ ಪುರುಷರಿಗೂ ಸ್ಪೂರ್ತಿ ದಾಯಕವಾಗಿದೆ.

Leave A Reply

Exit mobile version