ದಾವಣಗೆರೆ : ದಾವಣಗೆರೆ ಪೂರ್ವ ವಲಯ ಐಜಿಪಿ ಡಾ.ರವಿಕಾಂತೇಗೌಡರು ದಕ್ಷ, ಖಡಕ್ ಅಧಿಕಾರಿಯಾಗಿದ್ದು, ಸಾಹಿತ್ಯವಲಯದಲ್ಲಿ ತಮ್ಮದೇ ಆದ ವಲಯ ಹೊಂದಿದ್ದಾರೆ ಎಂದು ನಿವೃತ್ತ ಎಸ್ಪಿ ಜಿ.ಎ.ಜಗದೀಶ್ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ರವಿಕಾಂತೇಗೌಡರು ಐಎಂಎ ಹಗರಣದ ಸಾರಥ್ಯದ ಜತೆ ಸಂಚಾರ, ಕ್ರೈಂ, ರೌಡಿಗಳನ್ನು ಮಟ್ಟ ಹಾಕುವಲ್ಲಿ ಅವರದ್ದೇ ಪಾತ್ರ ವಹಿಸಿದ್ದಾರೆ. ಇವರು ಪೊಲೀಸ್ ಮಾತ್ರವಲ್ಲ, ಸಾಹಿತಿ, ಕಥೆಗಾರರಾಗಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರ ಕಟ್ಟಾಭಿಮಾನಿಯಾಗಿದ್ದು, ಅವರ ರೀತಿಯಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ. ಒಂದು ಉತ್ತಮ ಸಮಾಜಕ್ಕೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಡಾ.ಬಿ.ಆರ್. ರವಿಕಾಂತೇಗೌಡರು ಮೂಲತ: ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿಯವರು. ಇವರು ಬಿ.ಇ ,ಎಂಟೆಕ್ ಇಂಜನಿಯರಿಂಗ್ ಸ್ನಾತಕೋತ್ತರ ಪದವೀಧರರಾಗಿದ್ದಾರೆ. ಇವರ ತಂದೆ ಬೆಸಗರಹಳ್ಳಿ ರಾಮಣ್ಣ ಪ್ರಸಿದ್ಧ ಕತೆಗಾರರು ಹಾಗೂ ಸಾಹಿತಿಗಳು. ತಂದೆಯಂತೆಯೇ ಡಾ.ರವಿಕಾಂತೇಗೌಡರೂ ಸಹ ಸಾಹಿತಿಯಾಗಿದ್ದಾರೆ.
ರವಿಕಾಂತೇಗೌಡರು ಲಾಠಿ ಹಿಡಿಯುವ ಕೈ ಲೇಖನಿಯನ್ನೂ ಹಿಡಿಯ ಬಲ್ಲರು ಎಂಬುದನ್ನು ಸಾಬೀತುಪಡಿಸಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಇವರ ರೈತರ ದೀನ ದಲಿತರ ಕಷ್ಟ ಕಾರ್ಪಣ್ಯ ಅರಿತವರಾಗಿದ್ದಾರೆ. ರವಿಕಾಂತೇಗೌಡರು ವೃತ್ತಿಪರ ಪೊಲೀಸ್ ಅಧಿಕಾರಿಯಾಗಿ ಸಾರ್ವಜನಿಕ ಸಂಬಂಧಗಳಿಗೆ ಒತ್ತು ನೀಡಿದವರು.ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜನಾನುರಾಗಿಯಾಗಿದ್ದಾರೆ.
ಬೆಂಗಳೂರು ನಗರದ ಸಂಚಾರ ವಿಭಾಗದಲ್ಲಿ ಸುಮಾರು 3 ವರ್ಷಗಳ ಕಾಲ ಜಾಯಿಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸಿ ವಿನೂತನ ಸಂಚಾರ ವ್ಯವಸ್ಥೆ ಹಾಗೂ ಆಧುನಿಕ ತಂತ್ರಜ್ಞಾನದ ಮೂಲಕ ಬದಲಾವಣೆ ತರುವಲ್ಲಿಯೂ ಸಹ ಯಶಸ್ವಿಯಾಗಿರುತ್ತಾರೆ.
ಕರ್ನಾಟಕದ ಮದ್ಯ ಭಾಗದ ಪೂರ್ವ ವಲಯದ ನೂತನ ಐಜಿಪಿ ಆಗಿ ಪದಗ್ರಹಣ ಮಾಡಿರುವ ಡಾ.ರವಿಕಾಂತೇಗೌಡರಿಗೆ ಮನದಾಳದಿಂದ ಶುಭ ಕೋರುತ್ತೇನೆ ಎಂದಿದ್ದಾರೆ.