ಶಿವಮೊಗ್ಗ: ಲೋಕಸಭೆ ಚುನಾವಣೆ ಫಲಿತಾಂಶದ ಮತ ಎಣಿಕೆ ಯಾವುದೇ ತೊಂದರೆ ಅಡ್ಡಿ ಇಲ್ಲದೇ ಸುಗಮವಾಗಿ ನಡೆಯಿತು. ಇಂದು ಬೆಳಗ್ಗೆ ನಗರದ ಸಹ್ಯಾದ್ರಿ ಕಾಲೇಜ್ ನಲ್ಲಿ ಬೆಳಗ್ಗೆ ಸ್ಟ್ರಾಂಗ್ ರೂಂ ಬಾಗಿಲು ತೆರೆದು ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಸಲಾಯಿತು. ನಂತರ ಇವಿಎಂ ಮತಗಳ ಎಣಿಕೆ ಆರಂಭವಾಯಿತು. ಸಹ್ಯಾದ್ರಿ ಕಾಲೇಜ್ ಮಾರ್ಗದಲ್ಲಿ ರಸ್ತೆ ಬಂದ್ ಮಾಡಿ ಭದ್ರತೆಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.
ಬೆಳಗ್ಗೆಯಿಂದಲೇ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು ಸಹ್ಯಾದ್ರಿ ಕಾಲೇಜ್ ಬಳಿ ನೆರೆದಿದ್ದರು. ಆರಂಭಿಕ ಸುತ್ತುಗಳಿಂದಲೂ ರಾಘವೇಂದ್ರ ಮುನ್ನಡೆ ಗಳಿಸುತ್ತಿದ್ದಂತೆ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.
ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರೆ ವಿರಳವಾಗಿದ್ದ ಕಾಂಗ್ರೆಸ್ ಕಾರ್ಯಕರ್ತರು ಗೀತಾ ಶಿವರಾಜ್ ಕುಮಾರ್ ಹಿನ್ನಡೆ ಅನುಭವಿಸುತ್ತಿದ್ದಂತೆ ಸ್ಥಳದಿಂದ ತೆರಳಿದರು.ಮತ ಎಣಿಕೆ ಕೇಂದ್ರಕ್ಕೆ ರಾಘವೇಂದ್ರ ಹಾಗೂ ಬಿಜೆಪಿ ನಾಯಕರು ಭೇಟಿ ನೀಡಿದ್ದರು. ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಆಗಲಿ, ಸಚಿವ ಮಧು ಬಂಗಾರಪ್ಪ ಅವರು ಕಾಣಿಸಿಕೊಳ್ಳಲಿಲ್ಲ.