
ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬಂದ ನಂತರ ಶಿಕ್ಷಣ ಇಲಾಖೆಯಲ್ಲಿ ಹಲವಾರು ತಪ್ಪು ನಿರ್ಣಯಗಳನ್ನು ಕೈಗೊಂಡು ಶಿಕ್ಷಣ ವ್ಯವಸ್ಥೆಯನು ಸಂಪೂರ್ಣವಾಗಿ ಹಾಳು ಮಾಡಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರದ ವಿಧಾನ ಪರಿಷತ್ತು ಸದಸ್ಯ ಸಿದ್ದಲಿಂಗಪ್ಪ ವಿ.ಸುಂಕನೂರ ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇದಕ್ಕೆ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವದ ಕೂಡ ಕಾರಣಿಕರ್ತರಾಗಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕೈಕೊಳ್ಳಲಾದ ಕೆಲವೊಂದು ತಪ್ಪು ನಿರ್ಣಯಗಳಿಂದ ಶಿಕ್ಷಣದ ಗುಣಮಟ್ಟ ಕುಸಿದಿದೆ ಎಂದು ಆರೋಪಿಸಿದರು.
ಅಧಿಕಾರವಹಿಸಿಕೊಂಡ ಜೂನ್ ಮೊದಲ ತಿಂಗಳಿನಿಂದಲೇ ಅನಾವಶ್ಯಕವಾಗಿ ಹಿಂದೆ ಇದ್ದ ಶಾಲಾ ಪಠ್ಯಕ್ರಮ ಬದಲಾವಣೆ ಮಾಡುವ ಕುರಿತು ಸರ್ಕಾರವು ಬಿಜೆಪಿ ವಿರುದ್ಧ ದ್ವೇಷದ ನಿರ್ಣಯ ಕೈಕೊಂಡಿತು. ಎನ್.ಇ.ಪಿ ರದ್ದುಪಡಿಸಿ ಎಸ್.ಇ.ಪಿ ಜಾರಿ ಮಾಡಿದ್ದು ಕೂಡ ರಾಜಕೀಯ ಪ್ರೇರಿತವಾದ ನಿರ್ಣಯವಾಗಿದೆ ಎಂದು ಹೇಳಿದರು.


ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಗೆ 3 ಪರೀಕ್ಷೆಗಳನ್ನು ನಡೆಸುವ ತಪ್ಪು ನಿರ್ಧಾರ ಕೈಗೊಂಡಿದ್ದು, ಮಾರ್ಚ, ಎಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಡೆದಿರುವ ಅವಾಂತರಗಳು ಫಲಿತಾಂಶದ ಹಿನ್ನಡೆಗೆ ಕಾರಣ ಆಗಿದೆ. 5, 8, 9 ಹಾಗೂ 11 ನೇ ತರಗತಿಗಳಿಗೆ ಇಲಾಖೆಯಿಂದಲೇ ಪರೀಕ್ಷೆ ನಡೆಸಬೇಕೆಂಬ ನಿರ್ಧಾರವನ್ನು ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಯಿತು ಎಂದರು.
ಇಷ್ಟೆಲ್ಲ ಲೋಪದೋಷಗಳು ಆಗಲು ಶಿಕ್ಷಣ ಸಚಿವ ಮಧು ಬಂಗಾರಪ್ಪ, ಇಲಾಖೆಯ ಆಗು ಹೋಗುಗಳ ಬಗ್ಗೆ ಕಿಂಚಿತ್ತು ಕಾಳಜಿ ತೋರದೇ ನಿರ್ಲಕ್ಷ್ಯ ಭಾವನೆ ತೋರಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಒಟ್ಟಾರೆ ಆಡಳಿತ ನಡೆಸುವಲ್ಲಿ ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಹಳ ಮುಖ್ಯವಾಗಿ ಎಪ್ರಿಲ್ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಹಾಗೂ ತಪ್ಪಿಸ್ಥರ ಮೇಲೆ ಕ್ರಮ ಕೈಕೊಳ್ಳಬೇಕು. ಇದಲ್ಲದೇ 5, 8, 9 ಹಾಗೂ 11 ನೇ ತರಗತಿಗಳ ಪರೀಕ್ಷೆ ನಿರ್ವಹಿಸುವಲ್ಲಿ ಆಗಿರುವ ಲೋಪದೋಷಗಳ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಅಧಿಕಾರಿಗಳ ಸಮಿತಿ ರಚನೆ ಆಗಬೇಕೆಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.
ಸುದ್ದಿಗೋಷ್ಟಿಯಲ್ಲಿ ಈಶಾನ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ್ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ, ಯಶವಂತ ರಾವ್ ಜಾಧವ್, ಹೆಚ್.ಎನ್.ಶಿವಕುಮಾರ್, ಧನಂಜಯ ಕಡ್ಲೇಬಾಳು, ಸಂತೋಷ, ಸಂಜು, ಹೆಚ್.ಪಿ.ವಿಶ್ವಾಸ್, ಮಂಜುನಾಥ್ ಇತರರು ಇದ್ದರು.

