ದಾವಣಗೆರೆ: ವಿದ್ಯುತ್ ಸ್ಪರ್ಶದಿಂದ ಬಾಲಕನೋರ್ವ ಮೃತಪಟ್ಟ ಘಟನೆ ಜರುಗಿದೆ. ವಿಜಯನಗರ ಬಡಾವಣೆಯ ನಿವಾಸಿ ಸವಿತಾ ಸಮಾಜದ ಶಾಂತಕುಮಾರ್ ಎಂಬುವರ ಪುತ್ರ ಹೇಮಂತ್ ಕುಮಾರ್ (12) ಮೃತ ಬಾಲಕನಾಗಿದ್ದಾನೆ. ಗಂಗಾವತಿಯ ಅಜ್ಜಿಯ ಮನೆಯಲ್ಲಿ ಸ್ನಾನಕ್ಕೆಂದು ಹಾಕಿದ್ದ ಗೀಸರ್ ನಿಂದ ವಿದ್ಯುತ್ ಸ್ಪರ್ಶದಿಂದ ಬಾಲಕ ಮೃತಪಟ್ಟಿದ್ದಾನೆ.
ದೇವರಾಜ್ ಅರಸು ಬಡಾವಣೆಯ ‘ಸಿ’ ಬ್ಲಾಕಿನಲ್ಲಿನ ಸರ್ಕಾರಿ ಶಾಲೆಯಲ್ಲಿ ಬಾಲಕ ಆರನೇ ತರಗತಿ ತೇರ್ಗಡೆ ಹೊಂದಿದ್ದು ಏಳನೇ ತರಗತಿಗೆ ಪ್ರವೇಶ ಮಾಡಬೇಕಿತ್ತು. ಶಾಲೆ ರಜೆ ಇರುವುದರಿಂದ ಅಜ್ಜಿಯ ಊರಾದ ಗಂಗಾವತಿಗೆ ತಂಗಿಯ ಜತೆಗೆ ಹೋಗಿದ್ದು ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಘಟನೆ ಜರುಗಿದ್ದು ಚಿಕಿತ್ಸೆ ಫಲಿಸದೇ ಬಾಲಕ ಮೃತಪಟ್ಟಿದ್ದಾನೆ.
ಕುಟುಂಬಸ್ಥರು ಬಾಲಕ ಮೃತ ದೇಹವನ್ನು ದಾವಣಗೆರೆ ನಿವಾಸಕ್ಕೆ ತಂದಿದ್ದು ಮೃತ ಬಾಲಕನ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ. ಏ.18 ರಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಬಾಲಕನ ಅಕಾಲಿಕ ಸಾವಿಗೆ ದಾವಣಗೆರೆ ಸವಿತಾ ಸಮಾಜದ ಭಾಂದವರು ಸಂತಾಪ ಸೂಚಿಸಿದ್ದಾರೆ.