ಭದ್ರಾವತಿ: ಬಿಜೆಪಿ ಆಡಳಿತಕ್ಕೆ ಬಂದ ಬಳಿಕ ವಿಐಎಸ್ ಎಲ್ ಕಾರ್ಖಾನೆ ಬಾಗಿಲು ಮುಚ್ಚುವ ಸ್ಥಿತಿಗೆ ತಂದಿದ್ದಾರೆ. 15 ವರ್ಷದ ಆಡಳಿತ ನಡೆಸಿದ ಸಂಸದ ಬಿ.ವೈ. ರಾಘವೇಂದ್ರ ಅವರ ಕೊಡುಗೆ ಎಂದು ಸಚಿವ ಮಧುಬಂಗಾರಪ್ಪ ಹೇಳಿದರು.

ತಾಲ್ಲೂಕಿನ ಹಿರಿಯೂರು ಜಿ ಪಂ ವ್ಯಾಪ್ತಿಯ ಅಂತರಗಂಗೆ, ಬಾರಂದೂರು, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೀತಕ್ಕಗೆ ಮತ ನೀಡಿ ಆರಿಸಬೇಕು ಎಂದು ನುಡಿದರು.

ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ವಿರುವ ಹಾಗೇ ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿ ಆಗಲಿದೆ.ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ತಮ್ಮನ್ನು ಕ್ಷೇತ್ರಕ್ಕೆ ನಾಲ್ಕು ಬಾರಿ ಶಾಸಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದೀರ. ಅದೇ ರೀತಿ, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೂ ಅವಕಾಶ ಮಾಡಿಕೊಡಿ ಎಂದು ಕೋರಿದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಮಾತನಾಡಿ, ಇಲ್ಲಿ ಬಿಜೆಪಿ ನಾಯಕರು ದೇವರ ಹೆಸರಲ್ಲಿ ಮತಯಾಚನೆಗೆ ಮುಂದಾಗಿದ್ದಾರೆ. ಇದು ತಪ್ಪು, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರು ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡುವ ಮೂಲಕ, ಸಾಮಾನ್ಯ ಜನರು ಉಸಿರಾಡುವಂತಹ ವಾತಾವರಣ ಸೃಷ್ಟಿಸಿ ಹೋಗಿದ್ದಾರೆ. ಅದರ ಋಣ ತೀರಿಸಲು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಮತ ನೀಡಿ ಆಶೀರ್ವದಿಸಬೇಕು. ಬಿಜೆಪಿ ಪಕ್ಷವನ್ನು ನಂಬಿಕೊಂಡರೆ, ಬಡವರಿಗೆ ಆಶಾಕಿರಣ ವಾಗಿರುವ ಅನೇಕ ಯೋಜನೆಗಳಿಗೆ ಬಿಜೆಪಿಯಿಂದ ಪೆಟ್ಟು ಬೀಳಲಿದೆ ಎಂದರು.

ವಿಐಎಸ್‌ಎಲ್‌ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ: ಗೀತಾ ಶಿವರಾಜಕುಮಾರ್

ಶಾಸಕ ಬಿ.ಕೆ.ಸಂಗಮೇಶ್ ಅವರ ಬೆಂಬಲ ದಿಂದ ಚುನಾವಣೆ ಕಣಕ್ಕೆ ಆನೆ ಬಲ ಬಂದಂತಿದೆ. ಇಲ್ಲಿನ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗೆ ಜೀವ ತುಂಬಬೇಕು ಎನ್ನುವುದು ಸ್ಥಳೀಯರ ದಶಕದ ಆಗ್ರಹವಿದೆ. ಇಲ್ಲಿ ವಿಐಎಸ್‌ಎಲ್‌ ಅಸಂಖ್ಯಾತ ಕಾರ್ಮಿಕರಿಗೆ ಉದ್ಯೋಗ ಹಾಗೂ ಲಕ್ಷಾಂತರ ಮಂದಿಗೆ ಅನ್ನಕೊಟ್ಟ ಸಂಸ್ಥೆ. ಇದನ್ನು ಯಾವ ಕಾರಣಕ್ಕೂ ಮುಚ್ಚಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ ಕುಮಾರ್ ಭರವಸೆ ನೀಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಕುಮಾರ್ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಶೂನ್ಯ. ಭದ್ರಾವತಿ ತಾಲ್ಲೂಕಿಗೆ ಮಲತಾಯಿ ಧೋರಣೆ ಮಾಡಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ರಾಘವೇಂದ್ರ ಮತದಾರರ ಎದುರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಇದಕ್ಕೆ ಜನರು ಕರಗಬಾರದು ಎಂದರು.

ಅಂತರಗಂಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮಾತನಾಡಿದರು. ಕರ್ನಾಟಕ ರಾಜ್ಯ ಸಾಂಬಾರು ಪದಾರ್ಥ ಅಭಿವೃದ್ದಿ ಮಂಡಳಿಯ ಅಧ್ಯಕ್ಷೆ ಜಿ.ಪಲ್ಲವಿ, ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷೆ ಬಲ್ಕೀಷ್ ಬಾನು,
ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ನಟ ಶಿವರಾಜಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಣಿಶಂಕರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ, ನಗರ ಸಭೆ ಸದಸ್ಯ ಬಿ.ಕೆ.ಮೋಹನ್, ಕಾಂಗ್ರೆಸ್ ಮುಖಂಡ ಬಿ.ಎಸ್.ಗಣೇಶ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಷಡಾಕ್ಷರಿ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.

Share.
Leave A Reply

Exit mobile version