ವಕ್ಪ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜನ ಜಾಗೃತಿ ಆಂದೋಲನ , ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನೇತೃತ್ವದ ಒಂದು ತಂಡ, ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ

ದಾವಣಗೆರೆ.

; ವಕ್ಪ್ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಇದೇ 22ರಂದು ಜಿಲ್ಲಾಧಿಕಾರಿಗಳ ಕಚೇರಿ (ಎ.ಸಿ. ಕಚೇರಿ) ಮುಂಭಾಗದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಶೀರ್ಷಿಕೆಯಡಿ ಜನಜಾಗೃತಿ ಆಂದೋಲನ ಹೋರಾಟ ನಡೆಸಲಾಗುವುದು ಅಲ್ಲದೇ ಅಹವಾಲು ಸ್ವೀಕಾರ ಮಾಡಲಿದ್ದೇವೆ ಎಂದು ಬಿಜೆಪಿ ಮುಖಂಡರಾದ ಬಿ.ಎಂ ಸತೀಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೋಷಣೆಗೆ ಒಳಗಾದ ಸಹಸ್ರಾರು ಸಂಖ್ಯೆಯ ಸಾರ್ವಜನಿಕರು, ರೈತರನ್ನು ಅಂದು ಬೆಳಿಗ್ಗೆ 10:00ರಿಂದ ಸಂಜೆ 5:00ತನಕ ವೇದಿಕೆಗೆ ಬರಮಾಡಿಕೊಂಡು ಅಹವಾಲು ಸ್ವೀಕರಿಸುತ್ತೇವೆ.

ಸಮಸ್ಯೆಯ ಗಂಭೀರತೆಯನ್ನು ಜಿಲ್ಲಾವಾರು ಪರಾಮರ್ಶೆ ಮಾಡುತ್ತೇವೆ. 3 ತಂಡಗಳನ್ನು ರಾಜ್ಯಾಧ್ಯಕ್ಷರು ಈಗಾಗಲೇ ಪ್ರಕಟಿಸಿದ್ದಾರೆ.

ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನೇತೃತ್ವದ ಒಂದು ತಂಡ, ವಿಪಕ್ಷ ನಾಯಕರಾದ ಆರ್.ಅಶೋಕ್, ವಿಧಾನಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ನೇತೃತ್ವದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತವೆ. ಈ ಮೂರು ತಂಡಗಳು ಡಿಸೆಂಬರ್ ಮೊದಲ ವಾರದಿಂದ ರಾಜ್ಯಾದ್ಯಂತ ಪ್ರತಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದೆ.

ರೈತರು, ಮಠ, ಮಾನ್ಯಗಳು ಮತ್ತು ಸಾರ್ವಜನಿಕರ ಸಮಸ್ಯೆಯನ್ನು ಆಲಿಸಲಿದೆ. ಅವರ ಸಮಸ್ಯೆಯನ್ನು ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇವೆ ಹಾಗೂ ನೈಜ ವರದಿಯನ್ನು ತರಲಿದ್ದೇವೆ. ಕೇಂದ್ರದ 3 ಸಚಿವರು, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರು ಸೇರಿ ಪ್ರಮುಖ ನಾಯಕರು ಇರುವ ಪ್ರತಿ ತಂಡವು ಕನಿಷ್ಠ 8-10 ಜಿಲ್ಲೆಗಳನ್ನು ಪ್ರವಾಸ ಮಾಡಲಿದೆ.

ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸದನದಲ್ಲಿ ವಾಸ್ತವಿಕ ಸಮಸ್ಯೆಗಳ ಕಡೆ ಬೆಳಕು ಚೆಲ್ಲುವ ಕೆಲಸ ಮಾಡಲಿದೆ. ಬೆಳಗಾವಿ ಅಧಿವೇಶನದ ವೇಳೆ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆಯನ್ನೂ ಆಯೋಜಿಸುತ್ತೇವೆ. 50ರಿಂದ 60 ಸಾವಿರ ಸಾರ್ವಜನಿಕರು, ರೈತರನ್ನು ಸೇರಿಸಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಏರ್ಪಡಿಸುತ್ತೇವೆ.

ಪ್ರತಿ ಜಿಲ್ಲೆ, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ವಕ್ಸ್ ಸಮಸ್ಯೆಗಳನ್ನು ಆಲಿಸುತ್ತಿದ್ದೇವೆ. ವಕ್ಪ್ ಆಸ್ತಿ ಸಂಬಂಧ ಇಡೀ ರಾಜ್ಯದಲ್ಲಿ ಸಮಸ್ಯೆ ಎದುರಾಗಿದೆ. ಆ ಸಮಸ್ಯೆಗೆ ತಾರ್ಕಿಕ ಅಂತ್ಯ ಹುಡುಕುವ ನಿಟ್ಟಿನಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ನೇತೃತ್ವದಲ್ಲಿ ಕಳೆದ ಹತ್ತಾರು ದಿನಗಳಿಂದ ಪಕ್ಷದೊಳಗೆ ಆಂತರಿಕ ಚರ್ಚೆ ನಡೆಸಿ ವ್ಯವಸ್ಥಿತವಾಗಿ ಜನರನ್ನು ಮುಟ್ಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿ ಜಿಲ್ಲೆಯಲ್ಲೂ 5 ಜನರ ತಂಡ ರಚಿಸಲಾಗಿದೆ, ಪ್ರತಿ ತಂಡದಲ್ಲಿ ಒಬ್ಬರು ವಕೀಲರೂ ಕೂಡ ಇದ್ದಾರೆ.

ಕಾನೂನಾತ್ಮಕ ಹೋರಾಟಕ್ಕೆ ಶಕ್ತಿ ತುಂಬುವ ಸಲುವಾಗಿ . ತಂಡ ರಚಿಸಲಾಗಿದೆ. ‘ನಮ್ಮ ಭೂಮಿ- ನಮ್ಮ ಹಕ್ಕು’ ಶೀರ್ಷಿಕೆಯ ಅಡಿಯಲ್ಲಿ ಪ್ರತಿ ಜಿಲ್ಲೆಯಲ್ಲಿ ಮಠಾಧಿಶರೂ ಸೇರಿದಂತೆ ಜಿಲ್ಲೆಯ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡಂತೆ ಎಲ್ಲರನ್ನೂ ಭೇಟಿ ಮಾಡುವುದರ ಮೂಲಕ ಜನಜಾಗೃತಿ ಮೂಡಿಸುತ್ತಿದ್ದೇವೆ. ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಲೋಕಿಕೆರೆ ನಾಗರಾಜ್,ಬಿ.ಜಿ ಅಜಯ್ ಕುಮಾರ್,ಹೆಚ್.ಪಿ ವಿಶ್ವಾಸ್ ಮತ್ತಿತರರಿದ್ದರು

Share.
Leave A Reply

Exit mobile version