ಶಿವಮೊಗ್ಗ: 2014ರಲ್ಲಿ ನಡೆದ ಡಿಸಿಸಿ ಬ್ಯಾಂಕ್‍ನಲ್ಲಿ ನಡೆದ ನಕಲಿ ಬಂಗಾರ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ( ಇ.ಡಿ. ) ಅಧಿಕಾರಿಗಳು ಶಿವಮೊಗ್ಗ ಮತ್ತು ಭದ್ರಾವತಿಯ 8ಕಡೆ ದಾಳಿ ನಡೆಸಿದರು.

ಹಗರಣದ ಕೇಂದ್ರ ಬಿಂದು ಹಾಗೂ ಗಾಂಧಿಬಜಾರ್‍ ಡಿಸಿಸಿ ಬ್ಯಾಂಕ್ ಶಾಖಾ ಮ್ಯಾನೇಜರ್ ಆಗಿದ್ದ ಶೋಭಾ ಅವರ ನಿವಾಸ, ಚಾಲಕರಾಗಿದ್ದ ಕಾಮಾಕ್ಷಿ ಬೀದಿಯ ಶಿವಕುಮಾರ್ ಮನೆ, ಭದ್ರಾವತಿ ಜೆಡಿಕಟ್ಟೆಯಲ್ಲಿರುವ ಡಿಸಿಸಿ ಬ್ಯಾಂಕ್ ಸಿಬ್ಬಂದಿ, ಮಾಡ್ರನ್ ಚಲನಚಿತ್ರ ಮಂದಿರ ಬಳಿಯಿರುವ ಡಿಸಿಸಿ ಬ್ಯಾಂಕ್ ಶಾಖೆ ಸೇರಿದಂತೆ 8 ಕಡೆ ದಾಳಿ ನಡೆದಿದೆ.

ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಮ್ಯಾನೇಜರ್ ಆಗಿದ್ದ ನಾಗಭೂಷಣ, ಗೋಪಾಲ ಗೌಡ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಶೋಭಾ ಅವರ ಮನೆಯ ಮೇಲೆ ಬೆಂಗಳೂರಿನಿಂದ ಇಡಿ ಕಚೇರಿಯ ತಂಡದಿಂದ ದಾಳಿ ನಡೆದಿದೆ. ಡಿಸಿಸಿ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ- ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಪ್ರತ್ಯೇಕ ವಾಹನಗಳಲ್ಲಿ ಆಗಮಿಸಿರುವ 96 ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿತ್ತು.

2018ರಲ್ಲಿ ಹಣ ದುರ್ಬಳಕೆ ಆರೋಪ , ಪ್ರಕರಣ ದಾಖಲು

ಕೋಟ್ಯಂತರ ರೂ ಹಣ ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ 2018 ರಲ್ಲಿ ಡಿಸಿಸಿ ಬ್ಯಾಂಕ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಆ ಸಂದರ್ಭದಲ್ಲಿ ಮಂಜುನಾಥ ಗೌಡ ಅವರನ್ನು ಎಸಿಬಿ ಬಂಧನ ಮಾಡಿತ್ತು. ಆದರೆ ಚಾರ್ಜ್ ಶೀಟ್ ಲ್ಲಿ ಮಂಜುನಾಥ್ ಗೌಡ ಹೆಸರನ್ನು ಕೈಬಿಡಲಾಗಿತ್ತು. ಬಳಿಕ ಇಡಿ ಇಸಿಐಆರ್ ದಾಖಲು ಮಾಡಿ ತನಿಖೆ ನಡೆಸಲು ಮುಂದಾಗಿತ್ತು.ಇಡಿ ತನಿಖೆಗೆ ಮುಂದಾಗುತ್ತಿದ್ದಂತೆ ಮಂಜುನಾಥ್ ಗೌಡ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಇಡಿ  ಕಾನೂನು ಹೋರಾಟದ ಬಳಿಕ ಹೈಕೋರ್ಟ್ ತಡೆಯಾಜ್ಞೆ ತೆರವು ಮಾಡಿತ್ತು.

ಡಿ.ಕೆ.ಶಿವಕುಮಾರ್ ಆಪ್ತ ಕೂಡ ಹೌದು

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪ್ರಭಾವಿ ರಾಜಕೀಯ ನಾಯಕ ಆರ್. ಎಂ. ಮಂಜುನಾಥ ಗೌಡ. ಕೆಜೆಪಿ, ಜೆಡಿಎಸ್ ಪಕ್ಷದಲ್ಲಿದ್ದರು. 2021ರಲ್ಲಿ ಕಾಂಗ್ರೆಸ್ ಸೇರಿದ್ದರು. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಪ್ತ ಬಳಗದ ನಾಯಕರಲ್ಲಿ ಇವರು ಸಹ ಒಬ್ಬರು.

ಏನಿದು ಪ್ರಕರಣ

1997 ರಿಂದ 2020ರ ತನಕ ಸುಮಾರು ಆರ್. ಎಂ. ಮಂಜುನಾಥ ಗೌಡ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಗಾಂಧಿ ಬಜಾರ್ ಶಾಖೆಯಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಸಾಲ ನೀಡಲಾಗಿದೆ ಎಂಬುದು ಆರೋಪ. ಈ ಹಗರಣ ಸುಮಾರು 63 ಕೋಟಿ ರೂ.ಗಳದ್ದು ಎಂದು ಅಂದಾಜಿಸಲಾಗಿದೆ

2014ರಲ್ಲಿ ಈ ಕುರಿತು ದೂರು ದಾಖಲಾಗಿ ವಿಚಾರಣೆ ಪ್ರಾರಂಭವಾಯಿತು. 2021ರಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು. ಆದರೆ ಎಸಿಬಿ ತನಿಖೆಯಲ್ಲಿ ಮಂಜುನಾಥ ಗೌಡರ ಹೆಸರು ಕೈ ಬಿಡಲಾಗಿತ್ತು. ಆದರೆ ಇಡಿ ಇಸಿಐಆರ್‌ ದಾಖಲು ಮಾಡಿಕೊಂಡು ತನಿಖೆ ನಡೆಸಲು ಮುಂದಾಗಿತ್ತು. ಅಲ್ಲದೇ ಆರ್. ಎಂ. ಮಂಜುನಾಥ ಗೌಡರಿಗೆ ಸಮನ್ಸ್ ಸಹ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ಮಾರ್ಚ್ 28ರಂದು ಹೈಕೋರ್ಟ್‌ ಮಂಜುನಾಥ ಗೌಡರ ಅರ್ಜಿ ವಜಾಗೊಳಿಸಿತ್ತು. ಇಡಿ ವಿಚಾರಣೆಗೆ ಇದ್ದ ಕಾನೂನು ತಡೆಯನ್ನು ತೆರವು ಮಾಡಿದ್ದು ಇತಿಹಾಸ.

Share.
Leave A Reply

Exit mobile version